ADVERTISEMENT

ಶಿರಸಿ: ರೈತರ ಪಾಲಿಗೆ ದೂರವಾದ ‘ಸಂಜೀವಿನಿ’

ಭೌಗೋಳಿಕವಾಗಿ ವಿಸ್ತಾರವಾದ ಜಿಲ್ಲೆಗೆ ಎರಡೇ ವಾಹನ

ಗಣಪತಿ ಹೆಗಡೆ
Published 29 ಮೇ 2022, 22:30 IST
Last Updated 29 ಮೇ 2022, 22:30 IST
ಕೃಷಿ ಸಂಜೀವಿನಿ ವಾಹನ
ಕೃಷಿ ಸಂಜೀವಿನಿ ವಾಹನ   

ಶಿರಸಿ: ಭೌಗೋಳಿಕವಾಗಿ ವಿಸ್ತಾರವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಕೇವಲ ಎರಡು ಮಾತ್ರ ‘ಕೃಷಿ ಸಂಜೀವಿನಿ’ ಸಂಚಾರಿ ಪ್ರಯೋಗಾಲಯ ನೀಡಲಾಗಿದೆ. ಇದರಿಂದ ರೈತರಿಗೆ ಸಕಾಲಕ್ಕೆ ಸೇವೆ ಒದಗಿಸುವುದು ಸವಾಲಾಗುತ್ತಿದೆ.

ರೈತರ ಮನೆ ಬಾಗಿಲಿಗೆ ತೆರಳಿ ಮಣ್ಣಿನ ಫಲವತ್ತತೆ, ರಸಗೊಬ್ಬರ ಗುಣಮಟ್ಟ ಪರೀಕ್ಷೆ ನಡೆಸುವ ಜತೆಗೆ ಕೃಷಿ ಚಟುವಟಿಕೆ ಕುರಿತು ರೈತರಿಗೆ ಸೂಕ್ತ ಸಲಹೆ ನೀಡಲು ಕೃಷಿ ಇಲಾಖೆ ಕಳೆದ ವರ್ಷದಿಂದ ‘ಕೃಷಿ ಸಂಜೀವಿನಿ’ ಯೋಜನೆ ಜಾರಿಗೆ ತಂದಿದೆ.

ಮಳೆ, ತೇವಾಂಶ, ಮಣ್ಣು, ನೀರು, ಕೀಟಬಾಧೆ, ರೋಗ ಸೇರಿದಂತೆ ಇತರೆ ತಾಂತ್ರಿಕ ನೆರವು ಕೂಡ ಪಡೆಯಬಹುದು. ಈ ವಾಹನದಲ್ಲಿ ಇರುವ ಕೃಷಿ ಹೆಲ್ತ್ ಕ್ಲಿನಿಕ್‌ ಮೂಲಕ ರೈತರ ಸಮಸ್ಯೆಗೆ ಪರಿಹಾರ ಒದಗಿಸುವುದು ಯೋಜನೆಯ ಉದ್ದೇಶ.

ADVERTISEMENT

ಪ್ರಾರಂಭಿಕ ಹಂತದಲ್ಲಿ ಪ್ರತಿ ಜಿಲ್ಲೆಗೆ ತಲಾ ಒಂದು ವಾಹನ ನೀಡಲಾಗಿತ್ತು. ಕೆಲವು ತಿಂಗಳ ಹಿಂದೆ ವಾಹನಗಳ ಸಂಖ್ಯೆ ಹೆಚ್ಚಿಸಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ವಾಹನ ನೀಡಲಾಗಿದೆ. ಆದರೆ ಕೃಷಿ ಪ್ರಧಾನವಾಗಿರುವ ಉತ್ತರ ಕನ್ನಡಕ್ಕೆ ಕೇವಲ ಒಂದು ವಾಹನ ನೀಡಲಾಗಿದ್ದು, ಈಚೆಗಷ್ಟೆ ಯಲ್ಲಾಪುರಕ್ಕೆ ಮತ್ತೊಂದು ವಾಹನ ಒದಗಿಸಲಾಗಿದೆ.

‘ರೈತರು ಸಹಾಯವಾಣಿ 155313 ಸಂಖ್ಯೆಗೆ ಉಚಿತ ಕರೆ ಮಾಡಿ ಸಮಸ್ಯೆ ತಿಳಿಸಿದರೆ ಅವರ ಕೃಷಿ ಜಮೀನಿಗೆ ತೆರಳಿ ವಾಹನವು ಮಣ್ಣಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುತ್ತದೆ. ತಕ್ಷಣವೇ ವರದಿಯನ್ನೂ ನೀಡಲಾಗುತ್ತದೆ. ಅಗತ್ಯಬಿದ್ದರೆ ಮಾತ್ರ ಪ್ರಯೋಗಾಲಯಕ್ಕೆ ಮಾದರಿ ರವಾನಿಸಲಾಗುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್.ನಟರಾಜ್.

‘ಕೃಷಿ ಸಂಜೀವಿನಿ ವಾಹನದಲ್ಲಿ ಡಿಪ್ಲೊಮಾ ಪದವೀಧರ ತಜ್ಞರೊಬ್ಬರು ಕಾಯಂ ಇರುತ್ತಾರೆ. ಅವರು ರಸಗೊಬ್ಬರ ಗುಣಮಟ್ಟ ಪರೀಕ್ಷೆ, ರಸಸಾರ, ಸಾವಯವ ಇಂಗಾಲ, ಬಿ.ಟಿ.ಹತ್ತಿ ಪರೀಕ್ಷೆಯನ್ನೂ ನಡೆಸಿ ರೈತರಿಗೆ ನೆರವಾಗುತ್ತಾರೆ. ಎಲ್ಲ ಸೇವೆಯೂ ಉಚಿತವಾಗಿದೆ’ ಎಂದು ತಿಳಿಸಿದರು.

‘ಸಹಾಯವಾಣಿಗೆ ಕರೆ ಮಾಡಿದರೆ ಜಮೀನಿಗೆ ಬರಲು ವಾರಗಟ್ಟಲೆ ಕಾಯಬೇಕಾಗುತ್ತದೆ. ವಿಚಾರಿಸಿದರೆ ಒಂದೇ ವಾಹನ ಇದೆ ಎಂಬ ಉತ್ತರ ಸಿಗುತ್ತದೆ. ಕರಾವಳಿ ಭಾಗದ ತಾಲ್ಲೂಕುಗಳಿಗೂ ಅನುಕೂಲವಾಗುವಂತೆ ವಾಹನಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಕಡ್ನೀರು ಗ್ರಾಮದ ರೈತ ಸತೀಶ್ ಒತ್ತಾಯಿಸಿದರು.

****

ಎರಡು ವಾಹನ ಇದ್ದರೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಬರುವ ದೂರುಗಳಿಗೆ ಸ್ಪಂದಿಸಲು ಪ್ರಯತ್ನಿಸಲಾಗುತ್ತಿದೆ. ಹೆಚ್ಚು ವಾಹನದ ಬೇಡಿಕೆಯನ್ನೂ ಇಡಲಾಗಿದೆ.

ಟಿ.ಎಚ್.ನಟರಾಜ್, ಕೃಷಿ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.