ಶಿರಸಿ: ಶಾಲೆಯ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಸೇರಿ ಸಂಭಾವ್ಯ ದುರ್ಘಟನೆ ತಪ್ಪಿಸಲು ಶಿಕ್ಷಣ ಇಲಾಖೆಯು 24 ಅಂಶಗಳನ್ನೊಳಗೊಂಡ ಮಾರ್ಗಸೂಚಿ ಹೊರಡಿಸಿದ್ದು, ಇದು ಮುಖ್ಯಶಿಕ್ಷಕರ ಕಾರ್ಯದೊತ್ತಡ ಹೆಚ್ಚಿಸಿದೆ. ಗುಡ್ಡಗಾಡು ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಸಮಸ್ಯೆಗೂ ಕಾರಣವಾಗಲಿದೆ ಎಂಬುದು ಮುಖ್ಯ ಶಿಕ್ಷಕರ ಅಳಲು.
‘ಶಾಲೆಯ ಆವರಣ ಮತ್ತು ಸುತ್ತಲಿನ ಸುರಕ್ಷತೆ, ಪ್ರವೇಶ ದ್ವಾರ, ಕಾಂಪೌಂಡ್, ಕೊಠಡಿಗಳ ಪರಿಶೀಲನೆ, ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ಲಭ್ಯತೆ, ಕುಡಿಯುವ ನೀರಿನ ಗುಣಮಟ್ಟ, ತುರ್ತು ಸ್ಥಿತಿಗೆ ಸನ್ನದ್ದತೆ, ಶಾಲೆ ಬಳಿ ಹಾದು ಹೋಗಿರುವ ಸಡಿಲವಾಗಿ ನೇತಾಡುವ ಕೇಬಲ್‌ಗಳು ಮತ್ತು ವಿದ್ಯುತ್ ತಂತಿಗಳ ಕುರಿತು ನಿತ್ಯ ಮಾಹಿತಿ ನೀಡಬೇಕು’ ಎಂದು ಎಲ್ಲ ಮುಖ್ಯ ಶಿಕ್ಷಕರಿಗೆ ಆ.4 ರಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.
ಬಿಸಿಯೂಟದ ಮೇಲ್ವಿಚಾರಣೆ ಮಾಡಲಾಗುತ್ತಿರುವ ಬಗ್ಗೆ, ಗ್ಯಾಸ್ ಸಿಲಿಂಡರ್ ಸೋರಿಕೆಯಾಗದಂತೆ ಕೈಗೊಂಡ ಸುರಕ್ಷತಾ ಕ್ರಮ, ಆಹಾರ ಧಾನ್ಯಗಳ ಪರಿಶೀಲನೆ, ಅನಧಿಕೃತ ವ್ಯಕ್ತಿಗಳ ಪ್ರವೇಶ ತಡೆಗಟ್ಟುವ ಬಗ್ಗೆ, ಮಕ್ಕಳ ಹಾಜರಾತಿ, ಗೈರು ಹಾಜರಾದ ಮಕ್ಕಳ ಬಗ್ಗೆ ಪೋಷಕರಿಗೆ ಮೆಸೇಜ್ ಕಳುಹಿಸುವುದು, ಮಕ್ಕಳ ಸುರಕ್ಷತೆ ಮತ್ತು ಮೇಲ್ವಿಚಾರಣೆ, ತರಗತಿ ವೇಳಾಪಟ್ಟಿಯಂತೆ ಶಿಕ್ಷಕರ ನಿಯೋಜನೆ, ಮಕ್ಕಳ ಆರೋಗ್ಯ, ಸೂಚನಾ ಫಲಕದಲ್ಲಿ ಅಗತ್ಯ ಸೂಚನೆ ನೀಡುವುದು ಸೇರಿ ಒಟ್ಟು 24 ಅಂಶಗಳ ಬಗ್ಗೆ ಶಾಲೆಯ ಮುಖ್ಯಶಿಕ್ಷಕರು ಮಾಹಿತಿ ದಾಖಲಿಸಬೇಕಿದೆ.
‘24 ಅಂಶಗಳಲ್ಲಿ ಕೆಲವನ್ನು ನಿತ್ಯವೂ ಪರಿಶೀಲಿಸುವ ಅಗತ್ಯ ಬೀಳುವುದಿಲ್ಲ. ಈಗಾಗಲೇ ಬಹುತೇಕ ಅಂಶಗಳನ್ನು ಗಮನಿಸಲಾಗುತ್ತಿದೆ. ಆದರೆ ಈಗ ಎಲ್ಲ ಅಂಶಗಳ ಬಗ್ಗೆ ಬರದು ದಾಖಲೆ ನೀಡಬೇಕು. ಗುಡ್ಡಗಾಡು ಜಿಲ್ಲೆಯಲ್ಲಿ ಹಲವು ಶಾಲೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ. ಅಂಥ ಕಡೆ ತರಗತಿಗೆ ಗೈರಾದ ಮಕ್ಕಳ ಬಗ್ಗೆ ಪೋಷಕರಿಗೆ ಸಂದೇಶ ಕಳುಹಿಸುವುದು ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಕಾರಣ ಹೇಳುವಂತಿಲ್ಲ. ನೆಟ್‌ವರ್ಕ್ ಸಿಗುವ ಕಡೆ ಹೋಗಿಯಾದರೂ ಅಪ್ಲೋಡ್ ಮಾಡಬೇಕು. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಮುಖ್ಯಶಿಕ್ಷಕರ ಕಾರ್ಯಭಾರ ಹೆಚ್ಚಿರುವ ನಡುವೆಯೇ ಈ ಮಾರ್ಗಸೂಚಿ ಇನ್ನಷ್ಟು ಭಾರ ಏರುವಂತೆ ಮಾಡಿದೆ’ ಎಂದು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರು ಸಮಸ್ಯೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.