ADVERTISEMENT

ವೇತನದಿಂದ ಕಲಾಮಂದಿರ ನಿರ್ಮಿಸಿದ ಶಿಕ್ಷಕ

ಯಲ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ

ನಾಗರಾಜ ಮದ್ಗುಣಿ
Published 1 ಏಪ್ರಿಲ್ 2021, 19:30 IST
Last Updated 1 ಏಪ್ರಿಲ್ 2021, 19:30 IST
ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿ ಶಾಲೆಗೆ ತಾವು ನಿರ್ಮಿಸಿಕೊಟ್ಟ ‘ವಿದ್ಯಾಗಮ ಕಲಾಮಂದಿರ’ದ ಎದುರು ಶಿಕ್ಷಕ ರಾಮಚಂದ್ರ ಐ. ನಾಯ್ಕ
ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿ ಶಾಲೆಗೆ ತಾವು ನಿರ್ಮಿಸಿಕೊಟ್ಟ ‘ವಿದ್ಯಾಗಮ ಕಲಾಮಂದಿರ’ದ ಎದುರು ಶಿಕ್ಷಕ ರಾಮಚಂದ್ರ ಐ. ನಾಯ್ಕ   

ಯಲ್ಲಾಪುರ: ಪಟ್ಟಣದ ಗಣಪತಿ ಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ರಂಗಮಂದಿರ ನಿರ್ಮಾಣವಾಗಿದೆ. ಹಾನಿಯಾಗಿದ್ದ ಧ್ವಜದ ಕಟ್ಟೆ, ಆವರಣ ಗೋಡೆಯ ದುರಸ್ತಿಯಾಗಿದೆ. ಸುಣ್ಣ ಬಣ್ಣ ಕಂಡು ಕಂಗೊಳಿಸುತ್ತಿದೆ. ಅವುಗಳನ್ನು ಏ.2ರಂದು ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ.

ಇವೆಲ್ಲ ಸಾಧ್ಯವಾಗಿದ್ದು ಇದೇ ಶಾಲೆಯ ಒಬ್ಬರು ಶಿಕ್ಷಕರ ವೇತನದ ಹಣದಿಂದ. ಹೌದು, ಈ ಶಾಲೆಯ ಶಿಕ್ಷಕ ರಾಮಚಂದ್ರ ಐ.ನಾಯ್ಕ ಎಂಬುವವರು ತಮ್ಮ ವೇತನದ ಒಂದು ಭಾಗವನ್ನು ಶಾಲೆಯ ಅಭಿವೃದ್ಧಿಗೆ ಮೀಸಲಿಟ್ಟು ವ್ಯಯಿಸಿದ್ದಾರೆ.

‘ವಿದ್ಯಾಗಮ’ ಯೋಜನೆ ನೆನಪಿನಲ್ಲಿ ₹ 3 ಲಕ್ಷ ವೆಚ್ಚದಲ್ಲಿ ‘ವಿದ್ಯಾಗಮ ಕಲಾ ಮಂದಿರ’ ನಿರ್ಮಿಸಿದ್ದಾರೆ. ಶಾಲೆಯ ₹ 3 ಸಾವಿರಕ್ಕೆ ತಮ್ಮ ಕೊಡುಗೆಯ ₹ 16 ಸಾವಿರವನ್ನು ಸೇರಿಸಿ ಇತರ ಕೆಲಸಗಳನ್ನು ಮಾಡಿಸಿದ್ದಾರೆ.

ADVERTISEMENT

ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ ಗೋಸಾವಿ ಜನಾಂಗದ ಬಡ ಮಕ್ಕಳು ಈ ಶಾಲೆಯ ವಿದ್ಯಾರ್ಥಿಗಳು. 2019ರ ಆಗಸ್ಟ್‌ನಿಂದ ಲಾಕ್‌ಡೌನ್ ತೆರವಾಗುವ ತನಕವೂ ಸುಮಾರು 6,000 ಪೊಟ್ಟಣಗಳಷ್ಟು ಬೆಳಗ್ಗಿನ ಉಪಾಹಾರವನ್ನು ಅವರು ವಿತರಿಸಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ತಮ್ಮ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಬಾಳೆಹಣ್ಣನ್ನೂ ಹಂಚಿದ್ದರು. ಅವರ ಈ ಕಾರ್ಯವನ್ನು ಮಕ್ಕಳ ರಕ್ಷಣಾ ಆಯೋಗವೂ ಮೆಚ್ಚಿಕೊಂಡಿತ್ತು.

ಕಲಿಕೆಗೆ ನೆರವಾಗಲು ಪ್ರೊಜೆಕ್ಟರ್, ಪ್ರಿಂಟರ್, ಅಲ್ಲದೇ ಮಕ್ಕಳಲ್ಲಿ ಸಂವಹನ ಕೌಶಲವನ್ನು ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಮೈಕ್ ಮತ್ತು ಧ್ವನಿವರ್ಧಕ ಖರೀದಿಸಿದ್ದಾರೆ. ‘ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿಯ ಜೊತೆ ನೀಡಿದ ನಗದು ₹ 5 ಸಾವಿರವನ್ನು ಕೋವಿಡ್ ನಿಧಿಗೆ ನೀಡಿದ್ದಾರೆ. ಜನಜಾಗೃತಿ ಪರಿವಾರದ ಮೂಲಕ 16 ಚಿಂತನ ಸಭೆಗಳನ್ನು ನಡೆಸಿ, ಮಕ್ಕಳಲ್ಲಿ ಆತ್ಮ ಸ್ಥೈರ್ಯ ಹಾಗೂ ದೇಶ ಭಕ್ತಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.

ವಿದ್ಯಾರ್ಥಿಗಳ ದತ್ತು ಸ್ವೀಕಾರ

ಪ್ರತಿ ತಿಂಗಳೂ ತಮ್ಮ ವೇತನದಲ್ಲಿ ಕೇಂದ್ರೀಯ ರಕ್ಷಣಾ ನಿಧಿಗೆ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ತಲಾ ₹ 500 ಕಡಿತ ಮಾಡಬೇಕೆಂದು ಬರೆದುಕೊಟ್ಟಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡಬೇಕೆಂದು ‘ವಿದ್ಯಾಗಮ ದತ್ತು ಸ್ವೀಕಾರ’ದ ಹೆಸರಿನಲ್ಲಿ ಒಟ್ಟು 12 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿದ್ದಾರೆ.

ತಾಲ್ಲೂಕಿನ ಗಣಪತಿ ಗಲ್ಲಿಯ ಶಾಲೆಯ ಏಳು, ಬಾಳಗಿಮನೆ ಶಾಲೆಯ ಇಬ್ಬರು, ಮೊರಾರ್ಜಿ ವಸತಿಯುತ ಶಾಲೆಯ ಒಬ್ಬ, ಸವಣಗೇರಿ ಶಾಲೆಯ ಒಬ್ಬ ಹಾಗೂ ಅಂಕೋಲಾ ಕಿತ್ತೂರು ಚನ್ನಮ್ಮ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಒಬ್ಬ ವಿದ್ಯಾರ್ಥಿ ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಎಲ್ಲರ ಪಿ.ಯು.ಸಿ.ವರೆಗಿನ ಶೈಕ್ಷಣಿಕ ಅಗತ್ಯತೆಯನ್ನು ಪೂರೈಸುವ ಹೊಣೆಯನ್ನು ರಾಮಚಂದ್ರ ವಹಿಸಿಕೊಂಡಿದ್ದಾರೆ.

***

ಕೋವಿಡ್‌ನಂತಹ ಸಂಕಷ್ಟದಲ್ಲೂ ಸರ್ಕಾರ ನಮಗೆ ಪೂರ್ಣ ಪ್ರಮಾಣದ ಸಂಬಳ ನೀಡಿದೆ. ಅದರ ಕೆಲವು ಭಾಗವನ್ನು ಶಾಲೆಗಾಗಿ ವ್ಯಯಿಸಿ ಕಲಾಮಂದಿರವನ್ನು ನಿರ್ಮಿಸಿದ್ದೇನೆ.

– ರಾಮಚಂದ್ರ ಐ. ನಾಯ್ಕ, ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.