ADVERTISEMENT

ಕಡಲು ಕೊರೆತಕ್ಕೆ ಬೀಳುವುದೆ ತಡೆ? ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನ ಸಿಗುತ್ತಾ?

ಅಭಿವೃದ್ಧಿ ಚಟುವಟಿಕೆ ಹೆಚ್ಚಿದಷ್ಟು ಕಡಲತೀರಕ್ಕೆ ಎದುರಾಗುತ್ತಿರುವ ಅಪಾಯ

ಗಣಪತಿ ಹೆಗಡೆ
Published 27 ಜನವರಿ 2026, 4:46 IST
Last Updated 27 ಜನವರಿ 2026, 4:46 IST
ಅಂಕೋಲಾ ತಾಲ್ಲೂಕಿನ ತರಂಗ ಮೇಟ ಗ್ರಾಮದಲ್ಲಿ ಕಡಲು ಕೊರೆತ ಉಂಟಾಗಿ ಅಲೆ ತಡೆಗೋಡೆಯ ಕಲ್ಲುಗಳು ಕೊಚ್ಚಿಹೋಗಿರುವುದು
ಅಂಕೋಲಾ ತಾಲ್ಲೂಕಿನ ತರಂಗ ಮೇಟ ಗ್ರಾಮದಲ್ಲಿ ಕಡಲು ಕೊರೆತ ಉಂಟಾಗಿ ಅಲೆ ತಡೆಗೋಡೆಯ ಕಲ್ಲುಗಳು ಕೊಚ್ಚಿಹೋಗಿರುವುದು   

ಕಾರವಾರ: ಪ್ರತಿ ಮಳೆಗಾಲದಲ್ಲಿಯೂ ಕಡಲು ಕೊರೆತ ಸಮಸ್ಯೆಗೆ ನಲುಗುವ ಜಿಲ್ಲೆಯ ಕಡಲತೀರಗಳನ್ನು ಸಂರಕ್ಷಿಸಿಕೊಳ್ಳಲು ಶಾಶ್ವತ ಮಾರ್ಗೋಪಾಯ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ. ಇದಕ್ಕಾಗಿ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನ ಮೀಸಲಿಡಬೇಕು ಎಂಬುದು ಕರಾವಳಿ ಭಾಗದ ಜನರ ಬೇಡಿಕೆ.

160 ಕಿ.ಮೀ ಉದ್ದದಷ್ಟು ಕಡಲತೀರವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲು ಕೊರೆತ ಸಮಸ್ಯೆಯೂ ಹೆಚ್ಚು. ಪ್ರತಿ ಬಾರಿ ಒಂದೊಂದು ಸ್ಥಳದಲ್ಲೂ ಕಡಲು ಕೊರೆತ ತೀವ್ರವಾಗಿ ಬಾಧಿಸುತ್ತಿದೆ. ಕೆಲ ಪ್ರದೇಶಗಳಲ್ಲಂತೂ ಪ್ರತಿ ಬಾರಿ ಈ ಸಮಸ್ಯೆ ಜನರನ್ನು ಕಂಗೆಡಿಸುತ್ತಿದೆ.

ಕಾರವಾರದ ದೇವಬಾಗ, ಹಿಪ್ಪಳಿ, ದಾಂಡೇಬಾಗ, ಟ್ಯಾಗೋರ್ ಕಡಲತೀರ. ಅಂಕೋಲಾ ತಾಲ್ಲೂಕಿನ ಹಾರವಾಡ, ಬೆಳಂಬಾರ. ಕುಮಟಾದ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಸ್ಥಳಗಳು, ಧಾರೇಶ್ವರ, ಹಂದಿಗೋಣ, ಕಲಭಾಗ. ಹೊನ್ನಾವರದ ತೊಪ್ಪಲಕೇರಿ, ಹೆಗಡೆಹಿತ್ಲು, ಪಾವಿನಕುರ್ವ, ಕಾಸರಕೋಡ. ಭಟ್ಕಳದ ಗೋರ್ಟೆ, ಬೆಳ್ಕೆ, ತಲಗೋಡ, ತೆಂಗಿನಗುಂಡಿ, ಅಳ್ವೇಕೋಡಿ, ಮುರ್ಡೇಶ್ವರ, ಬೈಲೂರು ಭಾಗದಲ್ಲಿ ಕಡಲು ಕೊರೆತ ಸಮಸ್ಯೆ ಗಂಭೀರವಾಗಿದೆ.

ADVERTISEMENT

‘ಕಡಲು ಕೊರೆತ ಉಂಟಾದ ಬಳಿಕ ಅಧಿಕಾರಿಗಳು ಪರಿಹಾರ ಮಾರ್ಗೋಪಾಯ ಕಲ್ಪಿಸಲು ಮುಂದಾಗುತ್ತಾರೆ. ಕೊರೆತ ಉಂಟಾಗಬಹುದಾದ ಸ್ಥಳವನ್ನು ಮುಂಚಿತವಾಗಿ ಗುರುತಿಸಿ ಸುರಕ್ಷತೆ ವಹಿಸುವ ಕೆಲಸವಾಗಬೇಕು. ಕಡಲು ಕೊರೆತ ತಡೆಯಲು ಶಾಶ್ವತವಾಗಿ ರೂಪಿಸಬೇಕಾದ ಯೋಜನೆ ಕೈಗೊಳ್ಳಲು ಸರ್ಕಾರ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿರಿಸಬೇಕು’ ಎನ್ನುತ್ತಾರೆ ತರಂಗಮೇಟ್ ಗ್ರಾಮಸ್ಥ ಸಂತೋಷ ದುರ್ಗೇಕರ.

‘ಕಡಲು ಕೊರತದಿಂದ ಜನವಸತಿ ಪ್ರದೇಶಗಳು, ಕಡಲತೀರದ ಸಂಪರ್ಕ ರಸ್ತೆಗಳು ಕೊಚ್ಚಿಹೋಗುತ್ತಿವೆ. ವರ್ಷವೂ ಕೋಟ್ಯಂತರ ಮೊತ್ತದ ಹಾನಿ ಸಂಭವಿಸುತ್ತಿದೆ. ಹಾನಿಯಾದ ಬಳಿಕ ಸೌಕರ್ಯ ಮರುಸ್ಥಾಪಿಸುವ ಬದಲು, ಹಾನಿಯಾಗದಂತೆ ಕಡಲು ಕೊರೆತ ತಡೆಯುವ ಪರಿಣಾಮಕಾರಿ ಟೆಟ್ರಾ ಪಾಡ್ ಕಲ್ಲು ಬಳಸಿ ತಡೆಗೋಡೆ ನಿರ್ಮಿಸಲು ಅನುದಾನ ಒದಗಿಸಲಿ’ ಎಂಬುದು ದೇವರಾಯ ಸೈಲ್ ಒತ್ತಾಯ.

---

ಬಂದರು ನಿರ್ಮಾಣಕ್ಕೆ ಅಲೆ ತಡೆಗೋಡೆ ನಿರ್ಮಿಸಿದಷ್ಟು ಕಡಲು ಕೊರೆತ ಸಮಸ್ಯೆ ಹೆಚ್ಚುತ್ತಿದೆ. ಒಂದಾದ ಮೇಲೆ ಒಂದು ಯೋಜನೆ ಹೇರುವ ಸರ್ಕಾರ ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಿ

-ವಿನಾಯಕ ಹರಿಕಂತ್ರ ಮೀನುಗಾರ ಮುಖಂಡ

ಕಡಿಮೆ ವೆಚ್ಚದ ಯೋಜನೆಯೂ ಕೈಗೊಳ್ಳಬಹುದು

‘ವಾಣಿಜ್ಯ ಬಂದರು ನೌಕಾನೆಲೆ ವಿಸ್ತರಣೆ ಸೇರಿದಂತೆ ಕರಾವಳಿ ಭಾಗದಲ್ಲಿನ ಅಭಿವೃದ್ಧಿ ಯೋಜನೆಗಳ ಪರಿಣಾಮ ಕಡಲು ಕೊರೆತ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸಮಸ್ಯೆ ನಿಯಂತ್ರಿಸದಿದ್ದರೆ ಕರಾವಳಿ ಭಾಗದ ಜೀವವೈವಿಧ್ಯ ನಾಶಕ್ಕೂ ಕಾರಣವಾಗುತ್ತದೆ’ ಎನ್ನುತ್ತಾರೆ ಕಡಲಜೀವಶಾಸ್ತ್ರಜ್ಞ ವಿ.ಎನ್.ನಾಯಕ. ‘ಮಣ್ಣಿನ ಸವಕಳಿ ಕಡಲಾಮೆಗಳ ಸಂರಕ್ಷಣೆಗೆ ಇದು ತೊಡಕಾಗಬಹುದು. ಕಡಲು ಕೊರೆತ ತಡೆಗೆ ದೊಡ್ಡ ಮೊತ್ತದ ಯೋಜನೆಯನ್ನೇ ರೂಪಿಸಬೇಕಾದ ಅಗತ್ಯವಿಲ್ಲ. ಕಡಲತೀರದಲ್ಲಿ ಬಂಡೆಕಲ್ಲಿನ ರಾಶಿ ಸುರಿದು ತಡೆಗೋಡೆ ನಿರ್ಮಿಸುವ ಬದಲು ಮಣ್ಣಿನ ಸವಕಳಿ ತಡೆಯುವ ಬೀಚ್ ಮಾರ್ನಿಂಗ್ ಗ್ಲೋರಿ (ಬಂಗುಡೆ ಬಳ್ಳಿ) ಬಳ್ಳಿಗಳನ್ನು ಬೆಳೆಸುವುದು ಹೆಚ್ಚು ವೆಚ್ಚ ಇಲ್ಲದೆ ನೈಸರ್ಗಿಕವಾಗಿ ಸಮಸ್ಯೆ ತಡೆಯಲು ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು. ‘ಕಡಲು ಕೊರೆತ ಮಳೆಗಾಲದ ವೇಳೆ ನಡೆಯುವ ಸಹಜ ನೈಸರ್ಗಿಕ ಪ್ರಕ್ರಿಯೆ. ಅದನ್ನು ತಡೆಗಟ್ಟಲು ಯಾವುದೇ ಕ್ರಮದಿಂದಲೂ ಸಾಧ್ಯವಾಗದು. ಸಿಆರ್‌ಝಡ್ ನಿಯಮಗಳ ಪಾಲನೆ ಬಿಗುಕ್ರಮಗಳ ಮೂಲಕ ಕಡಲತೀರ ಸಂರಕ್ಷಿಸಬಹುದು’ ಎಂಬುದು ಅವರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.