ADVERTISEMENT

ಶಿರಸಿ | 'ಸ್ವದೇಸಿ ವಸ್ತುಗಳೆಡೆ ಜಾಗೃತಿ ಮೂಡಿಸಿ'

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:12 IST
Last Updated 24 ಸೆಪ್ಟೆಂಬರ್ 2025, 4:12 IST
ಶಿರಸಿಯಲ್ಲಿ ಆಯೋಜಿಸಿದ್ದ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಬಿಜೆಪಿ ಪದಾಧಿಕಾರಿಗಳು ಭಾರತ ಮಾತೆಗೆ ಪೂಜೆ ಸಲ್ಲಿಸಿದರು
ಶಿರಸಿಯಲ್ಲಿ ಆಯೋಜಿಸಿದ್ದ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಬಿಜೆಪಿ ಪದಾಧಿಕಾರಿಗಳು ಭಾರತ ಮಾತೆಗೆ ಪೂಜೆ ಸಲ್ಲಿಸಿದರು   

ಶಿರಸಿ: ‘ದೇಶ ಆತ್ಮ ನಿರ್ಭರವಾಗಲು ಸ್ಥಾನಿಕವಾಗಿ ದೇಸಿಯ ವಸ್ತುಗಳ ಬಳಕೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಪಕ್ಷದಿಂದ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು’ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು. 

ನಗರದ ದೀನದಯಾಳ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಆಮದು ಕಡಿಮೆಯಾಗಿ ರಫ್ತು ಜಾಸ್ತಿ ಆಗಬೇಕು, ನಾವೆಲ್ಲರೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಧ್ವನಿಯಾಗಬೇಕು. ನಾವೆಲ್ಲರೂ ನಮ್ಮ ಮನೆಗಳಲ್ಲಿ ಬಳಸುವ ವಸ್ತು ಸ್ವದೇಶಿ ಇರುವಂತೆ, ಸ್ಥಳೀಯ ಉತ್ಪನ್ನವನ್ನೇ ಖರೀದಿಸುವಂತೆ ಗಮನ ಹರಿಸಿದರೆ ಖಂಡಿತ ಬದಲಾವಣೆ ಸಾಧ್ಯ’ ಎಂದರು.

ADVERTISEMENT

ಆತ್ಮನಿರ್ಭರ ಭಾರತ ಅಭಿಯಾನದ ಜಿಲ್ಲಾ ಸಂಚಾಲಕ ಗೋವಿಂದ ನಾಯ್ಕ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಸ್ವದೇಶಿ ಸಂಕಲ್ಪದ ಕರೆಯ ಮೇರೆಗೆ ನಡೆಯಲಿರುವ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಬಿಜೆಪಿ ಕಾರ್ಯಕರ್ತರು ತೊಡಗಿಕೊಂಡು ಜನಜಾಗೃತಿ ಮೂಡಿಸಬೇಕು’ ಎಂದು ಮನವಿ ಮಾಡಿದರು. 

ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ‘ಮುಂದಿನ ಮೂರು ತಿಂಗಳು ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಒಳ್ಳೆಯ ಕಾರ್ಯಕ್ರಮಗಳು ಆಗಲಿ’ ಎಂದರು.

ನಿಕಟಪೂರ್ವ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಘಟಕದ ಉಪಾಧ್ಯಕ್ಷ ಸುಬ್ರಾಯ ವಾಳ್ಕೆ, ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಗುರುಪ್ರಸಾದ ಹೆಗಡೆ ಹರ್ತೆಬೈಲ್, ಪ್ರಶಾಂತ ನಾಯ್ಕ, ನಿತ್ಯಾನಂದ ಗಾಂವ್ಕರ್, ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ, ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಎಂ.ಜಿ.ಭಟ್ ಹಾಗೂ ಇತರರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.