ಕಾರವಾರ: ಇಲ್ಲಿನ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಯುವಕ, ಯುವತಿಯರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಅಧ್ಯಯನ ಕೇಂದ್ರ ತೆರೆಯಲಾಗಿದೆ. ಅಲ್ಲಿ ನಿತ್ಯವೂ ಹತ್ತಾರು ಜನರು ವ್ಯಾಸಂಗದಲ್ಲಿ ತೊಡಗಿದ್ದಾರೆ.
ಗ್ರಂಥಾಲಯದ ನೆಲಮಹಡಿಯಲ್ಲಿ ಪತ್ರಿಕೆ ಓದಲು, ಮೊದಲ ಮಹಡಿಯಲ್ಲಿ ಪುಸ್ತಕಗಳ ಓದಿಗೆ ಸಭಾಂಗಣವಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವವರು ಇದೇ ಸಭಾಂಗಣದಲ್ಲಿ ಕುಳಿತು ವ್ಯಾಸಂಗ ಮಾಡುತ್ತಿದ್ದರು. ಆದರೆ, ಅವರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರತ್ಯೇಕ ವಿಭಾಗವನ್ನೇ ಆರಂಭಿಸಲಾಗಿದೆ.
ಗ್ರಂಥಾಲಯದ ಹಿಂಭಾಗದಲ್ಲಿ ‘ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ’ದ ಹೆಸರಿನಲ್ಲಿ ವಿವಿಧ ಪರೀಕ್ಷೆಗಳಿಗೆ ಸಿದ್ಧತೆ ಮಾಡುತ್ತಿರುವವರು ಕುಳಿತು ಓದಲು ಪೂರಕ ಸೌಕರ್ಯಗಳನ್ನು ಅಳವಡಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವವರಿಗೆ ಅನುಕೂಲವಾಗಬಲ್ಲ ಸಾವಿರಾರು ಪುಸ್ತಕಗಳನ್ನು ವ್ಯವಸ್ಥಿತವಾಗಿ ಅಲ್ಲಿ ಜೋಡಿಸಿಡಲಾಗಿದೆ. ಅಂತರ ಕಾಯ್ದುಕೊಂಡು ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ.
‘ಓದುಗರಿಗೆ ಗ್ರಂಥಾಲಯದಲ್ಲಿ ಎರಡು ಪ್ರತ್ಯೇಕ ಸಭಾಂಗಣ ಇದ್ದವು. ಮೊದಲ ಮಹಡಿಯಲ್ಲಿರುವ ಸಭಾಂಗಣದಲ್ಲಿ ಇಕ್ಕಟ್ಟಾದ ಜಾಗ ಇದ್ದ ಕಾರಣ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ ತೊಡಗಿದವರಿಗೆ ಆರಾಮವಾಗಿ ಕುಳಿತು ಓದಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಈಚೆಗಷ್ಟೆ ಗ್ರಂಥಾಲಯಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಪ್ರತ್ಯೇಕ ವಿಭಾಗ ಆರಂಭಿಸಲು ಸಲಹೆ ನೀಡಿದ್ದರು’ ಎಂದು ಗ್ರಂಥಾಲಯ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಕೆ.ವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರ ಅನುಕೂಲಕ್ಕಾಗಿ ಗ್ರಂಥಾಲಯವನ್ನು ಹಲವು ತಿಂಗಳಿನಿಂದ ತಡರಾತ್ರಿವರೆಗೂ ತೆರೆದಿಡಲಾಗುತ್ತಿದೆ. ಈಗ ಪ್ರತ್ಯೇಕ ವಿಭಾಗವನ್ನೂ ಆರಂಭಿಸಿರುವುದರಿಂದ ಅವರಿಗೆ ಹೆಚ್ಚಿನ ಓದಿಗೆ ಅನುಕೂಲವಾಗಿದೆ. ಕೇಂದ್ರಕ್ಕೆ ನಿತ್ಯ ಸರಾಸರಿ 25–30 ಮಂದಿ ನಿರಂತರವಾಗಿ ಭೇಟಿ ನೀಡುತ್ತಾರೆ. ಅಲ್ಲಿ 25 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಲಭ್ಯ ಇವೆ. ಇವೆಲ್ಲವೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪೂರಕವಾದ ಅಂಶಗಳನ್ನು ಒಳಗೊಂಡಿವೆ’ ಎಂದು ತಿಳಿಸಿದರು.
‘ಗ್ರಂಥಾಲಯದಲ್ಲಿ 7 ಲಕ್ಷದಷ್ಟು ಪುಸ್ತಕಗಳಿದೆ. ಪರೀಕ್ಷಾರ್ಥಿಗಳಲ್ಲದ, ಓದಿನ ಆಸಕ್ತಿ ಹೊಂದಿರುವವರಿಗೆ ಮೊದಲ ಮಹಡಿಯಲ್ಲಿ ಓದಲು ಮುಂಚಿನಂತೆ ವ್ಯವಸ್ಥೆ ಇರಲಿದೆ’ ಎಂದು ಮಾಹಿತಿ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ 25,000ಕ್ಕೂ ಹೆಚ್ಚು ಪುಸ್ತಕ ಸಂಗ್ರಹ ಗ್ರಂಥಾಲಯದಲ್ಲಿದೆ 7 ಲಕ್ಷ ಪುಸ್ತಕ ಪರೀಕ್ಷಾರ್ಥಿಗಳಿಗಾಗಿ ತಡರಾತ್ರಿವರೆಗೂ ಕಾರ್ಯನಿರ್ವಹಣೆ
ಗ್ರಂಥಾಲಯದಲ್ಲಿ ಓದುಗ ಸ್ನೇಹಿ ವಾತಾವರಣಕ್ಕೆ ಮತ್ತಷ್ಟು ಯೋಜನೆ ರೂಪಿಸಲಾಗಿದ್ದು ಪ್ರವೇಶದ್ವಾರದಲ್ಲಿ ಆಕರ್ಷಿಕ ವರ್ಣಚಿತ್ರ ರಚಿಸಲಾಗಿದೆ. ಇನ್ನಷ್ಟು ಆಕರ್ಷಕ ಚಿತ್ರ ರಚನೆ ಮಾಡಲಾಗುವುದುರಾಘವೇಂದ್ರ ಕೆ.ವಿ ಗ್ರಂಥಾಲಯ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.