ADVERTISEMENT

75 ವರ್ಷದ ಶಾಲೆಗೆ ಬೇಕಿದೆ ದುರಸ್ತಿ

ಕುಮಟಾ: ಸ್ವಾತಂತ್ರ್ಯ ಸಿಗುವ 15 ದಿನ ಮೊದಲು ಆರಂಭವಾದ ವಿದ್ಯಾಮಂದಿರ

ಎಂ.ಜಿ.ನಾಯ್ಕ
Published 8 ಸೆಪ್ಟೆಂಬರ್ 2022, 19:30 IST
Last Updated 8 ಸೆಪ್ಟೆಂಬರ್ 2022, 19:30 IST
ಕುಮಟಾದ ಜಿಲ್ಲಾ ಶಿಕ್ಷಣ– ತರಬೇತಿ ಕೇಂದ್ರದ ನೇತೃತ್ವದಲ್ಲಿರುವ ‘ಪ್ರಾಯೋಗಿಕ ಶಾಲೆ’ಯ ಕಟ್ಟಡ.
ಕುಮಟಾದ ಜಿಲ್ಲಾ ಶಿಕ್ಷಣ– ತರಬೇತಿ ಕೇಂದ್ರದ ನೇತೃತ್ವದಲ್ಲಿರುವ ‘ಪ್ರಾಯೋಗಿಕ ಶಾಲೆ’ಯ ಕಟ್ಟಡ.   

ಕುಮಟಾ: ಈ ಶಾಲೆಗೆ 75 ವರ್ಷಗಳ ಇತಿಹಾಸವಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ನೂರಾರು ವಿದ್ಯಾರ್ಥಿಗಳು ಪ್ರಸ್ತುತ ದೇಶ, ವಿದೇಶಗಳಲ್ಲಿ ಉನ್ನತ ಉದ್ಯೋಗಗಳಲ್ಲಿ, ಸ್ಥಾನಮಾನಗಳಲ್ಲಿದ್ದಾರೆ. ಭವ್ಯ ಹಿನ್ನೆಲೆ ಹೊಂದಿರುವ ವಿದ್ಯಾ ಮಂದಿರವೀಗ ಸೋರುತ್ತಿದೆ. ವಿದ್ಯಾರ್ಥಿಗಳು ಆತಂಕದಲ್ಲೇ ತರಗತಿಗೆ ಬರುವಂತಾಗಿದೆ.

ಪಟ್ಟಣದ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ನೇತೃತ್ವದಲ್ಲಿ ನಡೆಯುವ ‘ಪ್ರಾಯೋಗಿಕ ಶಾಲೆ’ಯ ದುಃಸ್ಥಿತಿ ಹೀಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುವ 15 ದಿನ ಮುಂಚೆ ಅಂದರೆ, 1947ರ ಜುಲೈ 31ರಂದು ಈ ಶಾಲೆ ಸ್ಥಾಪನೆಯಾಯಿತು. ಅಂದಿನಿಂದ ಈವರೆಗೆ ನಿರಂತರವಾಗಿ ಜ್ಞಾನಧಾರೆ ಎರೆಯುತ್ತಿರುವ ವಿದ್ಯಾಮಂದಿರವೀಗ ತುರ್ತು ದುರಸ್ತಿಗೆ ಕಾಯುತ್ತಿದೆ.

ಶಾಲೆಯ ಕಟ್ಟಡವು ನಿರ್ವಹಣೆಯ ಕೊರತೆಯಿಂದ ಚಾವಣಿ ಹಾಳಾಗಿ ಮಳೆ ನೀರು ಒಳಗೆ ಬರುತ್ತಿದೆ. ಕೆಲವು ವರ್ಷಗಳ ಹಿಂದೆ ಮುಖ್ಯ ಶಿಕಕ್ಷರ ಕೊಠಡಿ ಹಾಗೂ ಅದರ ಪಕ್ಕದ ಕೊಠಡಿಗಳ ಹೆಂಚುಗಳನ್ನು ಬದಲಿಸಿ ಸೋರಿಕೆ ನಿಲ್ಲಿಸಲಾಗಿದೆ. ಉಳಿದ ಎಲ್ಲ ಐದು ತರಗತಿ ಕೊಠಡಿಗಳು ಈಗ ಸೋರುತ್ತಿವೆ.

ADVERTISEMENT

ಹಳೆಯ ವಿದ್ಯಾರ್ಥಿಗಳು ಕೊಡುಗೆಯಾಗಿ ಕೊಟ್ಟಿರುವ ಕಂಪ್ಯೂಟರ್‌ ಅನ್ನೂ ಸೋರುವ ಕೊಠಡಿಯಲ್ಲೇ ಇಡಲಾಗಿದೆ. ಒಂದರಿಂದ ಏಳನೇ ತರಗತಿಯವರೆಗೆ ಓದುವ 52 ವಿದ್ಯಾರ್ಥಿಗಳು, ಐವರು ಶಿಕ್ಷಕರು ಶಾಲೆಯಲ್ಲಿದ್ದಾರೆ. ಶಾಲೆಯ ಶಿಥಿಲಾವಸ್ಥೆ ಕಂಡು ಹೆಚ್ಚಿನ ಪಾಲಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಲು ಭಯ ಪಡುವಂಥ ಪರಿಸ್ಥಿತಿ ಉಂಟಾಗಿದೆ. ಶಾಲೆಯ ಇನ್ನೊಂದು ಕೊಠಡಿಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರವೂ ಸೋರುತ್ತಿದೆ.

‘ದುರಸ್ತಿ ಮಾಡಿಸಲಾಗುವುದು’:

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಡೆಯುತ್ತಿರುವ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಕೇಂದ್ರದ ಹಳೆಯ ಕಟ್ಟಡವನ್ನು ಸುಮಾರು ₹ 4 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವದ ಈ ಶಾಲಾ ಕಟ್ಟಡಕ್ಕೂ ಶಿಕ್ಷಣ ಸಚಿವರಿಂದ ₹ 25 ಲಕ್ಷ ವಿಶೇಷ ಅನುದಾನ ಕೊಡಿಸಿ ದುರಸ್ತಿ ಮಾಡಿಸಲಾಗುವುದು’ ಎಂದು ಶಾಸಕ ದಿನಕರ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಶಾಲಾ ಕಟ್ಟಡದ ದುರಸ್ತಿಗೆ ಈಗಾಗಲೇ ಶಿಕ್ಷಣ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಇಲಾಖೆಯಿಂದ ₹ 8 ಲಕ್ಷ ಮಂಜೂರಾಗಿದೆ.

– ಎನ್.ಜಿ. ನಾಯಕ, ಪ್ರಾಚಾರ್ಯ, ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರ

ನಾವು ಕಲಿತ ಶಾಲೆಯ ಕಟ್ಟಡದ ದುರಸ್ತಿಗೆ ನಾವೆಲ್ಲ ದೇಣಿಗೆ ನೀಡುವ ಮೂಲಕ ಕೈಲಾದ ಸಹಾಯ ಮಾಡಲು ಸಿದ್ಧರಿದ್ದೇವೆ.

– ವಿನಾಯಕ ಶಾನಭಾಗ, ಶಾಲೆಯ ಹಳೆಯ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.