ADVERTISEMENT

ಮಾತು, ಕೃತಿಯಲ್ಲಿ ಜಾನಪದ ಲೋಕ ತೆರೆದಿಟ್ಟ ಸಾಹಿತಿ ಶಾಂತಿ ನಾಯಕ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:20 IST
Last Updated 17 ಆಗಸ್ಟ್ 2025, 5:20 IST
ಶಾಂತಿ ನಾಯಕ
ಶಾಂತಿ ನಾಯಕ   

ಹೊನ್ನಾವರ: ‘ನಿಮ್ಮ ತಾಯಿಗೆ ಹಲವು ದೇಶಿ ಔಷಧಗಳ ಬಗ್ಗೆ ತಿಳಿದಿದೆಯಂತಲ್ಲ. ನಿಮ್ಮ ಮನೆಗೆ ಬರಬೇಕು’ ಎಂದು ಶಾಂತಿ ನಾಯಕ ಸಿಕ್ಕಾಗಲೆಲ್ಲ ನನಗೆ ಹೇಳುತ್ತಿದ್ದರು. ನಿನಗೆ ಗೊತ್ತಿರುವ ಸ್ಥಳೀಯ ಔಷಧ ಸಸ್ಯಗಳ ಹೆಸರನ್ನು ಪಟ್ಟಿ ಮಾಡಿ ಕೊಡಲು ನನ್ನಲ್ಲಿ ಹಲವು ಬಾರಿ ಹೇಳಿದ್ದರು. ಪಟ್ಟಿ ಪೂರ್ಣವಾಗುವ ಮೊದಲೆ ಅವರು ತೀರಿಕೊಂಡರು’ ಎಂದು ಕುಮಟಾ ತಾಲ್ಲೂಕು ಹಂದಿಗೋಣ ಗ್ರಾಮದ ಗಾಯತ್ರಿ ನಾಯ್ಕ ಕಣ್ಣೀರಾದರು.

ಯಾವುದೇ ಒಂದು ಮನೆಗೋ ಅಥವಾ ಊರಿಗೊ ಶಾಂತಿ ನಾಯಕ ಭೇಟಿ ಕೊಟ್ಟಿದ್ದರೆಂದರೆ ಅಲ್ಲಿನ ಸ್ಥಳೀಯ ಸಂಗತಿಗಳೆಲ್ಲ ಅವರ ಮುಂದಿನ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದವು. ಮಾತು, ಕೃತಿಗಳೆಲ್ಲ ಹೀಗೆ ಜಾನಪದ ಲೋಕವನ್ನು ಪರಿಚಯಿಸುವ ಸಾಧನಗಳಂತಿದ್ದವು.

‘ಶಾಂತಿ ನಾಯಕ ಕೇವಲ ಜಾನಪದೀಯ ಸಂಗತಿಗಳ ಸಂಗ್ರಹಕಾರರಲ್ಲ. ಜಾನಪದ ಲೋಕ ಸ್ತ್ರೀಪ್ರಾಧಾನ್ಯವಾಗಿದ್ದರೂ ಅಲ್ಲಿ ಸ್ತ್ರೀಯರು ತೊಡಗಿಸಿಕೊಂಡಿದ್ದು ವಿರಳ. ಸ್ತ್ರೀ ಸಂವೇದನೆಯ ಅಂತಃಕರಣದಿಂದ ಜಾನಪದವನ್ನು ನೋಡುವ, ವಿಶ್ಲೇಷಸುವ ಹಾಗೂ ವಿಮರ್ಶಿಸುವ ಅವರ ಬರವಣಿಗೆಗಳು ಜಾನಪದ ಅಧ್ಯಯನಕ್ಕೆ ಹೊಸ ಆಯಾಮ ನೀಡಿವೆ’ ಎಂದು ಶಾಂತಿ ನಾಯಕ ಅವರ ಬದುಕು ಹಾಗೂ ಬರಹದ ಕುರಿತು ಕೃತಿ ಬರೆದಿರುವ ಸಾಹಿತಿ ನಾಗರಾಜ ಹೆಗಡೆ ಅಪಗಾಲ ಹೇಳುತ್ತಾರೆ.

ADVERTISEMENT

ಜೀವ ಉಳಿಸುವ ಕಳೆಗಳು, ಸಿಂಕೋನಾ, ಜನಪದ ಗಣಿತ ಹೀಗೆ ಹಲವು ಕೃತಿಗಳಲ್ಲಿ ಶಾಂತಿ ನಾಯಕ ಅವರ ಜಾನಪದ ಜ್ಞಾನದ ಕಣಜವಿದೆ. ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ. ಈಚೆಗೆ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದರು.

ಮಹಿಳೆಯರಿಗೆ ಸಹಕಾರ ಬ್ಯಾಂಕ್

‘ಸಮತಾ ವೇದಿಕೆ ಹುಟ್ಟು ಹಾಕಿ ಮಹಿಳೆಯರ ಸಮಸ್ಯೆಗಳಿಗೆ ದನಿಯಾದ ಅವರು ಭೂಮಿ ಹೆಸರಿನ ಬ್ಯಾಂಕ್ ಸೇರಿದಂತೆ ಮಹಿಳೆಯರಿಗೆ ಆರ್ಥಿಕ ಬಲ ತುಂಬಲು ಮೂರು ಸಹಕಾರ ಬ್ಯಾಂಕ್‍ಗಳನ್ನು ಹುಟ್ಟು ಹಾಕಿದ್ದರು. ಜಾನಪದ ವಿದ್ವಾಂಸರಾಗಿರುವ ಪತಿ ಎನ್.ಆರ್.ನಾಯಕ ಅವರೊಟ್ಟಿಗೆ ಸೇರಿ ಜಾನಪದಕ್ಕೆ ಸಂಬಂಧಿಸಿದ ವಿಷಯಗಳ ದಾಖಲೀಕರಣದಲ್ಲಿ ಮಹತ್ವದ ಕೊಡುಗೆ ಸಲ್ಲಿಸಿದ್ದಾರೆ. ಮನೆಯಲ್ಲೇ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಿರುವ ಅವರು ‘ಜಾನಪದ ದೀಪಾರಾಧನೆ’ ಎಂಬ ಕಾರ್ಯಕ್ರಮದ ಮೂಲಕ ನಾಡಿನಾದ್ಯಂತ ಜಾನಪದದ ಕುರಿತು ಸಂಚಲನ ಮೂಡಿಸಿದ್ದರು’ ಎಂದು ಅವರ ಆಪ್ತ ವಲಯದಲ್ಲಿದ್ದವರು ಹೇಳುತ್ತಾರೆ.

ಕ್ರಿಮ್ಸ್‌ಗೆ ಶಾಂತಿ ನಾಯಕ ದೇಹದಾನ

ಕಾರವಾರ: ಅಗಲಿದ ಜಾನಪದ ತಜ್ಞೆ ಶಾಂತಿ ನಾಯಕ ಅವರ ದೇಹವನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಕ್ರಿಮ್ಸ್) ಶನಿವಾರ ದಾನ ಮಾಡಲಾಯಿತು. ಶಾಂತಿ ನಾಯಕ ಅವರ ಮಕ್ಕಳಾದ ರವೀಂದ್ರ ನಾಯಕ ವಿವೇಕ ನಾಯಕ ಸವಿತಾ ನಾಯಕ ತಾಯಿಯ ದೇಹವನ್ನು ಕ್ರಿಮ್ಸ್‌ಗೆ ಹಸ್ತಾಂತರಿಸಿದರು. ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳು ಪಾರ್ಥಿವ ಶರೀರಕ್ಕೆ ಪುಷ್ಪಾರ್ಪಣೆ ಮಾಡಿ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ‘ಶಾಂತಿ ನಾಯಕ ಅವರ ಅಗಲುವಿಕೆ ನಾಡಿನ ಸಾಹಿತ್ಯ ಜಾನಪದ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದಷ್ಟು ಹಾನಿಯನ್ನುಂಟು ಮಾಡಿದೆ. ಅವರು ಜಾನಪದಕ್ಕಾಗಿಯೇ ರಚಿಸಿದ ಕೃತಿಗಳ ಮರು ಅವಲೋಕನ ಅಧ್ಯಯನ ಮಾಡುವ ಕಾರ್ಯ ಆಗಬೇಕಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದರು. ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾರ್ಜ್ ಪರ್ನಾಂಡಿಸ್  ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ ಪದಾಧಿಕಾರಿಗಳಾದ ಜೆ.ಡಿ.ಮನೋಜೆ ಮಾಧವ ನಾಯಕ ಪ್ರೇಮಾ ಟಿ.ಎಂ.ಆರ್. ಖೈರುನ್ನಿಸಾ ಶೇಖ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.