ADVERTISEMENT

ಪಂಪ್ಡ್ ಸ್ಟೊರೇಜ್‌ಗೆ 16 ಸಾವಿರ ಮರ ಹನನ: ಶರಾವತಿ ಕಣಿವೆಯಲ್ಲಿ ಅರಣ್ಯ ನಾಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:35 IST
Last Updated 14 ಸೆಪ್ಟೆಂಬರ್ 2025, 4:35 IST
ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿಯಾಗಲಿರುವ ಪ್ರದೇಶದ ಗ್ರಾಫಿಕ್ ನಕ್ಷೆ.
ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿಯಾಗಲಿರುವ ಪ್ರದೇಶದ ಗ್ರಾಫಿಕ್ ನಕ್ಷೆ.   

ಕಾರವಾರ: ಶರಾವತಿ ಭೂಗತ ವಿದ್ಯುತ್ ಯೋಜನೆಗೆ (ಪಂಪ್ಡ್ ಸ್ಟೊರೇಜ್) ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಶರಾವತಿ ಕಣಿವೆಯಲ್ಲಿ 16,041 ಮರಗಳ ಹನನ ಆಗಲಿದ್ದು, 54.15 ಹೆಕ್ಟೇರ್ ಅರಣ್ಯ ಭೂಮಿ ಯೋಜನೆಗೆ ಬಳಕೆ ಆಗಲಿದೆ. ಇದಕ್ಕೆ ಪರ್ಯಾಯವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವನೀಕರಣಕ್ಕೆ ಭೂಮಿ ಗುರುತಿಸಲಾಗಿದೆ.

ಯೋಜನೆ ಜಾರಿಗೆ ತರಲಿರುವ ಕರ್ನಾಟಕ ವಿದ್ಯುತ್ ನಿಗಮದ ನಿಯಮಿತದ (ಕೆಪಿಸಿಎಲ್) ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಪ್ರದೇಶದಲ್ಲಿ ಯೋಜನೆ ಜಾರಿಗೊಳ್ಳಲಿದ್ದು, ಅಪರೂಪದ ಸಸ್ಯ ಸಂಪತ್ತು, ವನ್ಯಜೀವಿಗಳಿರುವ ಹೊನ್ನಾವರ ಅರಣ್ಯ ವಿಭಾಗದಲ್ಲೇ 13,756 ಮರಗಳು ಯೋಜನೆಗೆ ಬಲಿಯಾಗಲಿದೆ ಎಂದು ಗುರುತಿಸಲಾಗಿದೆ.

‘ಶರಾವತಿ ಭೂಗತ ವಿದ್ಯುತ್ ಯೋಜನೆಗೆ ಹೊನ್ನಾವರ ತಾಲ್ಲೂಕಿನ ನಗರಬಸ್ತಿಕೇರಿ, ಗೇರುಸೊಪ್ಪ, ಬೆಗೊಡಿ ಗ್ರಾಮಗಳ 24.31 ಹೆಕ್ಟೇರ್ ಖಾಸಗಿ ಜಮೀನು ಸ್ವಾಧೀನಗೊಳ್ಳಲಿದೆ. ಈ ವ್ಯಾಪ್ತಿಯಲ್ಲಿ ಕೇವಲ 6 ಮನೆಗಳು, ತಲಾ 1 ದೇವಾಲಯ ಮತ್ತು ಅಂಗನವಾಡಿಗಳಿವೆ. ಅರಣ್ಯಭೂಮಿಯನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೆಪಿಸಿಎಲ್ ಕೇಂದ್ರ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ವಿಜಯ ವಿ.ಎಂ ಮಾಹಿತಿ ನೀಡಿದರು.

‘2 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಯೋಜನೆ ಇದಾಗಿರಲಿದ್ದು, ಗೇರುಸೊಪ್ಪ ಮತ್ತು ತಲಕಳಲೆ ಜಲಾಶಯಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಜಲಾಶಯ ನಿರ್ಮಾಣದಂತಹ ಕಾಮಗಾರಿ ನಡೆಯುವುದಿಲ್ಲ. ಭೂಮಿಯ ಆಳದಲ್ಲಿ ಸುಮಾರು 7 ಕಿ.ಮೀ ದೂರದವರೆಗೆ ಸುರಂಗದ ಮೂಲಕ ನೀರನ್ನು ಹರಿಬಿಡುವ ಮತ್ತು ಅದೇ ಮಾರ್ಗದ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಭೂಮಿಯ ಮೇಲ್ಮೈನಲ್ಲಿರುವ ಪರಿಸರಕ್ಕೆ ಹಾನಿ ಆಗುವುದಿಲ್ಲ’ ಎಂದರು.

‘ವಿದ್ಯುದಾಗಾರಗಳ ಸಂಪರ್ಕದ ರಸ್ತೆಯನ್ನು 3.5 ಮೀಟರ್‌ನಿಂದ 5.5 ಮೀಟರ್‌ಗೆ ವಿಸ್ತರಿಸಲಾಗುತ್ತದೆ. ಗೇರುಸೊಪ್ಪದಿಂದ ತಾಳಗುಪ್ಪವರೆಗಿನ 220 ಕೆವಿ ವಿದ್ಯುತ್ ತಂತಿ ಮಾರ್ಗ ಭವಿಷ್ಯದಲ್ಲಿ 400 ಕೆವಿಗೆ ಏರಿಕೆಯಾಗಲಿದ್ದು, ಆ ಮಾರ್ಗ 35 ಮೀ. ವಿಸ್ತರಣೆ ಆಗಲಿದೆ. ಆದರೆ, ಅವುಗಳಿಗೆ ಈಗಾಗಲೆ ಅಗತ್ಯದಷ್ಟು ಜಾಗದ ಲ್ಯತೆ ಇದ್ದು, ಪರಿಸರಕ್ಕೆ ಹೆಚ್ಚಿನ ಆಗದು’ ಎಂದರು.

ಶರಾವತಿ ಯೋಜನೆಯ ಮುಖ್ಯ ಎಂಜಿನಿಯರ್ ರಮೇಶ್, ಮಾದೇಶ್, ಅಶೋಕ್ ನಾಯಕ, ಗಿರೀಶ್ ಎಸ್.ಎಂ., ಉಮಾಪತಿ ಕೆ.ಆರ್. ಇದ್ದರು.

ಸಿಂಗಳೀಕಗಳಿಗೆ ಕೆನೋಪಿ ನಿರ್ಮಾಣ:

‘ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿ ಪ್ರದೇಶದಲ್ಲಿರುವ ಅಪರೂಪದ ವನ್ಯಜೀವಿಗಳಾಗಿರುವ ಸಿಂಗಳೀಕಗಳ ಓಡಾಟಕ್ಕೆ ಅಡ್ಡಿಯಾಗದಂತೆ ಅಲ್ಲಲ್ಲಿ ಕೆನೋಪಿ (ಮೇಲ್ಸೇತುವೆ) ನಿರ್ಮಿಸಲಾಗುವುದು. ಹೊನ್ನಾವರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ವೇಳೆ ಅನುಸರಿಸಿದ್ದ ಮಾದರಿಯಲ್ಲೇ ಈ ಯೋಜನೆ ಜಾರಿಗೆ ತರಲು ಅರಣ್ಯ ಇಲಾಖೆ ಸಲಹೆ ಆಧರಿಸಿ ಈ ಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತದೆ’ ಎಂದು ಕೆಪಿಸಿಎಲ್ ಇಇ ವಿಜಯ ವಿ.ಎಂ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.