ಶಿರಸಿ: ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ತಿಳಿದಂದಿನಿಂದಲೂ ಅದನ್ನು ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆ. ಈಗಲೂ ವೈಯಕ್ತಿಕವಾಗಿ ಯೋಜನೆ ಅನುಷ್ಠಾನಕ್ಕೆ ನನ್ನ ವಿರೋಧವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ 2006–07ರಲ್ಲಿಯೇ ಚರ್ಚೆಯಾಗಿದ್ದು, ಈಗ ಯೋಜನೆಯ ಟೆಂಡರ್ ಆಗಿ ಸಾರ್ವಜನಿಕ ಅಹವಾಲು ಸ್ವೀಕರಿಸಲಾಗಿದೆ. ಈ ಯೋಜನೆಯನ್ನು ಕೇವಲ ವಿರೋಧ ಪಕ್ಷದವರು ಮಾತ್ರ ವಿರೋಧಿಸಿಲ್ಲ. ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶಕ್ಕೆ ನಾವೂ ವಿರೋಧಿಸಿದ್ದೇವೆ. ಆದರೆ, ಯೋಜನೆಯಿಂದ ತೊಂದರೆ ಆಗುವುದಿಲ್ಲ ಎಂದು ಯೋಜನೆಯ ಪರವಾಗಿ ಮಾತನಾಡುವವರು ಹೇಳುತ್ತಿದ್ದಾರೆ. ಅಂತಿಮ ತೀರ್ಮಾನ ಏನಾಗುತ್ತದೆ ನೋಡೋಣ’ ಎಂದ ಅವರು, ‘ಬೇಡ್ತಿ–ವರದಾ ನದಿ ನೀರನ್ನು ನಾವು ಬೇರೆ ಜಿಲ್ಲೆಗೆ ಕೊಡುವುದಿಲ್ಲ ಎಂದು 20 ವರ್ಷದಿಂದಲೂ ಹೇಳುತ್ತ ಬಂದಿದ್ದೇವೆ. ಅದು ಕಾರ್ಯರೂಪಕ್ಕೆ ಬರದ ಯೋಜನೆ’ ಎಂದರು.
‘ದೇಶಮಟ್ಟದಲ್ಲೂ ಜಾತಿ ಸಮೀಕ್ಷೆ ನಡೆಯುತ್ತಿದೆ, ರಾಜ್ಯದಲ್ಲಿಯೂ ಆರಂಭಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಕೇವಲ ಜಾತಿಯನ್ನಷ್ಟೇ ಗಮನಿಸಿ ಸಮೀಕ್ಷೆ ನಡೆಸುತ್ತಿದ್ದರೆ ನಾವು ಜನರ ಆರ್ಥಿಕ ಪರಿಸ್ಥಿತಿ, ಶಿಕ್ಷಣಿಕ ಸ್ಥಿತಿ ಗತಿಯನ್ನೂ ಗಮನಿಸಿ ಸಮೀಕ್ಷೆ ನಡೆಸುತ್ತಿದ್ದೇವೆ. ಬಡವರು ಇನ್ನೂ ಎಷ್ಟಿದ್ದಾರೆ, ಅವರ ಸ್ಥಿತಿ ಗತಿ ಯಾವ ಮಟ್ಟದಲ್ಲಿದೆ ಎಂಬುದನ್ನೂ ಸಮೀಕ್ಷೆ ನಡೆಸುತ್ತಿದ್ದೇವೆ. ಈಗ ಶಿಕ್ಷಕರು ರಜೆಯಲ್ಲಿ ಇದ್ದಾರೆ. ಸಮೀಕ್ಷೆ ಮಾಡಬೇಕಾದ ಮನೆಗಳ ಸಂಖ್ಯೆಯೂ ಜಾಸ್ತಿ ಇದೆ. ಹೀಗಾಗಿ, ಆದಷ್ಟು ಬೇಗ ಈ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂಬುದು ಸರ್ಕಾರದ ನಿರ್ಧಾರ. ಕೆಲವೆಡೆ ಶಿಕ್ಷಕರ ಕೊರತೆ ಇದೆ, ಆದರೆ ಗೊಂದಲಗಳಿಲ್ಲ. ಈ ಸಮೀಕ್ಷೆಯನ್ನು ಮುಂದೂಡಬೇಕು ಎಂಬ ಆಗ್ರಹ ಅರ್ಥವಿಲ್ಲದ್ದು’ ಎಂದ ಅವರು, ‘ಸಮೀಕ್ಷೆ ಮಾಡಬೇಕೆಂದಾದರೆ ಇಂದು ಮಾಡಿದರೇನು? ನಾಳೆ ಮಾಡಿದರೇನು’ ಎಂದು ಪ್ರಶ್ನಿಸಿದರು.
‘ಸಿದ್ದಾಪುರವನ್ನು ಸಾಗರಕ್ಕೆ ಸೇರಿಸುವ ಯಾವುದೇ ಯೋಜನೆ ಕಾರ್ಯರೂಪಕ್ಕೆ ಬರುವುದಿಲ್ಲ. ಈ ಹಿಂದೆ ಭಟ್ಕಳವನ್ನು ಕುಂದಾಪುರಕ್ಕೆ ಸೇರಿಸುವ ಬಗ್ಗೆಯೂ ಪ್ರಸ್ತಾವನೆಯಾಗಿತ್ತು. ಕಾರವಾರವನ್ನು ಗೋವಾಕ್ಕೆ ಸೇರಿಸುತ್ತೇವೆ. ಅಂತಹ ಯಾವುದೇ ಪ್ರಯತ್ನ ಸರ್ಕಾರದ ಮುಂದೂ ಇಲ್ಲ, ನಮ್ಮ ಗಮನಕ್ಕೂ ಬಂದಿಲ್ಲ. ಎರಡು ಜಿಲ್ಲೆ ಅಗತ್ಯತೆ ಇದ್ದರೆ ಇಲ್ಲಿಯೇ ನಾವು ನಿರ್ಧಾರ ಕೈಗೊಳ್ಳೋಣ. ಎಲ್ಲರ ಅಭಿಪ್ರಾಯದಂತೆ ಎರಡು ಜಿಲ್ಲೆಯ ಬಗ್ಗೆ ತೀರ್ಮಾನ ಕೈಗೊಳ್ಳೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.