ಹೊನ್ನಾವರ: ಶರಾವತಿ ನದಿಯ ನೀರನ್ನು ಬೆಂಗಳೂರು ಹಾಗೂ ಇತರ ಭಾಗಗಳಿಗೆ ಸರಬರಾಜು ಮಾಡುವ ಮತ್ತು ಪಶ್ಚಿಮ ಘಟ್ಟದ ಭೂಗರ್ಭದಲ್ಲಿ ಅಳವಡಿಸುವ ಪೈಪ್‌ಲೈನ್ ಮೂಲಕ ಮೇಲಕ್ಕೆತ್ತಿ ವಿದ್ಯುತ್ ತಯಾರಿಸುವ ಯೋಜನೆಗಳನ್ನು ವಿರೋಧಿಸುವ ಜತೆಗೆ ಯೋಜನೆ ಜಾರಿಗೆ ಸರ್ಕಾರ ಮುಂದಾದಲ್ಲಿ ಅದನ್ನು ಪ್ರತಿಭಟಿಸುವ ನಿರ್ಣಯಗಳನ್ನು ಬುಧವಾರ ಇಲ್ಲಿ ನಡೆದ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಕೈಗೊಳ್ಳಲಾಯಿತು.
‘ಶರಾವತಿ ನದಿಯಲ್ಲಿ ಈಗಾಗಲೇ 10 ಏತ ನೀರಾವರಿ ಯೋಜನೆಗಳಿದ್ದು ಇಡಗುಂಜಿ, ಮುರ್ಡೇಶ್ವರ, ಹೊನ್ನಾವರ ಪಟ್ಟಣಗಳಿಗೂ ನದಿಯ ನೀರು ಪೂರೈಕೆ ಮಾಡಲಾಗುತ್ತಿದೆ. ನದಿಯಿಂದ ಸಮುದ್ರದತ್ತ ಸಾಗುವ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿರುವುದರಿಂದ ಸಮುದ್ರದ ಉಪ್ಪು ನೀರು ನದಿಯ ಮೇಲ್ಬಾಗದ 25 ಕಿ.ಮೀ.ವರೆಗೆ ನುಗ್ಗಿ ಬೆಳೆ ನಷ್ಟಕ್ಕೆ ಕಾರಣವಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಶರಾವತಿ ಕೊಳ್ಳ ಪರಿಸರ ಸೂಕ್ಷ್ಮ ವಲಯದಲ್ಲಿದ್ದು ಭೂಗರ್ಭದಲ್ಲಿ ಪೈಪ್ ಲೈನ್ ಅಳವಡಿಸುವುದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಆತಂಕ ಎದುರಾಗಿದೆ. ಹೀಗಾಗಿ ಹೊಸ ಯೋಜನೆ ಜಾರಿಗೆ ಅವಕಾಶ ನೀಡಬಾರದು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ತಜ್ಞರನ್ನೊಳಗೊಂಡ ಸ್ವತಂತ್ರ ಸಮಿತಿ ರಚಿಸಿ, ಆ ಸಮಿತಿಯಿಂದ ಯೋಜನೆಗಳಿಂದುಂಟಾಗುವ ಹಾನಿಯ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಯೋಜನೆಗಳನ್ನು ಜಾರಿಗೆ ತರದಂತೆ ಆಗ್ರಹಿಸಿ ಮುಖ್ಯಮಂತ್ರಿ, ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕೆಂದೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಚಂದ್ರಕಾಂತ ಕೊಚರೇಕರ, ಯೋಗೇಶ ರಾಯ್ಕರ, ಕೇಶವ ನಾಯ್ಕ ಬಳ್ಕೂರ, ಮಂಜುನಾಥ ನಾಯ್ಕ ಗೇರುಸೊಪ್ಪ, ಜಿ.ಎನ್.ಗೌಡ, ವಿನೋದ ನಾಯ್ಕ ಮಾವಿನಹೊಳೆ, ಅನಂತ ನಾಯ್ಕ ಹೆಗ್ಗಾರ, ಪ್ರಭು ಹಳ್ಳೇರ, ಜಿ.ಟಿ.ಹಳ್ಳೇರ, ರಾಜೇಶ ತಾಂಡೇಲ, ವಿನಾಯಕ ನಾಯ್ಕ, ಸದ್ರುದ್ದೀನ್, ಶ್ರೀಧರ ನಾಯ್ಕ, ರವಿ ಫರ್ನಾಂಡಿಸ್, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.