ಕಾರವಾರ: ಶಿರೂರು ದುರಂತಕ್ಕೆ ಕಾರಣರಾದ ಐಆರ್‌ಬಿ ಕಂಪನಿ ನಿರ್ದೇಶಕರ ವಿಚಾರಣೆ ನಡೆಸದೆ ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
‘ಶಿರೂರಿನಲ್ಲಿ ಗುಡ್ಡ ಕುಸಿದು ದುರಂತ ಸಂಭವಿಸಲು ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ವಿಸ್ತರಿಸಿದ್ದ ಐಆರ್‌ಬಿ ಕಂಪನಿ ಕಾರಣ. ಈ ಕಾರಣಕ್ಕಾಗಿ ಕಂಪನಿಯ ನಿರ್ದೇಶಕರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಿದ ಬಳಿಕ ಫೆ.14 ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈವರೆಗೆ ಪ್ರಕರಣದ ತನಿಖೆ ಪ್ರಗತಿ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ. ದೂರುದಾರನಾದ ನನ್ನನ್ನು ಒಂದು ದಿನವೂ ವಿಚಾರಣೆಗೆ ಕರೆಯಲಿಲ್ಲ’ ಎಂದು ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
‘ಪ್ರಕರಣದ ತನಿಖೆ ನಡೆಸಿದ್ದು ನ್ಯಾಯಾಲಯಕ್ಕೆ ಈಗಾಗಲೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ತನಿಖೆಯನ್ನು ನ್ಯಾಯಯುತವಾಗಿ ನಡೆಸಲಾಗಿದೆ’ ಎಂದು ಡಿಎಸ್‍ಪಿ ಎಸ್.ವಿ.ಗಿರೀಶ್ ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು.
‘ದೂರುದಾರರನ್ನು, ಆರೋಪಿಗಳ ವಿಚಾರಣೆ ನಡೆಸದೆ ಹೇಗೆ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ. ಪೊಲೀಸರು ಪ್ರಕರಣದ ತನಿಖೆ ಸರಿಯಾಗಿ ನಡೆಸಿಲ್ಲ’ ಎಂದು ಸ್ವಾಮೀಜಿ ಆರೋಪಿಸಿದರು.
‘ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಿದ ಸರ್ಕಾರ ಶಿರೂರು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗಿದೆ. ದುರ್ಘಟನೆಯಲ್ಲಿ ಮೃತಪಟ್ಟ ಲೊಕೇಶ ನಾಯ್ಕ, ಜಗನ್ನಾಥ ನಾಯ್ಕ ಮೃತದೇಹ ಈವರೆಗೆ ಸಿಕ್ಕಿಲ್ಲ. ಅವರ ಮರಣ ಪ್ರಮಾಣ ಪತ್ರವನ್ನೂ ಕುಟುಂಬದವರಿಗೆ ನೀಡುತ್ತಿಲ್ಲ’ ಎಂದು ದೂರಿದರು.
‘ಮೃತರ ಕುಟುಂಬಕ್ಕೆ ಕನಿಷ್ಠ ₹1 ಕೋಟಿ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವೊಲಿಸಿದರೂ ಸಂಜೆಯವರೆಗೂ ಸ್ವಾಮೀಜಿ ಜಿಲ್ಲಾಧಿಕಾರಿ ಕಚೇರಿ ಎದುರು ಮಳೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಈಡಿಗ ಮಹಾಮಂಡಳಿಯ ರಾಜನ್, ಶ್ರೀಧರ ನಾಯ್ಕ, ಮನೀಷಾ ನಾಯ್ಕ, ಇತರರು ಪಾಲ್ಗೊಂಡಿದ್ದರು.
ಶಿರೂರು ದುರಂತಕ್ಕೆ ಕಾರಣರಾದ ಐಆರ್‌ಬಿ ಕಂಪನಿ ವಿರುದ್ಧ ತನಿಖೆ ನಡೆಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಈ ಪ್ರಕರಣದ ತನಿಖೆ ಜವಾಬ್ದಾರಿಯನ್ನು ನ್ಯಾಯಾಂಗ ಅಥವಾ ಸಿಬಿಐಗೆ ವಹಿಸಬೇಕುಪ್ರಣವಾನಂದ ಸ್ವಾಮೀಜಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.