ಶಿರಸಿ: ಪ್ರಸಕ್ತ ವರ್ಷವೂ ಅಡಿಕೆಗೆ ಎಲೆಚುಕ್ಕಿ ರೋಗ ಬಾಧೆ ಮುಂದುವರೆದಿದ್ದು, ಅದರ ಪರಿಣಾಮ ಅಡಿಕೆ ತೋಟಗಳಲ್ಲಿ ಇಳುವರಿ ಕುಸಿತ, ಅಡಿಕೆ ಗುಣಮಟ್ಟ ಇಳಿಕೆಯ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
ನಾಲ್ಕು ವರ್ಷಗಳಿಂದ ಎಲೆಚುಕ್ಕಿ ತನ್ನ ವ್ಯಾಪ್ತಿಯನ್ನು ಏರಿಸಿಕೊಳ್ಳುತ್ತಲೇ ಇದೆ. ಪ್ರಸಕ್ತ ವರ್ಷ ಎಂಟೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಅಡಿಕೆ ಎಲೆಗಳ ಮೇಲೆ ಹಳದಿ ವರ್ತುಲಗಳು, ಮಧ್ಯೆ ಕಪ್ಪು ಚುಕ್ಕಿ ಮೂಡುವ ಈ ರೋಗದಿಂದ ಎಲೆಗಳಲ್ಲಿ ಆಹಾರ ಉತ್ಪಾದನೆ ಸಾಧ್ಯವಾಗದೇ ಮರ ಸೊರಗಲಾರಂಭಿಸುತ್ತವೆ.
‘ಮರದ ಟೊಂಗೆಗಳು ಬಾಗುತ್ತಿವೆ. ಎಲೆಚುಕ್ಕಿ ಬಾಧಿತ ಅಡಿಕೆ ತೋಟಗಳಲ್ಲಿ ಹಿಡುವಳಿಯೂ ಕ್ಷೀಣಿಸತೊಡಗುತ್ತದೆ. ವರ್ಷಗಳ ಎಲೆಚುಕ್ಕಿ ರೋಗ ಬಾಧಿಸುತ್ತಿರುವ ಕಾರಣಕ್ಕೆ ಅನೇಕ ಅಡಿಕೆ ಮರಗಳಲ್ಲಿ ಗೊನೆಯೂ ಸರಿಯಾಗಿ ಬಂದಿಲ್ಲ. ಕೆಲವೆಡೆ ಹಸಿ ಅಡಿಕೆ ಮೇಲೆ ಎಲೆಚುಕ್ಕಿ ವ್ಯಾಪಿಸಿ ಗುಣಮಟ್ಟಕ್ಕೂ ಹೊಡೆತ ನೀಡುತ್ತಿದೆ. ಇಳುವರಿ ಕುಸಿಯುವ ಆತಂಕ ಇದೆ’ ಎಂದು ರೈತರೊಬ್ಬರು ಹೇಳಿದರು.
‘ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯಿಂದ ಉಚಿತ ಔಷಧ ನೀಡಲಾಗಿತ್ತು. ಅಡಿಕೆಗೊನೆಗಳಿಗೂ ಈ ಚುಕ್ಕಿಗಳು ಆವರಿಸಿಕೊಂಡು ಇನ್ನೂ ಸಂಪೂರ್ಣ ಬೆಳೆಯದ ಅಡಿಕೆ ಕಾಯಿಗಳು ಉದುರಲಾರಂಭಿಸಿವೆ. ಈವರೆಗೂ ಎಲೆಚುಕ್ಕಿ ಕಾಣಿಸಿಕೊಂಡಿರದ ಬನವಾಸಿ ಭಾಗದಲ್ಲಿಯೂ ಈ ವರ್ಷ ಅಡಿಕೆ ಮರಗಳು ಕೆಂಪಾಗತೊಡಗಿವೆ’ ಎಂದು ರೈತ ಚಂದ್ರಶೇಖರ ನಾಯ್ಕ ಹೇಳಿದರು.
‘ವಾತಾವರಣದಲ್ಲಿ ಆರ್ದೃತೆ ಪ್ರಮಾಣ ಹೆಚ್ಚಾದರೆ ಎಲೆಚುಕ್ಕಿ ರೋಗ ತೀವ್ರವಾಗಿ ವಿಸ್ತರಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಈ ವಾತಾವರಣ ಇರುವುದರಿಂದ ಕಳೆದ ವರ್ಷ ಈ ತಿಂಗಳಿನಲ್ಲಿಯೇ ಎಲೆಚುಕ್ಕಿ ವೇಗವಾಗಿ ಹಬ್ಬಿತ್ತು. ವಾತಾವರಣದ ಆರ್ದೃತೆ ಕಡಿಮೆ ಆದ ಕಾರಣ ಆ ಬಳಿಕ ರೋಗ ನಿಯಂತ್ರಣಕ್ಕೆ ಬಂದಿತ್ತು. ಈ ವರ್ಷ ಮುನ್ನೆಚ್ಚರಿಕೆಯಾಗಿ ಹಲವು ರೈತರು ಮೇ ತಿಂಗಳಿನಲ್ಲಿ ಎಲೆಗಳಿಗೆ ಬೋರ್ಡೋ ಸಿಂಪಡಣೆ ಮಾಡಿದ್ದರು. ಆದಾಗ್ಯೂ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗದ ಕಾರಣ ರೋಗ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ’ ಎಂದು ರೈತರೊಬ್ಬರು ಹೇಳಿದರು.
ಕಳೆದ ವರ್ಷ 10 ಸಾವಿರ ಹೆ. ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಈ ವರ್ಷ ಅದರ ಪ್ರಮಾಣ ಕಡಿಮೆಯಿದೆ. ತೇವಾಂಶ ಕಡಿಮೆಯಾದರೆ ರೋಗ ಹತೋಟಿಗೆ ಬರುತ್ತದೆಬಿ.ಪಿ. ಸತೀಶ ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.