
ಶಿರಸಿ: ರೈತರ ಜೀವನಾಡಿ ವರದಾ, ಶಾಲ್ಮಲಾ ನದಿ ಸೇರಿ ವಿವಿಧ ಜಲಮೂಲಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಬಾಂದಾರ (ಬ್ಯಾರೇಜ್) ಗೇಟ್ ಅಳವಡಿಸಲು ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ 150ಕ್ಕೂ ಹೆಚ್ಚು ಬ್ಯಾರೇಜ್‍ಗಳಿವೆ. ಅವುಗಳಲ್ಲಿ 20ಕ್ಕೂ ಹೆಚ್ಚು ದೊಡ್ಡಮಟ್ಟದ ಬ್ಯಾರೇಜ್‍ಗಳು ರೈತರ ನೀರಿನ ಮೂಲವಾಗಿವೆ. ಶಿರಸಿ ತಾಲ್ಲೂಕಿನ ತಿಗಣಿ ಬ್ಯಾರೇಜ್ ಅರ್ಧ ಭಾಗದಲ್ಲಿ ಗೇಟ್ ಅಳವಡಿಕೆಯಾಗಿದ್ದು ಹೊರತುಪಡಿಸಿ, ಉಳಿದೆಲ್ಲೆಡೆ ಗೇಟ್ ಅಳವಡಿಕೆ ಕಾರ್ಯ ಇನ್ನೂ ಆರಂಭವಾಗಿಲ್ಲ. ಮಳೆ ಮುಗಿದು ಹಲವು ದಿನಗಳು ಕಳೆದು, ಜಲಮೂಲಗಳ ನೀರಿನ ಹರಿವಿನ ಪ್ರಮಾಣ ತಗ್ಗುತ್ತಿದ್ದರೂ ಗೇಟ್ ಅಳವಡಿಸದ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
‘ನೀರಾವರಿ ಆಶ್ರಿತ ಪ್ರದೇಶವಾದ ಬನವಾಸಿ ಹೋಬಳಿಯ ರೈತರಿಗೆ ವರವಾಗಿರುವ ವರದಾ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಗೂ ರೈತರ ಬೆಳೆಗಳಿಗೆ ನೀರು ಹಾಯಿಸಲು ಅನುಕೂಲವಾಗುವ ದೃಷ್ಟಿಯಿಂದ ವರದಾ ನದಿಗೆ ಭಾಶಿ, ಮೊಗವಳ್ಳಿ ಹಾಗೂ ತಿಗಣಿಯಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ, ಈಗ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಆದರೂ ಅಧಿಕಾರಿಗಳು ಗೇಟ್ ಅಳವಡಿಸಲು ಮುಂದಾಗದಿರುವುದು ಬನವಾಸಿ ಸೇರಿದಂತೆ ಸುತ್ತಮುತ್ತಲ ಕೃಷಿಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ’ ಎಂಬುದು ರೈತರ ದೂರಾಗಿದೆ.
‘ಬ್ಯಾರೇಜ್ ನಿರ್ಮಿಸಿದ ಆಯಾ ಇಲಾಖೆಗಳೇ ಅವುಗಳ ನಿರ್ವಹಣೆಗೆ ಗಮನ ಹರಿಸಬೇಕು. ಕೆಲವೆಡೆ ಗ್ರಾಮ ಪಂಚಾಯಿತಿ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರೆ, ಇನ್ನೂ ಕೆಲವೆಡೆ ಸಣ್ಣ ನೀರಾವರಿ ಇಲಾಖೆ ಜವಾಬ್ದಾರಿ ನಿರ್ವಹಿಸುತ್ತದೆ. ಕಳೆದ ಬಾರಿ ಸರಿಯಾದ ಸಮಯಕ್ಕೆ ಹಲಗೆ ಜೋಡಿಸುವ ಕಾರ್ಯ ಆಗಿದ್ದು, ನೀರು ಕೂಡ ಉತ್ತಮವಾಗಿ ಸಂಗ್ರಹವಾಗಿತ್ತು. ಆದರೆ, ಈ ವರ್ಷ ಎಲ್ಲಿಯೂ ನಿಗದಿತ ಸಮಯದಲ್ಲಿ ಹಲಗೆ ಜೋಡಣೆ ಕಾರ್ಯ ನಡೆದಿಲ್ಲ. ಹೀಗಾಗಿ ನೀರು ಹರಿದು ಹೋಗುತ್ತಿದೆ. ಇದೇ ರೀತಿಯಾದರೆ ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿಶ್ಚಿತ’ ಎನ್ನುತ್ತಾರೆ ಮೊಗವಳ್ಳಿಯ ರಾಮಾ ನಾಯ್ಕ.
‘ಈ ಹಿಂದಿನ ವರ್ಷಗಳಲ್ಲಿ ಗೇಟ್ ಅಳವಡಿಸಿದ ಸಂದರ್ಭಗಳಲ್ಲಿ ಅಕಾಲಿಕ ಮಳೆಯಾದ ಕಾರಣ ಕೆಲವೆಡೆ ಗೇಟ್‍ಗಳಿಗೆ ಧಕ್ಕೆಯಾಗಿತ್ತು. ಈ ಬಾರಿಯೂ ಅಕಾಲಿಕ ಮಳೆಯಾಗುತ್ತಿದ್ದ ಕಾರಣ ಗೇಟ್ ಅಳವಡಿಕೆ ವಿಳಂಬವಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ತಿಳಿಸಿದರು.
ಕೆಲವೆಡೆ ಗ್ರಾಮ ಪಂಚಾಯಿತಿಯವರು ಗೇಟ್ ಅಳವಡಿಸುತ್ತಾರೆ. ಉಳಿದೆಡೆ ಇಲಾಖೆಯಿಂದ ಹಂತ ಹಂತವಾಗಿ ಗೇಟ್ ಅಳವಡಿಸಲಾಗುವುದು
- ವಿಕಾಸ ನಾಯ್ಕ ಎಇ ಸಣ್ಣ ನೀರಾವರಿ ಇಲಾಖೆ
‘ಕೃಷಿ ಬಳಕೆಗೆ ಆದ್ಯತೆ’
‘ದೊಡ್ಡದಾದ ಬ್ಯಾರೇಜ್ ಜತೆ ತಾಲ್ಲೂಕಿನ ಕಲಗಾರ ದೇವರಹೊಳೆ ಮೆಣಸಿಕೊಪ್ಪ ವಡ್ಡಿನಕೊಪ್ಪ ಮಾಸ್ತಿಜಡ್ಡಿ ಕಲಕರಡಿ ಸೇರಿದಂತೆ ಹಲವು ಕಡೆ ಚಿಕ್ಕದಾಗಿರುವ ಬ್ಯಾರೇಜ್ ನಿರ್ಮಾಣಗೊಂಡಿವೆ. ಅಂದಾಜು 6ರಿಂದ 8 ಸಾವಿರ ಎಕರೆಗೆ ನೀರಾವರಿ ಹಾಗೂ ಸಾವಿರಾರು ಮಂದಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಇವುಗಳ ನಿರ್ಮಾಣವಾಗಿದೆ. ದೇವರಹೊಳೆ ಹೊರತುಪಡಿಸಿದರೆ ಉಳಿದ ಬ್ಯಾರೇಜ್‍ಗಳಲ್ಲಿ ಸಂಗ್ರಹವಾಗುವ ನೀರು ಕೃಷಿಗೆ ಬಳಸಲಾಗುತ್ತಿದೆ’ ಎಂಬುದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.