ADVERTISEMENT

ಶಿರಸಿ–ಕುಮಟಾ ರಸ್ತೆ ಕಾಮಗಾರಿ ನಿಧಾನ: ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಗೆ ವಿಳಂಬ?

ರಾಜೇಂದ್ರ ಹೆಗಡೆ
Published 10 ನವೆಂಬರ್ 2025, 2:54 IST
Last Updated 10 ನವೆಂಬರ್ 2025, 2:54 IST
ಶಿರಸಿ ಕುಮಟಾ ರಸ್ತೆ ಕಾಮಗಾರಿ ಬಾಕಿಯಿರುವುದು 
ಶಿರಸಿ ಕುಮಟಾ ರಸ್ತೆ ಕಾಮಗಾರಿ ಬಾಕಿಯಿರುವುದು    

ಶಿರಸಿ: ಸಾಗರಮಾಲಾ ಯೋಜನೆಯಡಿ ಕೈಗೊಳ್ಳುತ್ತಿರುವ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವ ದೂರು ಹೆಚ್ಚಿದೆ.

ತಾಲ್ಲೂಕಿನ ಗಡಿಭಾಗದವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟದ 4 ಕಿ.ಮೀ ವ್ಯಾಪ್ತಿಯಲ್ಲಿ ಒಂದು ಬದಿಯಲ್ಲಿ ಕಾಂಕ್ರಿಟ್‌ ಹಾಕಿ ಹಾಗೆಯೇ ಬಿಡಲಾಗಿದೆ. ಮೇ ತಿಂಗಳ ಅಂತ್ಯದಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

‘ಮಳೆ ಮುಗಿದು ಒಂದು ತಿಂಗಳಾದರೂ ಕಾಮಗಾರಿಗೆ ವೇಗ ನೀಡಿಲ್ಲ. ಇದರಿಂದ ರಸ್ತೆ ಕಾಮಗಾರಿ ನಿಗದಿತ ಸಮಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಕ್ಷೀಣಿಸಿದೆ’ ಎಂಬುದು ಜನರ ಆರೋಪ.

ADVERTISEMENT

‘ರಸ್ತೆ, ತಡೆಗೋಡೆ, ಸೇತುವೆ ಸೇರಿದಂತೆ ಈಗಾಗಲೇ ಶೇ 70ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಈಗಾಗಲೇ ನಡೆಸಿದ ಕಾಮಗಾರಿಗೆ ಸರ್ಕಾರದಿಂದ ₹100 ಕೋಟಿಗೂ ಅಧಿಕ ಹಣ ಬಿಡುಗಡೆ ಬಾಕಿಯಿದೆ. ಕಾರ್ಮಿಕರಿಗೆ ಸಂಬಳ ನೀಡಲು ಕಷ್ಟಸಾಧ್ಯವಾದ ಕಾರಣ ಕಾಮಗಾರಿ ನಿಧಾನವಾಗಿದೆ’ ಎಂದು ಕಾಮಗಾರಿ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಮೂಲಗಳು ತಿಳಿಸಿವೆ.

‘ದೇವಿಮನೆ ಘಟ್ಟ ಸೇರಿದಂತೆ ಉಳಿದ ಕಡೆ ರಸ್ತೆ ನಿರ್ಮಾಣ ಒಟ್ಟೂ 6 ಕಿ.ಮೀ ಬಾಕಿ ಇದೆ. ಘಟ್ಟ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ 12ರಿಂದ 14 ಮೀಟರ್‌ ಮಾತ್ರ ಸ್ಥಳ ಲಭಿಸಿದ್ದು, ಅಲ್ಲಿ ಸಿಮೆಂಟ್‌ ಫೇವರ್ ಮಷಿನ್‌ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ಕಾರ್ಮಿಕರಿಂದ ಕೆಲಸ ಮಾಡಬೇಕಿದ್ದು, ತಾಂತ್ರಿಕ ಕಾರಣಕ್ಕೆ ಅದಕ್ಕೆ ಅನುಮತಿ ದೊರೆಯುತ್ತಿಲ್ಲ. ಇದರಿಂದಾಗಿ ಘಟ್ಟದಲ್ಲಿ ಸ್ವಲ್ಪ ನಿಧಾನವಾಗಿ ಕಾಮಗಾರಿ ನಡೆಯುತ್ತಿದೆ’ ಎಂಬುದಾಗಿ ಕಂಪನಿಯ ಸಿಬ್ಬಂದಿಯೊಬ್ಬರು ಹೇಳಿದರು.

‘ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಮಾರಿಕಾಂಬಾ ದೇವಿ ಜಾತ್ರೆ ನಡೆಯಲಿದ್ದು, ಕರಾವಳಿ ಭಾಗದಿಂದ ಲಕ್ಷಾಂತರ ಭಕ್ತರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಅಷ್ಟರೊಳಗೆ ಕಾಮಗಾರಿ ಮುಗಿಯದಿದ್ದರೆ ಸಮಸ್ಯೆಯಾಗಲಿದೆ. ಬದಲಿ ಮಾರ್ಗಗಳೂ ಹದಗೆಟ್ಟಿದ್ದು ಆ ಮಾರ್ಗ ಬಳಸಿ ವಾಹನ ಸಂಚರಿಸುವುದು ಸಮಸ್ಯೆಯಾಗಲಿದೆ’ ಎಂಬುದು ಜನರ ಅಭಿಪ್ರಾಯ.

ಅವಧಿ ವಿಸ್ತರಣೆ ಮಾಡುವುದಿಲ್ಲ. ಸಮಯ ಮಿತಿಯೊಳಗಡೆ ಕಾಮಗಾರಿ ಮುಕ್ತಾಯವಾಗದಿದ್ದರೆ ದಂಡ ಮತ್ತು ಇನ್ನಿತರ ಕ್ರಮ ತೆಗೆದುಕೊಳ್ಳಲಾಗುತ್ತದೆ
ಕೆ.ಶಿವಕುಮಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ

ಬಸ್ ಸೌಲಭ್ಯಕ್ಕೆ ಒತ್ತಾಯ

‘ಶಿರಸಿಯಿಂದ ದೇವಿಮನೆವರೆಗೆ ಹಾಗೂ ಕುಮಟಾದಿಂದ ದೇವಿಮನೆವರೆಗೆ ಸಾರ್ವಜನಿಕರ ಆಗ್ರಹದ ಮೇರೆಗೆ ಬಸ್‌ ಸೌಲಭ್ಯ ಒದಗಿಸಲಾಗಿದೆ. ಬಸ್‌ ತುಂಬಿ ತುಳುಕುತ್ತಿದ್ದು ಶಿರಸಿ-ಕುಮಟಾ ಮಾರ್ಗ ಮಧ್ಯದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ಒಂದು ಭಾಗದಲ್ಲಿ ರಸ್ತೆ ಪೂರ್ಣಗೊಂಡಿರುವುದರಿಂದ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಸಿಬ್ಬಂದಿ ನೇಮಿಸಿ ಬಸ್‌ ಓಡಾಟಕ್ಕೆ ಅವಕಾಶ ನೀಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.