ಶಿರಸಿ: ಶೈಕ್ಷಣಿಕ ಜಿಲ್ಲೆಯ 40ಕ್ಕೂ ಹೆಚ್ಚು ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಕೋಣೆ ಶಿಥಿಲವಾದರೆ, 70ಕ್ಕೂ ಹೆಚ್ಚು ಕಡೆ ಹೊಸ ಕೋಣೆಯ ಅಗತ್ಯವಿದೆ. ಇಂತಹ ಶಾಲೆಗಳಲ್ಲಿ ಇಕ್ಕಟ್ಟಾದ ಸ್ಥಳಗಳಲ್ಲಿ ಅಡುಗೆ ಅನಿಲದ ಸಿಲಿಂಡರ್ ಇರಿಸಿ ಅಪಾಯದ ನಡುವೆಯೇ ಅಡುಗೆ ಸಿದ್ಧಪಡಿಸಲಾಗುತ್ತಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳಲ್ಲಿ ಪಿಎಂ ಪೋಷಣ ಯೋಜನೆ ಅನ್ವಯವಾಗುವ ಒಟ್ಟು 309 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. 17 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಇಷ್ಟು ಸಂಖ್ಯೆಯ ಶಾಲೆಗಳಲ್ಲಿ 193 ಶಾಲೆಗಳ ಅಕ್ಷರ ದಾಸೋಹದ ಬಿಸಿಯೂಟ ಕೋಣೆಗಳು ಸುಸಜ್ಜಿತವಾಗಿವೆ. 71 ಶಾಲೆಗಳಲ್ಲಿ ಹೊಸ ಅಡುಗೆ ಕೋಣೆ ಬೇಡಿಕೆಯಿದೆ. 41 ಶಾಲೆಗಳಲ್ಲಿ ಅಡುಗೆ ಕೋಣೆಗಳು ಶಿಥಿಲವಾಗಿದ್ದು, ಅಡುಗೆ ಸಿಬ್ಬಂದಿ, ಶಿಕ್ಷಕರು ಸೇರಿದಂತೆ ಮಕ್ಕಳಿಗೆ ಅಪಾಯ ತಂದೊಡ್ಡುವ ಹಂತದಲ್ಲಿವೆ.
‘2003–04ರಲ್ಲಿ 41 ಶಾಲೆಗಳಲ್ಲಿ ₹60 ಸಾವಿರ ವೆಚ್ಚದಲ್ಲಿ ಅಡುಗೆ ಕೋಣೆ ನಿರ್ಮಿಸಲಾಗಿತ್ತು. ಆಗ ಆ ಮೊತ್ತದಲ್ಲಿ ಹೆಂಚಿನ ಮನೆಗಳ ಕೊಠಡಿ ಸಿದ್ಧಗೊಂಡಿತ್ತು. ನಿರ್ವಹಣೆ ಕೊರತೆ ಜತೆಗೆ ಮಳೆ, ಗಾಳಿಗೆ ಶಿಥಿಲಗೊಂಡಿವೆ. ಕೆಲವನ್ನು ತಾತ್ಕಾಲಿಕ ದುರಸ್ತಿಗೊಳಿಸಿ ಬಳಸಲಾಗುತ್ತಿದೆ. ಬಳಕೆಗೆ ಬಾರದ ಕೋಣೆಗಳಿರುವಲ್ಲಿ ಶಾಲೆಗಳ ಇತರೆ ಕೊಠಡಿಯನ್ನು ತಾತ್ಕಾಲಿಕವಾಗಿ ಬಳಸಲಾಗುತ್ತಿದೆ’ ಎಂಬುದು ಅಕ್ಷರ ದಾಸೋಹದ ಅಧಿಕಾರಿಗಳ ಮಾತು.
‘ಇಕ್ಕಟ್ಟಾದ ಸ್ಥಳದಲ್ಲೇ ಪಾತ್ರೆ, ಇತರೆ ಪರಿಕರಗಳನ್ನು ಇರಿಸಿಕೊಳ್ಳಬೇಕು. ಅಡುಗೆ ಸಿಬ್ಬಂದಿ ಇಲ್ಲಿಯೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಮಳೆ ಬಂದಾಗ ಕೆಲವು ಶಾಲೆಗಳಲ್ಲಿ ಅಡುಗೆ ತಯಾರಿಸಲು ತೊಡಕಾಗುತ್ತದೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಯಾರು ಹೊಣೆ’ ಎಂಬುದು ಪಾಲಕರ ಪ್ರಶ್ನೆಯಾಗಿದೆ.
‘ಶಾಲೆಗಳಲ್ಲಿ ಅಡುಗೆ ಕೋಣೆಯ ಕೊರತೆ ಇದ್ದು, ಸಮಸ್ಯೆ ನಡುವೆಯೇ ಅಡುಗೆ ತಯಾರಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನದಲ್ಲಿದೆ. ಅಡುಗೆ ಕೋಣೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರುವಲ್ಲಿ ಶಿಕ್ಷಕರು ಹೆದುರುತ್ತಿದ್ದಾರೆ. ಸೇವೆಗೆ ಎಲ್ಲಿ ತೊಡುಕಾಗುತ್ತದೆಯೋ ಎಂಬ ಭಯದಿಂದ ದಿನ ದೂಡುತ್ತಿದ್ದಾರೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಡುಗೆ ಸಿಬ್ಬಂದಿ.
71 ಹೊಸ ಅಡುಗೆ ಕೋಣೆ ಹಾಗೂ 41 ಕೋಣೆಗಳ ದುರಸ್ತಿಗೆ ಈಗಾಗಲೇ ಕೇಂದ್ರ ಕಚೇರಿ ಜಿಲ್ಲಾ ಪಂಚಾಯಿತಿಗೆ ಅನುದಾನದ ಬೇಡಿಕೆ ಸಲ್ಲಿಸಲಾಗಿದೆ.ರವಿ ಬೆಂಚೊಳ್ಳಿ, ಅಕ್ಷರ ದಾಸೋಹದ ಸಹಾಯಕನಿರ್ದೇಶಕ
ಇಚ್ಛಾಶಕ್ತಿ ಕೊರತೆ: ಆರೋಪ
ನರೇಗಾ ಯೋಜನೆಯಡಿ ಶೌಚಗೃಹ ಕಾಂಪೌಂಡ್ ಕುಡಿಯುವ ನೀರು ಅಡುಗೆ ಕೋಣೆ ನಿರ್ಮಾಣ ಸೇರಿದಂತೆ ಇನ್ನಿತರೆ ಅಗತ್ಯ ಸೌಕರ್ಯ ಒದಗಿಸಲು ಅವಕಾಶವಿದೆ. ಇದರಲ್ಲಿ ಕಡಗೋಡ ಸೀಗೆಹಳ್ಳಿ ಹುಲೇಕಲ್ ಬನ್ನಿಕಟ್ಟ ಬೆಳಲೆ ಕಲಗಾರ ಹಾಗೂ ಇನ್ನೂ ಕೆಲವು ಶಾಲೆಗಳಲ್ಲಿ ಅಡುಗೆ ಕೋಣೆ ನಿರ್ಮಿಸಲಾಗುತ್ತಿದೆ. ಆದರೆ ಕೆಲವು ಶಾಲೆಗಳಲ್ಲಿ ನಿರ್ಮಿಸಿಲ್ಲ. ಶಾಲೆಗಳಲ್ಲಿ ಅಡುಗೆ ಕೋಣೆ ಕೊರತೆ ಇರುವುದು ಆಯಾ ಪಿಡಿಒಗಳ ಗಮನಲ್ಲಿದೆ. ಎಸ್‌ಡಿಎಂಸಿ ಹಾಗೂ ಶಿಕ್ಷಕರು ಅಡುಗೆ ಕೋಣೆ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಪಿಡಿಒಗಳ ಇಚ್ಛಾಶಕ್ತಿಯ ಕೊರತೆ ಪರಿಣಾಮ ಅಡುಗೆ ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.