
ಶಿರಸಿ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಶಿವಗಂಗಾ ಜಲಪಾತವು, ಹದಗೆಟ್ಟ ರಸ್ತೆಗಳು, ಮುರಿದ ವೀಕ್ಷಣಾ ಗೋಪುರ, ಉರುಳಿ ಬಿದ್ದಿರುವ ಮೆಟ್ಟಿಲುಗಳು ಮತ್ತು ಸುರಕ್ಷತೆಯ ಕೊರತೆಯಿಂದಾಗಿ ಪ್ರವಾಸಿಗರ ಪಾಲಿಗೆ ಆತಂಕದ ಗೂಡಾಗಿದೆ.
ತಾಲ್ಲೂಕು ಕೇಂದ್ರದಿಂದ ಅಂದಾಜು 40 ಕಿ.ಮೀ ದೂರದ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದ ನಡುವೆ ಶಿವಗಂಗಾ ಜಲಪಾತವಿದೆ. ಸುಮಾರು 74 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತದ ನೈಸರ್ಗಿಕ ಸೌಂದರ್ಯವನ್ನು ಸವಿಯಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕನಿಷ್ಠ ಸೌಲಭ್ಯಗಳು ಇಲ್ಲದಿರುವುದು ಪ್ರವಾಸಿಗಳಿಗೆ ಅಪಾಯ ತಂದೊಡ್ಡುತ್ತಿದೆ.
‘ಕೆಆರ್‌ಐಡಿಎಲ್ (ಕ್ರೆಡಿಲ್) ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳು ಅಸಮರ್ಪಕವಾಗಿವೆ. ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಸಿಮೆಂಟ್ ರಸ್ತೆ ನಿರ್ಮಿಸಿದ್ದು, ರಸ್ತೆಯ ಅಕ್ಕಪಕ್ಕದಲ್ಲಿ ಮಣ್ಣು ಭರ್ತಿ ಮಾಡದ ಕಾರಣ ರಸ್ತೆ ಮತ್ತು ನೆಲದ ನಡುವೆ ಒಂದಡಿಗಿಂತಲೂ ಹೆಚ್ಚು ಆಳದ ಕಂದಕ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರು ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಪ್ರಪಾತಕ್ಕೆ ಬೀಳುವ ಭೀತಿ ಎದುರಿಸುತ್ತಿದ್ದಾರೆ’ ಎಂಬುದು ಪ್ರವಾಸಿಗರ ದೂರಾಗಿದೆ.
‘ಪ್ರವಾಸಿಗರು ಜಲಪಾತದ ಸೊಬಗನ್ನು ಸವಿಯಲು ನಿರ್ಮಿಸಲಾಗಿದ್ದ ವೀಕ್ಷಣಾ ಗೋಪುರ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಇದು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಇಲಾಖೆಗಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಗೋಪುರದ ಚಾವಣಿ ಶಿಥಿಲಗೊಂಡು ನೆಲಸಮವಾಗಿರುವುದರಿಂದ, ಪ್ರವಾಸಿಗರು ಜಲಪಾತ ವೀಕ್ಷಿಸಲು ಸುರಕ್ಷಿತ ಜಾಗವಿಲ್ಲದೆ ಪರದಾಡುವಂತಾಗಿದೆ. ವಿಶ್ರಾಂತಿ ಗೃಹಗಳು, ಆಸನಗಳು, ಜಲಪಾತ ವೀಕ್ಷಣೆಗೆ ತೆರಳುವ ಮೆಟ್ಟಿಲುಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಕುಡಿಯುವ ನೀರು ಮತ್ತು ಶೌಚಾಲಯದಂತಹ ಸೌಲಭ್ಯಗಳೂ ಇಲ್ಲಿಲ್ಲದಿರುವುದು ಪ್ರವಾಸಿಗರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ’ ಎನ್ನುತ್ತಾರೆ ಸ್ಥಳಿಕರಾದ ವಿನಾಯಕ ಭಟ್.
‘ಜಡ್ಡಿಗದ್ದೆ-ಕಲ್ಮನೆ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಮುಖ್ಯ ರಸ್ತೆಯಿಂದ ಜಲಪಾತದತ್ತ ತೆರಳುವ ಮಾರ್ಗವು ಅತ್ಯಂತ ದುರ್ಗಮವಾಗಿದೆ. ಜಲಪಾತದ ಆಕರ್ಷಣೆಗೆ ಮಾರುಹೋಗಿ ಪ್ರವಾಸಿಗರು ಹತ್ತಿರಕ್ಕೆ ತೆರಳಲು ಪ್ರಯತ್ನಿಸುತ್ತಾರೆ. ಆದರೆ ಸಮರ್ಪಕ ರಕ್ಷಣಾ ಬೇಲಿ ಹಾಗೂ ವೀಕ್ಷಣಾ ಗೋಪುರದಂತಹ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ಅಪಾಯಗಳು ಸಂಭವಿಸುತ್ತಿವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪ್ರವಾಸೋದ್ಯಮ ಇಲಾಖೆಯು ಈ ತಾಣಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಮುತುವರ್ಜಿ ವಹಿಸುತ್ತಿಲ್ಲ’ ಎಂಬುದು ಗ್ರಾಮಸ್ಥರ ದೂರು.
ವ್ಯವಸ್ಥಿತ ವಾಹನ ನಿಲುಗಡೆ ಮತ್ತು ಭದ್ರತೆಯ ಕೊರತೆಯಿಂದಾಗಿ ಶಿವಗಂಗಾ ತನ್ನ ಕಳೆಯನ್ನು ಕಳೆದುಕೊಳ್ಳುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ತಾಣಕ್ಕೆ ಕಾಯಕಲ್ಪ ನೀಡಬೇಕಿದೆ.ರಮೇಶ ಹೆಗಡೆ ಸ್ಥಳಿಕ
ಈಗಾಗಲೇ ಜಂಟಿ ಸಭೆ: ‘ಈಗಾಗಲೇ ಶಾಸಕ ಭೀಮಣ್ಣ ನಾಯ್ಕ ಸೂಚನೆ ಮೇರೆಗೆ ಪ್ರವಾಸಿ ತಾಣಗಳ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಿವಗಂಗಾ ಜಲಪಾತದ ವಿಷಯವಾಗಿ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಸಭೆ ಕರೆದು ಗೋಪುರಗಳ ನಿರ್ಮಾಣ ಸುರಕ್ಷತಾ ಬೇಲಿ ಮೆಟ್ಟಿಲುಗಳ ನಿರ್ಮಾಣದಂಥ ಅಗತ್ಯ ಸೌಲಭ್ಯ ಕಲ್ಪಿಸುವ ಸಂಬಂಧ ಸೂಕ್ತ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಸೌಲಭ್ಯ ನಿರ್ಮಾಣ ಆಗುವ ವಿಶ್ವಾಸವಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.