
ಹಳಿಯಾಳ: ಜಾತಿ, ಮತ, ಪಂಥ, ಧರ್ಮ, ಬಡವ ಬಲ್ಲಿದ ಎಲ್ಲರನ್ನೂ ಭೇದ ಭಾವ ಇಲ್ಲದೇ ಒಗ್ಗೂಡಿಸಿಕೊಂಡು ನಡೆದಂತಹ ಸಮರ್ಥ ನಾಯಕ
ಶಿವಾಜಿ ಮಹಾರಾಜರು ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಳ್ಳಲಿರುವ ಶಿವಾಜಿ ಮಹಾರಾಜರ ಕಂಚಿನ ಮೂರ್ತಿ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರ ಭಕ್ತಿ, ಗುರು ಭಕ್ತಿ, ದೈವ ಭಕ್ತಿ ಮತ್ತು ಮಾತೃ, ಪಿತೃ ಭಕ್ತಿಯಿಂದ ಸಂಪನ್ನರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರು ಆಚಾರಶೀಲ, ವಿಚಾರಶೀಲ, ದಾನ-ಧರ್ಮವಂತರಾಗಿದ್ದರು. ಅಂದಿನ ಮೊಘಲರು, ಪರಕೀಯರ ದಾಳಿಯಿಂದ ಭಾರತವನ್ನು ರಕ್ಷಿಸಿದಂತಹ ಗೆರಿಲ್ಲಾ ಯುದ್ದ ತಂತ್ರವನ್ನು ಜಗತ್ತಿಗೆ ಪರಿಚಯಿಸಿದ್ದು ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಎಂದರು.
ಕೆ.ಕೆ ಹಳ್ಳಿ ಶ್ರೀಗುರು ನಿತ್ಯಾನಂದ ಆಶ್ರಮದ ಸುಬ್ರಹ್ಮಣ್ಯ ಸ್ವಾಮಿಜಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಎರಡು ಗುಂಟೆ ಭೂಮಿದಾನ ಮಾಡಿದ ರಾಜಾರಾಮ ಶಂಭಾಜಿ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ.ಎಂ. ಜಿ ಹಿರೇಮಠ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.