ADVERTISEMENT

ಕಾರವಾರ: ಶಿವರಾಮ ಹೆಬ್ಬಾರಗೆ ‘ಗಾಂಧಿ ಪುರಸ್ಕಾರ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:16 IST
Last Updated 26 ಜನವರಿ 2026, 7:16 IST
ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಪತ್ರಿಕಾ ವಿತರಕರ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗ ಅವರು ನೀಡಿದರು 
ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಪತ್ರಿಕಾ ವಿತರಕರ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗ ಅವರು ನೀಡಿದರು    

ಕಾರವಾರ: ‘ಕಾರ್ಮಿಕ ಸಚಿವರಾಗಿದ್ದ ವೇಳೆ ಪತ್ರಿಕಾ ವಿತರಕರನ್ನು ಇ–ಶ್ರಮ್ ಯೋಜನೆ ಅಡಿಯಲ್ಲಿ ಸೇರಿಸಲು ಶ್ರಮಿಸಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ‘ಗಾಂಧಿ ಪುರಸ್ಕಾರ’ ಪ್ರದಾನ ಮಾಡಲಾಗುವುದು’ ಎಂದು ಪತ್ರಿಕಾ ವಿತರಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗ ತಿಳಿಸಿದ್ದಾರೆ.

‘ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಜ.30 ರಂದು ಸಂಜೆ 4 ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಪತ್ರಿಕಾ ವಿತರಕರ ಕುರಿತು ನಸುಕಿನ ನೊಗ ಎಂಬ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಹೆಬ್ಬಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದ ಮಾಹಿತಿ ನೀಡಿದ್ದಾರೆ.

‘ಸಾಗರದಲ್ಲಿ ಪತ್ರಿಕೆ ಹಂಚುವ ಸಂದರ್ಭದಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದ ವಿತರಕರ ಕುಟುಂಬವೊಂದಕ್ಕೆ ಶಿವರಾಮ ಹೆಬ್ಬಾರ ಅವರು ₹2 ಲಕ್ಷ ಪರಿಹಾರ ನೀಡಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಒಕ್ಕೂಟದ ವತಿಯಿಂದ ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆ ಸೌಲಭ್ಯ ಕಲ್ಪಿಸಲು ಮನವಿ ಮಾಡಲಾಗಿತ್ತು. ಸ್ಪಂದಿಸಿದ್ದ ಅವರು ದೇಶದಲ್ಲೇ ಮೊದಲ ಬಾರಿಗೆ ಪತ್ರಿಕೆ ವಿತರಕರನ್ನು ಇ–ಶ್ರಮ್ ಯೋಜನೆ ವ್ಯಾಪ್ತಿಗೆ ಸೇರಿಸಿದ್ದರು’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT