ADVERTISEMENT

ಶಿರಸಿ: ಸಿಗದ ರಸಗೊಬ್ಬರ, ಬಿತ್ತನೆ ವಿಳಂಬ

ಮುಂಗಾರು ಹಂಗಾಮು ಆರಂಭ: 711 ಟನ್ ಲಭ್ಯತೆ; 5,135 ಟನ್ ಬೇಡಿಕೆ ಸಲ್ಲಿಕೆ

ಗಣಪತಿ ಹೆಗಡೆ
Published 17 ಜೂನ್ 2022, 19:30 IST
Last Updated 17 ಜೂನ್ 2022, 19:30 IST
ಶಿರಸಿ ತಾಲ್ಲೂಕಿನ ಕಿರವತ್ತಿಯಲ್ಲಿ ರೈತರೊಬ್ಬರು ಶುಂಠಿ ನಾಟಿ ಮಾಡಲು ಗದ್ದೆಯನ್ನು ಅಣಿಗೊಳಿಸಿಟ್ಟಿದ್ದಾರೆ
ಶಿರಸಿ ತಾಲ್ಲೂಕಿನ ಕಿರವತ್ತಿಯಲ್ಲಿ ರೈತರೊಬ್ಬರು ಶುಂಠಿ ನಾಟಿ ಮಾಡಲು ಗದ್ದೆಯನ್ನು ಅಣಿಗೊಳಿಸಿಟ್ಟಿದ್ದಾರೆ   

ಶಿರಸಿ: ಮುಂಗಾರು ಹಂಗಾಮು ಆರಂಭಗೊಂಡಿದ್ದು ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸುವ ಹಂತದಲ್ಲಿದ್ದಾರೆ. ಆದರೆ, ಬೀಜ ಬಿತ್ತನೆ ವೇಳೆ ಅಗತ್ಯವಿರುವ ಡಿ.ಎ.ಪಿ. ರಸಗೊಬ್ಬರ ಲಭ್ಯತೆ ಇಲ್ಲದೆ ವಿಳಂಬವಾಗುತ್ತಿದೆ.

ರಸಗೊಬ್ಬರಗಳ ಅಧಿಕೃತ ಮಾರಾಟಗಾರರು, ಪರವಾನಗಿ ಪಡೆದ ಸಹಕಾರ ಸಂಸ್ಥೆಗಳಲ್ಲಿ ರಸಗೊಬ್ಬರಕ್ಕಾಗಿ ವಿಚಾರಿಸಿ, ಬರಿಗೈಲಿ ಮರಳುವ ರೈತರೇ ಕಾಣಸಿಗುತ್ತಿದ್ದಾರೆ. ಪ್ರತಿಬಾರಿ ಮೇ ಮಧ್ಯಂತರದ ಬಳಿಕ ರಸಗೊಬ್ಬರ ಪೂರೈಕೆ ಆರಂಭವಾಗುತ್ತಿತ್ತು. ಸೆಪ್ಟೆಂಬರ್ ವರೆಗೂ ಹಂತ ಹಂತವಾಗಿ ಪೂರೈಕೆ ಆಗುತ್ತದೆ.

ಭತ್ತ, ಗೋವಿನ ಜೋಳ, ಶುಂಠಿ ಬಿತ್ತನೆ ಪ್ರದೇಶ ಜಿಲ್ಲೆಯಲ್ಲಿ ಹೆಚ್ಚಿದೆ. ಹಲವೆಡೆ ಮಳೆ ಸುರಿಯುತ್ತಿದ್ದು ಬಿತ್ತನೆ ಕಾರ್ಯಕ್ಕೆ ಭೂಮಿ ಹದಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಬೀಜ ಬಿತ್ತನೆ ವೇಳೆ ಬೇಕಾದ ಡಿಎಪಿ ಮತ್ತು ಎನ್‍ಪಿಕೆ ರಸಗೊಬ್ಬರ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯ ಇಲ್ಲ. ಹೀಗಾಗಿ ಕೃಷಿ ಚಟುವಟಿಕೆ ಸ್ಥಗಿತಗೊಳಿಸುವ ಅನಿವಾರ್ಯ ಉಂಟಾಗಿದೆ.

ADVERTISEMENT

‘ಮುಂಗಾರು ಹಂಗಾಮು ಆರಂಭಗೊಳ್ಳುವ ಮುನ್ನ ರಸಗೊಬ್ಬರಗಳ ದಾಸ್ತಾನು ಇರಬೇಕಿತ್ತು. ರಸಗೊಬ್ಬರ ಇಲ್ಲದೆ ಬೀಜ ಬಿತ್ತನೆ ಮಾಡುವುದು ಸಾಧ್ಯವಿಲ್ಲ. ಗೊಬ್ಬರ ಮಾರಾಟಗಾರರ ಬಳಿ ವಿಚಾರಿಸಿದರೆ ಪೂರೈಕೆ ಇಲ್ಲ ಎಂದು ಉತ್ತರಿಸುತ್ತಿದ್ದಾರೆ’ ಎನ್ನುತ್ತಾರೆ ರೈತ ಸಂಘದ ಮುಖಂಡ ರಾಘವೇಂದ್ರ ನಾಯ್ಕ ಕಿರವತ್ತಿ.

‘ಶುಂಠಿ ಸೇರಿದಂತೆ ಕೆಲವು ಬೆಳೆಗಳಿಗೆ ಬೀಜ ಬಿತ್ತನೆ ಬಳಿಕ ಗೊಬ್ಬರ ನೀಡಬಹುದು. ಆದರೆ, ಭತ್ತ, ಗೋವಿನ ಜೋಳಕ್ಕೆ ಬೀಜಗಳ ಜತೆಗೆ ಗೊಬ್ಬರ ಮಿಶ್ರಣ ಮಾಡಿ ಬಿತ್ತನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬೀಜ ಮೊಳಕೆಯೊಡೆಯುವ ಪ್ರಮಾಣ ಕುಂಠಿತವಾಗುತ್ತದೆ’ ಎಂದು ಹೇಳಿದರು.

‘ರಸಗೊಬ್ಬರ ಬೇಡಿಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ನಿಜ. 711 ಟನ್‍ನಷ್ಟು ಗೊಬ್ಬರ ಈಗಾಗಲೆ ದಾಸ್ತಾನಿದೆ. ಇನ್ನೂ 5,135 ಟನ್‍ಗೆ ಬೇಡಿಕೆ ಸಲ್ಲಿಸಲಾಗಿದೆ. ಒಂದೆರಡು ದಿನದೊಳಗೆ ಪೂರೈಕೆ ಆಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್. ನಟರಾಜ್.

ಪೂರೈಕೆಯಾಗದ ಬಿತ್ತನೆ ಬೀಜ
ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ರೈತರು ಮುಂಗಾರು ಹಂಗಾಮಿನಲ್ಲಿ ಗೋವಿನ ಜೋಳ ಬೆಳೆಯುತ್ತಿದ್ದಾರೆ. ಬನವಾಸಿಯ ರೈತ ಸಂಪರ್ಕ ಕೇಂದ್ರಕ್ಕೆ ಈ ವರ್ಷ ಗೋವಿನ ಜೋಳದ ಬೀಜ ಪೂರೈಕೆ ಆಗಿಲ್ಲ. ಖಾಸಗಿ ಮಾರಾಟಗಾರರಿಂದ ಖರೀದಿಸುವ ಅನಿವಾರ್ಯಕ್ಕೆ ರೈತರು ಸಿಲುಕಿದ್ದಾರೆ.

‘ಪ್ರತಿ ಪೊಟ್ಟಣಕ್ಕೆ ₹200 ರಿಂದ 300 ಹೆಚ್ಚಿಗೆ ನೀಡಿ ಖಾಸಗಿ ಮಾರಾಟಗಾರರಲ್ಲಿ ಬೀಜ ಖರೀದಿಸಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸಿಗುತ್ತಿದ್ದ ಬೀಜ ಪೂರೈಕೆ ಮಾಡದಿರಲು ಕಾರಣ ಏನು ಎಂಬುದು ಅರ್ಥವಾಗಿಲ್ಲ’ ಎಂದು ಕೃಷಿಕ ಹನುಮಂತ ಮಟ್ಲೇರ್ ಹೇಳಿದರು.

‘ಗೋವಿನ ಜೋಳ ಬೀಜದ ಬೇಡಿಕೆ ಪಟ್ಟಿ ಸಲ್ಲಿಕೆಯಾಗಿದ್ದು ಸದ್ಯದಲ್ಲೇ ಬರಬಹುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ತಿಳಿಸಿದರು.

*
ರಸಗೊಬ್ಬರ ಪೂರೈಕೆಯ ವ್ಯತ್ಯಯ ಸರಿಪಡಿಸುವ ಪ್ರಯತ್ನ ನಡೆದಿದೆ. ಬಿತ್ತನೆಗೆ ವಿಳಂಬವಾಗದಂತೆ ಶೀಘ್ರ ಕ್ರಮವಹಿಸುತ್ತೇವೆ.
-ಟಿ.ಎಚ್.ನಟರಾಜ್, ಕೃಷಿ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.