ಸಿದ್ದಾಪುರ: ‘ಅರಣ್ಯ ಅತಿಕ್ರಮಣದಲ್ಲಿ ಜಿಪಿಎಸ್ ಆದ ಕುಟುಂಬಗಳ ಜಮೀನುಗಳು ಮಾತ್ರ ಸಕ್ರಮವಾಗಲು ಸಾಧ್ಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿರುವುದು ಸರಿಯಲ್ಲ’ ಎಂದು ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಅವರು ಮಾತನಾಡಿದರು.
‘ಅನೇಕ ಕುಟುಂಬಗಳು ತಲೆತಲಾಂತರದಿಂದ ಕಾಡಿನಲ್ಲಿ ಒಂದಿಷ್ಟು ಜಾಗ ಅತಿಕ್ರಮಣ ಮಾಡಿಕೊಂಡು ಬೇಸಾಯ, ಹೈನುಗಾರಿಕೆ ಮುಂತಾದವುಗಳ ಮೂಲಕ ಜೀವನ ಸಾಗಿಸುತ್ತ ಬಂದಿವೆ. ಕಾರಣಾಂತರಗಳಿಂದ ಅವರ ಅತಿಕ್ರಮಣ ಜಾಗ ಜಿಪಿಎಸ್ ಆಗಿಲ್ಲ. ಅಂಥವರ ಜಮೀನು ತೆರವುಗೊಳಿಸುವ ಬದಲು ಪುನಃ ಪರಿಶೀಲನೆ ನಡೆಸಿ ನ್ಯಾಯ ಕೊಡಿಸಬೇಕೆ ಹೊರತು ತೆರವುಗೊಳಿಸುವುದಲ್ಲ’ ಎಂದರು.
‘ಮನಮೋಹನಸಿಂಗ್ ಸರ್ಕಾರ ಅತಿಕ್ರಮಣದಾರರ ಕುರಿತಂತೆ ಅರಣ್ಯ ಹಕ್ಕು ಸಮಿತಿ ರಚನೆ ಮಾಡಿ ಜಿಪಿಎಸ್ ಮಾಡಲು ಅನುವು ಮಾಡಿತ್ತು. ಬದಲಾದ ಸರ್ಕಾರದಲ್ಲಿ ಆ ಪ್ರಕ್ರಿಯೆ ಅಲ್ಲಿಗೇ ನಿಂತಿತು. ನಂತರದಲ್ಲಿ ಹಲವು ಅರ್ಜಿಗಳು ತಿರಸ್ಕೃತವಾದವು. ಬಹಳಷ್ಟು ಸಣ್ಣ ಅತಿಕ್ರಮಣದಾರರು ಮಾಹಿತಿಯ ಕೊರತೆ, ಇನ್ನಿತರ ಕಾರಣಗಳಿಂದ ಜಿಪಿಎಸ್ ಮಾಡಿಸುವಲ್ಲಿ ವಂಚಿತರಾಗಿದ್ದಾರೆ. ನೂರಾರು ವರ್ಷಗಳಿಂದ ಅವರ ತಂದೆ– ತಾಯಿ ಮಾಡಿದ ಜಮೀನುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಿ ಸಕ್ರಮ ಮಾಡಬೇಕೆ ಹೊರತು ಜಿಪಿಎಸ್ ಆಗಿದ್ದನ್ನು ಮಾತ್ರ ಸಕ್ರಮ ಮಾಡುತ್ತೇವೆ ಎನ್ನುವದು ಸರಿಯಲ್ಲ’ ಎಂದು ಹೇಳಿದರು.
‘ಅರಣ್ಯ ಅತಿಕ್ರಮಣ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸದನ ಸಮಿತಿ ರಚಿಸಿ, ಆ ಸಮಿತಿ ಒಂದು ತಲೆಮಾರಿನಿಂದ ಅತಿಕ್ರಮಣ ಮಾಡಿದವರಿಗೂ ಜಿಪಿಎಸ್ ಮಾಡಿಸಬೇಕು ಎನ್ನುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಸಂಸದರು ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ಅಲ್ಲಿ ಕೇಂದ್ರ ಅರಣ್ಯ ಸಚಿವರ, ಕೇಂದ್ರ ಸರ್ಕಾರದ ಗಮನಕ್ಕೆ ಬರುತ್ತದೆ. ಆ ಮೂಲಕ ಅತಿಕ್ರಮಣ ಜಿಪಿಎಸ್ ಆಗದೇ ಇದ್ದವರಿಗೂ ನ್ಯಾಯ ಒದಗಿಸಲು ಸಾಧ್ಯ’ ಎಂದರು.
‘ಸುಪ್ರಿಂ ಕೋರ್ಟ್‌ಗೆ ವಸ್ತುಸ್ಥಿತಿ ಕುರಿತು ಸಮರ್ಪಕ ಮಾಹಿತಿ ಕೊಟ್ಟಿದ್ದರೆ ಅತಿಕ್ರಮಣ ಜಿಪಿಎಸ್ ಆಗದಿದ್ದವರಿಗೂ ಮಾನ್ಯತೆ ಸಿಗುತ್ತಿತ್ತು. ಆದರೆ ಏನೂ ಮಾಹಿತಿ ಕೊಡದೇ ಇರುವುದರಿಂದ ಲಕ್ಷಾಂತರ ಜನ ಅನಾಥರಾಗುತ್ತಿದ್ದಾರೆ. ಅರಣ್ಯ ಇಲಾಖೆ ಅತಿಕ್ರಮಣ ನಂಬಿಕೊಂಡವರಿಗೆ ನ್ಯಾಯಯುತ ಜೀವನ ನಡೆಸಲು ಅನುಕೂಲ ಮಾಡಬೇಕು. ಯಾರಾದರೂ ಮನೆಯ ಪಕ್ಕ ಹೈನುಗಾರಿಕೆ ಮುಂತಾದವಕ್ಕೆ ತೊಂದರೆ ಕೊಟ್ಟರೆ ನನ್ನ ಗಮನಕ್ಕೆ ತಕ್ಷಣ ತನ್ನಿ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.