
ಸಿದ್ದಾಪುರ: ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ಅತಿಕ್ರಮಣ ತೆರವು ಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಎಚ್ಚರಿಸಿದರು.
ತಾಲ್ಲೂಕಿನ ಕ್ಯಾದಗಿ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ತಾಲ್ಲೂಕಿನ ಗೋಳಿಕೈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ನಿಯಮಗಳನ್ನು ಪಾಲಿಸದೇ, ಯಾವುದೇ ರೀತಿ ಪಂಚನಾಮೆ ತಯಾರಿಸದೆ ಏಕಾಏಕಿ ಫಲ ಭರಿತವಾದ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಕಂದಾಯ ಹಾಗೂ ಅರಣ್ಯ ಇಲಾಖೆ ಸೇರಿ ಜಂಟಿ ಸರ್ವೆ ನಡೆಸದೆ, ಅಡಿಕೆ ಮರಗಳನ್ನು ಕಡಿಯಲಾಗಿದೆ. ಅಧಿಕಾರಿಗಳು ಕಾನೂನನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
ಸ್ಥಳಕ್ಕೆ ಭೇಟಿ ನೀಡಿದ ಎ.ಸಿ.ಎಫ್ ಪವಿತ್ರ ಯು.ಜೆ. ಮಾತನಾಡಿ, 2015ರ ನಂತರದ ಅತಿಕ್ರಮಣವನ್ನು ನಾನು ತೆರವು ಗೊಳಿಸುತ್ತಿದ್ದೇವೆ. 2019 ರ ಕಾನೂನಿನಂತೆ ಅರ್ಜಿ ಸಲ್ಲಿಸಿರುವ ಮನವಿಗಳನ್ನು ಪರಿಶೀಲಿಸುತ್ತಿದ್ದು, ಅಂತಹ ಜಾಗಗಳಿಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಕೆಲವೊಂದು ಸಾಗುವಳಿದಾರರು ಹೊಸ ಅತಿಕ್ರಮಣ ಮಾಡಿ ಸಾಗುವಳಿಗೆ ಮೊದಲೇ ಸಲ್ಲಿಸಿದ ಅರ್ಜಿ ನೀಡಿದ್ದಾರೆ. ನಿಯಮದಂತೆ ಹೊಸ ಅತಿಕ್ರಮಣ ಸಾಗುವಳಿದಾರರ ಜಾಗಗಳನ್ನು ತೆರವುಗೊಳಿಸುತ್ತಿದ್ದೇವೆ. ಅರಣ್ಯ ಇಲಾಖೆ ತೆರವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಭೂಮಿ ಹಕ್ಕು ಹೋರಾಟಗಾರರ ಸಹಯೋಗದಲ್ಲಿ ಸಭೆ ನಡೆಸಲಾಗುವುದು ಎಂದರು.
ಸ್ಥಳದಲ್ಲಿದ್ದ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಮಾತನಾಡಿ, ಈ ರೀತಿಯ ಘಟನೆಗಳು ಮತ್ತೊಮ್ಮೆ ನಡೆಯುವುದಕ್ಕೆ ದಾರಿ ಮಾಡಿಕೊಡದಂತೆ ನೋಡಿಕೊಳ್ಳುತ್ತೇವೆ. ಅರಣ್ಯ ಇಲಾಖೆಯವರಿಗೂ ಸಹ ಕಾನೂನು ಚೌಕಟ್ಟಿನೊಳಗೆ, ಮಾನವೀಯ ನೆಲೆಯಲ್ಲಿ ನಡೆದುಕೊಳ್ಳುವಂತೆ ತಿಳಿಸುವುದಾಗಿ ಹೇಳಿದರು.
ಆರ್.ಎಫ್. ಓ ಮಹೇಶ ದೇವಾಡಿಗ, ಸಿಪಿಐ ಜೆ ಬಿ ಸೀತಾರಾಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಇದ್ದರು.
ಪ್ರತಿಭಟನೆಯಲ್ಲಿ ಸುಮಾರು 400-500 ಅರಣ್ಯ ಅತಿಕ್ರಮಣದಾರರು ಪಾಲ್ಗೊಂಡಿದ್ದು, 15 ನಿಮಿಷಗಳ ಕಾಲ ಕುಮಟಾ- ಕೊಡಮಡಗಿ ರಾಜ್ಯ ಹೆದ್ದಾರಿಯನ್ನು ತಡೆದು ಆಕ್ರೊಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.