ADVERTISEMENT

ಅಹಿಂದ ಚಾಂಪಿಯನ್ ಆಗುವ ಯತ್ನದಲ್ಲಿ ಸಿ.ಎಂ: ಸಂಸದ ವಿಶ್ವೇಶ್ವರ ಹೆಗಡೆ ಟೀಕೆ

ಜಾತಿ ಜನಗಣತಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 5:32 IST
Last Updated 3 ಆಗಸ್ಟ್ 2025, 5:32 IST
ಶಿರಸಿಯಲ್ಲಿ ಆಯೋಜಿಸಿದ್ದ ಜನಗಣತಿ ಪೂರ್ವಭಾವಿ ಸಭೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು 
ಶಿರಸಿಯಲ್ಲಿ ಆಯೋಜಿಸಿದ್ದ ಜನಗಣತಿ ಪೂರ್ವಭಾವಿ ಸಭೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು    

ಶಿರಸಿ: ‘ರಾಜ್ಯದ ಜಾತಿಗಣತಿ ಗೊಂದಲಗಳ ಸರಮಾಲೆ ಆಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಚಾಂಪಿಯನ್ ಆಗುವ ಪ್ರಯತ್ನದಲ್ಲಿದ್ದಾರೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಟೀಕಿಸಿದರು.

ನಗರದಲ್ಲಿ ಶನಿವಾರ ಜಾತಿ ಜನಗಣತಿ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘₹160 ಕೋಟಿ ಖರ್ಚು ಮಾಡಿ, ಹತ್ತು ವರ್ಷ ಜಾತಿ ಗಣತಿ ಮಾಡಿರುವ ರಾಜ್ಯ ಸರ್ಕಾರವು ಕಾಲಹರಣ ಮಾಡಿದೆ. ಇದರಿಂದ ಹಿಂದುಳಿದ ವರ್ಗಗಳಿಗೆ ಯಾವುದೇ ಉಪಯೋಗವಿಲ್ಲ. ಇದು ಕೇವಲ ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ತಂತ್ರವಾಗಿದೆ. ಆದರೂ ಅಹಿಂದ ಚಾಂಪಿಯನ್ ಆಗಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಮುಂದಿನ ವರ್ಷ ಕೇಂದ್ರ ಸರ್ಕಾರ ಜನಗಣತಿ ಜತೆಗೆ, ಜಾತಿ ಗಣತಿ ಮಾಡಲಿದೆ. ಇದರಿಂದ ಸಮಗ್ರ ಚಿತ್ರಣ ಸಿಗಲಿದ್ದು, ನಾವು ವಿಶ್ವಾಸ ಇರಿಸಿದ ಸಾಮಾಜಿಕ ನ್ಯಾಯ, ಅಂತ್ಯೋದಯಕ್ಕೆ ಇನ್ನೂ ಹೆಚ್ಚಿನ ಯೋಜನೆ ರೂಪಿಸಲಿಕ್ಕೆ ಸಾಧ್ಯವಾಗಲಿದೆ’ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ‘ರಾಜ್ಯ ಕಾಂಗ್ರೆಸ್‌ ಸರ್ಕಾರ ಜನರ ದಿಕ್ಕನ್ನು ಬದಲಿಸಲು ಅವೈಜ್ಞಾನಿಕ ರೀತಿಯ ಸರ್ವೇ ನಡೆಸಿ ಸಮಾಜದಲ್ಲಿ ಅನುಮಾನಗಳನ್ನು ಹುಟ್ಟಿಸುತ್ತಿದೆ. ಆದರೆ ಜಾತಿಗಣತಿಯನ್ನು ಕೇಂದ್ರ ಸರ್ಕಾರದ ವ್ಯವಸ್ಥೆಯಲ್ಲಿ ನಡೆದರೆ ಮಾತ್ರ ಪರಿಪೂರ್ಣ ಚಿತ್ರಣ ದೊರೆಯುತ್ತದೆ’ ಎಂದು ಹೇಳಿದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಎಲ್.ಘೋಟ್ನೆಕರ್, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ವೆಂಕಟೇಶ ನಾಯಕ, ಕೆ.ಜಿ.ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ಗೋವಿಂದ ನಾಯ್ಕ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹರ್ತೆಬೈಲ್, ಪ್ರಶಾಂತ ನಾಯ್ಕ, ಎಸ್.ಟಿ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಸಂತೋಷ ತಳವಾರ, ಗಜಾನನ ಗುನಗಾ ಹಾಗೂ ಇತರರಿದ್ದರು.ಜಿಲ್ಲಾ ಘಟಕದ ಉಪಾಧ್ಯಕ್ಷ ಅಶೋಕ ಚಲವಾದಿ ಅಧ್ಯಕ್ಷತೆ ವಹಿಸಿದ್ದರು.

ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ನಾಯ್ಕ ಸ್ವಾಗತಿಸಿದರು. ಶಿವಾಜಿ ನರಸಾನಿ ವಂದಿಸಿದರು.

ಪಾರದರ್ಶಕ ವ್ಯವಸ್ಥೆಯಿರುವ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅನುಮಾನ ಪಡುತ್ತಿದ್ದಾರೆ. ಆದರೆ ಇವರೆ ಹಿಂದೆ ಕ್ಯಾಬಿನೆಟ್ ನಿರ್ಣಯದ ಪ್ರತಿ ಹರಿದು ಬಿಸಾಡಿದ್ದರು 
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ

ಕಾರವಾರದಲ್ಲಿ ಸಮಾವೇಶ:

ಆ.17ರಂದು ಕಾರವಾರದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ಜಾತಿ ಜನಗಣತಿ: ಹಿನ್ನೆಲೆ-ಮುನ್ನೆಲೆ ಕುರಿತು ನಡೆಯುವ ಸಮಾವೇಶದಲ್ಲಿ ಎಲ್ಲರೂ ಸಕ್ರಿಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.