ADVERTISEMENT

ಚುನಾವಣೆಗೆ ಮುನ್ನ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ: ಅನಂತಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 10:45 IST
Last Updated 30 ಜನವರಿ 2024, 10:45 IST
<div class="paragraphs"><p>ಅನಂತಕುಮಾರ ಹೆಗಡೆ</p></div>

ಅನಂತಕುಮಾರ ಹೆಗಡೆ

   

ಕುಮಟಾ: ‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತಿದೆ. ಅದನ್ನು ಮರೆಮಾಚುವ ಸಲುವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿ ಜನರ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ’ ಎಂದು ಸಂಸದ ಅನಂತಕುಮಾರ ಹೆಗಡೆ ಆರೋಪಿಸಿದರು.

‘ಲೋಕಸಭೆ ಚುನಾವಣೆ ಘೋಷಣೆಯಾಗುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ಸ್ಥಿತಿಗತಿಯ ಕುರಿತು ಶ್ವೇತಪತ್ರ ಹೊರಡಿಸಬೇಕು. ನೌಕರರಿಗೆ ಎಷ್ಟು ತಿಂಗಳ ವೇತನ ಪಾವತಿ ಬಾಕಿ ಇದೆ ಎಂಬುದೂ ಸೇರಿದಂತೆ ಸರ್ಕಾರದ ಆರ್ಥಿಕ ಸ್ಥಿಗತಿಯನ್ನು ರಾಜ್ಯದ ಜನರ ಎದುರು ಬಹಿರಂಗಪಡಿಸಿದರೆ ಸರ್ಕಾರದ ನೈಜತೆ ಬಹಿರಂಗವಾಗಲಿದೆ’ ಎಂದು ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸವಾಲು ಹಾಕಿದರು.

ADVERTISEMENT

‘ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಣ ನೀಡುವುದಕ್ಕೂ ಸರ್ಕಾರದ ಬಳಿ ಹಣವ ಇಲ್ಲವಾಗಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವಾಗ್ರಹ ಪೀಡಿತರಾಗಿ ಹಿಂದು ವಿರೋಧಿ ನಿಲುವು ತಳೆದಿದ್ದಾರೆ. ರಾಜಕೀಯ ಪಕ್ಷ ವಿರೋಧಿಸುವ ನೆಪದಲ್ಲಿ ದೇಶದ ಸಂಸ್ಕೃತಿ, ಏಕತೆಯ ಅಸ್ಮಿತೆಯನ್ನು ವಿರೋಧಿಸುವ ಅಪಾಯಕಾರಿ ಕೆಲಸವನ್ನು ಮಾಡುತ್ತಿದ್ದಾರೆ. ಐತಿಹಾಸಿಕ ಸಂಗತಿಗಳನ್ನು ಕಾರ್ಯಕರ್ತರೊಂದಿಗೆ ಹಂಚಿಕೊಳ್ಳುವುದನ್ನು ವಿರೋಧಿ ನಿಲುವು ಎಂದು ಸಿದ್ದರಾಮಯ್ಯ ಭಾವಿಸುತ್ತಿದ್ದಾರೆ. ಇಂಥ ನಿಲುವನ್ನು ಕಾಂಗ್ರೆಸ್ ನಲ್ಲಿರುವ ಕೆಲ ಒಳ್ಳೆಯವರು ಸಹಿಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಇಂಥ ತಪ್ಪುಗಳನ್ನು ಸಿದ್ದರಾಮಯ್ಯ ಮುಂದೆ ತಿದ್ದಿಕೊಳ್ಳದಿದ್ದರೆ ಅವರು ಸಮಾಜದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ’ ಎಂದರು.

‘ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ನಿಲ್ಲಿಸಬೇಕು. ಮಂಡ್ಯದಲ್ಲಿ ಜಿಲ್ಲಾಡಳಿತವೇ ಅನುಮತಿ ನೀಡಿದ ಕಾರ್ಯಕ್ರಮವನ್ನು ವಿರೋಧಿಸಿದ್ದು ಒಳ್ಳೆಯದಲ್ಲ. ಸಿದ್ದರಾಮಯ್ಯ ಅವರಿಂದಾಗಿ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಜನರು ಒಂದು ಪಾಠ ಕಲಿಸ ಹೊರಟಿದ್ದಾರೆ. ದುರಹಂಕಾರ ವರ್ತನೆಗಾಗಿ ಮುಖ್ಯಂಮತ್ರಿಗೆ ಏಕವಚನ ಬಳಸಿದ್ದೇನೆಯೇ ವಿನಾ ಅಂಥ ಮಾತನಾಡುವುದು ನನ್ನ ಸ್ವಭಾವವಲ್ಲ’ ಎಂದರು.

‘ದೇಶದ ಅತ್ಯುನ್ನತ ಹುದ್ದೇಗೇರಿದ ಪರಿಶಿಷ್ಟ ಜನಾಂಗದ ಸಭ್ಯ ಮಹಿಳೆ, ರಾಷ್ಟ್ರಪತಿ ಅವರಿಗೆ ಏಕವಚನ ಪ್ರಯೋಗ ಸಿದ್ದರಾಮಯ್ಯ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನಾವು ಚುಚ್ಚುವಂತೆ ಮಾತನಾಡಿದಾಗ ಆಕಾಶದಲ್ಲಿರುವ ನಕ್ಷತ್ರಗಳು ಉದುರಿ ಹೋಗುವಂತೆ ಚಡಪಡಿಸುವವರು ಸಿದ್ದರಾಮಯ್ಯ ರಾಷ್ಟ್ರಪತಿ ಅವರಿಗೆ ಏಕವಚನ ಪ್ರಯೋಗಿಸಿದಾಗ ಏಕೆ ಸುಮ್ಮನಿದ್ದಾರೆ?’ ಎಂದು ಪ್ರಶ್ನಿಸಿದರು.

ಶಾಸಕ ದಿನಕರ ಶೆಟ್ಟಿ, ಮುಖಂಡರಾದ ಕೃಷ್ಣ ಎಸಳೆ, ವಿನಾಯಕ ನಾಯ್ಕ, ಎಸ್.ಎಸ್.ಹೆಗಡೆ, ಅರುಣ ನಾಯ್ಕ, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಹೇಮಂತ ಗಾಂವ್ಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.