ADVERTISEMENT

ಕುಮಟಾ–ಶಿರಸಿ ರಸ್ತೆ ಅಭಿವೃದ್ಧಿಗೆ ವಿರೋಧ ಬೇಡ

ಶಿರಸಿ ಜಿಲ್ಲಾ ಹೋರಾಟ ಸಮಿತಿ ವಿನಂತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 14:20 IST
Last Updated 24 ಅಕ್ಟೋಬರ್ 2018, 14:20 IST

ಶಿರಸಿ: ಶಿರಸಿ- ಕುಮಟಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವ ಸಂಬಂಧ ಮೊದಲ ಹಂತದ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಆರಂಭವಾಗುವುದು ಬಾಕಿಯಿದೆ. ಈ ರಸ್ತೆ ಅಭಿವೃದ್ಧಿ ಆಗುವುದರಿಂದ ಹಲವಾರು ಅನುಕೂಲ ಇರುವುದರಿಂದ ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿ ವಿನಂತಿಸಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಪ್ರಮುಖರಾದ ಎಂ.ಎಂ.ಭಟ್ಟ, ಶ್ರೀನಿವಾಸ ಹೆಬ್ಬಾರ ಅವರು, ರಸ್ತೆ ಉನ್ನತೀಕರಣ ಕಾಮಗಾರಿ ತಕ್ಷಣ ಪ್ರಾರಂಭಿಸುವಂತೆ ಒತ್ತಾಯಿಸಿದರು. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶ (ಕೊಲ್ಲಾಪುರ, ಸಾಂಗ್ಲಿ)ದಿಂದ ದಕ್ಷಿಣ ಕನ್ನಡದ ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಮೊದಲಾದ ಯಾತ್ರಾ ಸ್ಥಳಗಳಿಗೆ ಹೋಗುವ ಸಾವಿರಾರು ಯಾತ್ರಾರ್ಥಿಗಳಿಗೆ ಈ ರಸ್ತೆ ಅನುಕೂಲವಾಗಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು, ಮಣಿಪಾಲಕಕ್ಕೆ ಹೋಗುವ ರೋಗಿಗಳಿಗೆ ರಸ್ತೆ ಸಂಚಾರ ಸುಲಭವಾಗಲಿದೆ. ಕಾರವಾರ, ಬೇಲೆಕೇರಿ ಬಂದರಿನ ಜೊತೆ ನೇರ ಸಂಪರ್ಕ ಸಾಧ್ಯವಾಗುವುದರಿಂದ ರಫ್ತು, ಆಮದಿಗೆ ಹೆಚ್ಚು ಸಹಾಯವಾಗುತ್ತದೆ ಎಂದು ಹೇಳಿದರು.

ರಸ್ತೆ ಅಭಿವೃದ್ಧಿಯಿಂದ ಅಪಘಾತ ಕಡಿಮೆಯಾಗುತ್ತವೆ. ಇಂಧನ, ಸಮಯ ಉಳಿತಾಯವಾಗುತ್ತದೆ. ಪರಿಸರದ ಕಾರಣದಿಂದ ಈಗಾಗಲೇ ಅಂಕೋಲಾ– ಹುಬ್ಬಳ್ಳಿ ರೈಲ್ವೆ ಯೋಜನೆ ಮತ್ತು ನಾಗರಿಕ ವಿಮಾನ ನಿಲ್ದಾಣ ನನೆಗುದಿಗೆ ಬಿದ್ದಿದೆ. ಜಲ್ಲಿ, ಮರಳು ಬಂದ್‌ ಆದಾಗಿನಿಂದ ಕೂಲಿ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಸರ್ಕಾರಿ, ಅರೆ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಪ್ರಸ್ತುತ ಸರ್ಕಾರದಿಂದ ₹ 378 ಕೋಟಿ ಅನುದಾನ ರಸ್ತೆ ಅಭಿವೃದ್ಧಿಗೆ ಬಂದಿರುವಾಗ ಅದನ್ನು ಸದುಪಯೋಗಪಡಿಸಿಕೊಳ್ಳದಿದ್ದರೆ ಮೂರ್ಖತನವಾಗುತ್ತದೆ ಎಂದು ಹೇಳಿದರು. ಪ್ರಮುಖರಾದ ಗಣಪತಿ ನಾಯ್ಕ, ಸುಭಾಷ್ ಮಂಡೂರು, ಪರಮಾನಂದ ಹೆಗಡೆ, ಮಂಜು ಮೊಗೇರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.