ಶಿರಸಿ: ಆಧುನಿಕ ಸೌಲಭ್ಯಗಳುಳ್ಳ ಆಂಬುಲೆನ್ಸ್‌ಗಳು ಸಂಚರಿಸುವ ಐಸಿಯುಗಳಂತೆ ಕಾರ್ಯನಿರ್ವಹಿಸುವುದರಿಂದ ತುರ್ತು ಸಂದರ್ಭಗಳಲ್ಲಿ ರೋಗಿ ಬದುಕುಳಿಯುವ ಸಾಧ್ಯತೆ ಹೆಚ್ಚಿಸುತ್ತವೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಆಧುನಿಕ ಸೌಲಭ್ಯಗಳುಳ್ಳ ಒಂದು ಆ್ಯಂಬುಲೆನ್ಸ್ ಹಾಗೂ ಕೈಗಾ ಪವರ್ ಗ್ರಿಡ್ ಕೊಡುಗೆ ನೀಡಿದ ಒಂದು ಆ್ಯಂಬುಲೆನ್ಸ್ ಅನ್ನು ಬುಧವಾರ ಆಸ್ಪತ್ರೆಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಆರೋಗ್ಯ ಹಕ್ಕು ಪ್ರತಿಯೊಬ್ಬರದ್ದಾಗಿದೆ. ಹೀಗಾಗಿ ರೋಗಿಗಳ ಅನುಕೂಲಕ್ಕಾಗಿ, ತುರ್ತು ಸಂದರ್ಭದಲ್ಲಿ ರೋಗಿಗೆ ಪೂರಕವಾಗಿ ಆಂಬುಲೆನ್ಸ್ ನೀಡಲಾಗಿದೆ’ ಎಂದರು.
‘ನಗರದಲ್ಲಿ ಅತ್ಯುತ್ತಮ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ. ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ. ಇದರಿಂದ ಎಲ್ಲ ರೀತಿಯ ರೋಗಗಳಿಗೂ ಚಿಕಿತ್ಸೆ ಸಿಗಲಿದೆ’ ಎಂದ ಅವರು, ‘ತ್ವರಿತಗತಿಯಲ್ಲಿ ಹೊಸ ಆಸ್ಪತ್ರೆ ಕಟ್ಟಡ ಕಾಮಗಾರಿ ನಡೆಯತ್ತಿದ್ದು, ಶೀಘ್ರದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೂ ಸೂಚನೆ ನೀಡಲಾಗುವುದು’ ಎಂದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ನೇತ್ರಾವತಿ ಮಾತನಾಡಿ, ₹37 ಲಕ್ಷದ ಆಂಬುಲೆನ್ಸ್‌ನಲ್ಲಿ ವೆಂಟಿಲೇಟರ್, ಇಸಿಜಿ ಮಾನಿಟರ್, ಡಿಫಿಬ್ರಿಲೇಟರ್‌ಗಳಂಥ ಆಧುನಿಕ ವೈದ್ಯಕೀಯ ಉಪಕರಣ ಸೌಲಭ್ಯ ಇದೆ. ದೂರದ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸಲು ಅಥವಾ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗೆ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಇದರಿಂದ ಹೆಚ್ಚಿನ ಅನುಕೂಲ ಆಗುತ್ತದೆ. ಆಂಬುಲೆನ್ಸ್ ಸೇವೆಗೆ 9480529936 ಅಥವಾ 08384229936 ಸಂಪರ್ಕಿಸಬಹುದು’ ಎಂದರು.
ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಪ್ರಮುಖರಾದ ಶ್ರೀನಿವಾಸ ನಾಯ್ಕ, ಗಣೇಶ ದಾವಣಗೆರೆ, ಜಗದೀಶ ಗೌಡ, ದೀಪಕ ದೊಡ್ಡೂರು, ಜಾಫಿ ಪೀಟರ್ ಹಾಗೂ ಇತರರಿದ್ದರು.
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಗೊಂದಲಗಳಿಗೆ ಇಲ್ಲಿನ ಸಿಬ್ಬಂದಿ ಅವಕಾಶ ನೀಡಬಾರದು. ಈ ಬಗ್ಗೆ ಜಾಗೃತರಾಗಿರುವುದು ಕಡ್ಡಾಯಭೀಮಣ್ಣ ನಾಯ್ಕ ಶಾಸಕ
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಇದು ನಿವಾರಣೆಯಾಗಲು ವೈದ್ಯಕೀಯ ಕಾಲೇಜ್ ನಿಯಮಾವಳಿಗಳಲ್ಲಿ ಸರಳೀಕರಣ ಮಾಡುವ ಅಗತ್ಯವಿದೆ. ಒಂದೊಮ್ಮೆ ಸರಳೀಕರಣವಾದರೆ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಾರೆ. ಅಂಥವರು ಭವಿಷ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುವುದರಿಂದ ವೈದ್ಯರ ಕೊರತೆ ಶಾಶ್ವತವಾಗಿ ದೂರಾಗಿ ರೋಗಿಗಳಿಗೆ ಅನುಕೂಲ ಆಗುತ್ತದೆ. ಈ ಬಗ್ಗೆ ಸರ್ಕಾರಗಳು ಕ್ರಮ ವಹಿಸುವ ಅಗತ್ಯವಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.