ಶಿರಸಿ: ‘ನಿರ್ಮಾಣ ಹಂತದಲ್ಲಿನ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಎಂ.ಆರ್.ಐ., ಸಿಟಿ ಸ್ಕ್ಯಾನ್, ಟ್ರಾಮಾ ಸೆಂಟರ್ ಬರಲು ಅಗತ್ಯವಿರುವ ಉಪಕರಣ ಖರೀದಿಸಲು, ಹೆಚ್ಚಿನ ಅನುದಾನ ತರಲು ಶಾಸಕ ಭೀಮಣ್ಣ ನಾಯ್ಕ ಅಧಿವೇಶನದಲ್ಲಿ ಧ್ವನಿ ಎತ್ತಬೇಕು’ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ಖರೀದಿಸುವ ವಿಚಾರದ ಪ್ರಸ್ತಾವ ಗೊತ್ತಿಲ್ಲ ಎನ್ನುವ ಶಾಸಕರ ಮಾತು ಶುದ್ಧ ಸುಳ್ಳು. ಈಗಾಗಲೇ ಆ ವಿಷಯದ ಕುರಿತು ಹಲವು ಬಾರಿ ನಾನೇ ಪ್ರಸ್ತಾಪ ಮಾಡಿದ್ದೇನೆ. ಅಲ್ಲದೇ ನವೆಂಬರ್‌ನಲ್ಲೇ ಪ್ರಸ್ತಾವ ಹೋಗಿರುವ ಕುರಿತು ಆಸ್ಪತ್ರೆ ವೈದ್ಯಾಧಿಕಾರಿಗಳ ದೃಢೀಕರಣವನ್ನೂ ತೆಗೆದುಕೊಳ್ಳಲಾಗಿದೆ’ ಎಂದರು.
‘ಆದರೆ ಅದಕ್ಕೆ ಅಗತ್ಯವಿರುವ ಅನುದಾನ ತರಲು ಬದ್ಧರಿರುವುದಾಗಿ ಶಾಸಕರು ತಿಳಿಸಿದ್ದು, ಶೀಘ್ರವಾಗಿ ಅದನ್ನು ಬಿಡುಗಡೆ ಮಾಡಿಸಬೇಕು. ಜತೆಗೆ ಅಧಿವೇಶನದಲ್ಲಿ ನಮ್ಮ ಆಸ್ಪತ್ರೆಗೆ ಹೆಚ್ಚಿನ ಅನುದಾನಕ್ಕೆ ಧ್ವನಿ ಎತ್ತಬೇಕು’ ಎಂದ ಅವರು, ಈ ಹಿಂದೆ ಶಿರಸಿಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಬಸ್ ನಿಲ್ದಾಣದ ಉದ್ಘಾಟನೆಯ ಕುರಿತು ಶಾಸಕ ಭೀಮಣ್ಣ ನಾಯ್ಕ ಎರಡು ಬಾರಿ ಮಾಹಿತಿ ನೀಡಿದ್ದರು. ಆದರೆ ಉದ್ಘಾಟನೆ ಆಗಿಲ್ಲ. ಈಗ ಪುನಃ ಮಾರ್ಚ್ ಕೊನೆಯ ವಾರದಲ್ಲಿ ಉದ್ಘಾಟನೆಗೆ ದಿನ ನಿಗದಪಡಿಸಿದ್ದು, ಮಾರ್ಚ್ 26, 27ರಂದು ಉದ್ಘಾಟನೆ ಆಗಿ ಜನರಿಗೆ ಅನುಕೂಲ ಆಗಲಿ. ಒಂದೊಮ್ಮೆ ಉದ್ಘಾಟನೆ ಆಗದೇ ಹೋದಲ್ಲಿ ಏಪ್ರಿಲ್ ಮೊದಲನೇ ವಾರದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ’ ಎಂದರು.
ಪ್ರಮುಖರಾದ ನಂದನ್ ಸಾಗರ್, ನಾರಾಯಣ ಹೆಗಡೆ, ಹಾಲಪ್ಪ ಜಕಲನಣ್ಣನವರ್, ಚಿದಾನಂದ ಹರಿಜನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.