ADVERTISEMENT

ಬತ್ತುವ ನದಿಗಳಲ್ಲಿ ನೀರೆತ್ತುವ ಪ್ರಯತ್ನ ಬೇಡ

ನದಿ ಜೋಡಣೆ ಯೋಜನೆ: ವಾಸ್ತವದ ಅಂಕಿಅಂಶಕ್ಕೆ ಸಾಮ್ಯತೆ ಇಲ್ಲವೆನ್ನುವ ತಜ್ಞರು

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 7:11 IST
Last Updated 7 ಜನವರಿ 2026, 7:11 IST
ಬೇಡ್ತಿ ಉಪನದಿಯಾದ ಶಾಲ್ಮಲಾ ನದಿ ಬೇಸಿಗೆ ಸಂದರ್ಭದಲ್ಲಿ ಬತ್ತಿ ಹೋಗಿರುವುದು (ಸಂಗ್ರಹ)
ಬೇಡ್ತಿ ಉಪನದಿಯಾದ ಶಾಲ್ಮಲಾ ನದಿ ಬೇಸಿಗೆ ಸಂದರ್ಭದಲ್ಲಿ ಬತ್ತಿ ಹೋಗಿರುವುದು (ಸಂಗ್ರಹ)   

ಶಿರಸಿ: ನದಿಗಳ ನೈಸರ್ಗಿಕ ಹರಿವು ಅಪಾಯಕಾರಿ ಮಟ್ಟಕ್ಕೆ ಕುಸಿದಿರುವ ಕಾಲಘಟ್ಟದಲ್ಲಿ ನದಿ ಜೋಡಣೆ, ನೀರು ವರ್ಗಾವಣೆಯ ಪ್ರಸ್ತಾಪವು ಕೇವಲ ಅವೈಜ್ಞಾನಿಕವಷ್ಟೇ ಅಲ್ಲ, ಸ್ಥಳೀಯ ಕೃಷಿ ಮತ್ತು ಪರಿಸರ ವ್ಯವಸ್ಥೆಯ ಮೇಲಿನ ಗಂಭೀರ ಪ್ರಹಾರವಾಗಿದೆ ಎಂದು ಕೃಷಿಕರು ಮತ್ತು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

‘ಯಾವುದೇ ನದಿ ಜೋಡಣೆ ಯೋಜನೆ ತಾಂತ್ರಿಕವಾಗಿ ಯಶಸ್ವಿ ಆಗಬೇಕಾದರೆ ಆ ನದಿಯಲ್ಲಿ ಕನಿಷ್ಠ ಶೇ.30ರಷ್ಟು ನೈಸರ್ಗಿಕ ಹರಿವು ಇರಲೇಬೇಕು ಎಂಬ ವೈಜ್ಞಾನಿಕ ನಿಯಮವಿದೆ. ಆದರೆ ಬೇಡ್ತಿ, ಅಘನಾಶಿನಿ ನದಿಗಳಲ್ಲಿ ಜನವರಿಯಿಂದ ಜೂನ್‍ವರೆಗೆ 1990ರ ದಶಕದಲ್ಲಿ ನೈಸರ್ಗಿಕ ಹರಿವು ಶೇ.30ಕ್ಕಿಂತ ಹೆಚ್ಚಿತ್ತು, ಆದರೆ 2015ರ ವೇಳೆಗೆ ಶೇ.25ಕ್ಕೆ ಇಳಿದು, ಪ್ರಸ್ತುತ 2025ರ ವೇಳೆಗೆ ಶೇ.5ಕ್ಕಿಂತಲೂ ಕೆಳಮಟ್ಟಕ್ಕೆ ಕುಸಿದಿದೆ. ಅಂದರೆ, ಡಿಸೆಂಬರ್ ತಿಂಗಳ ನಂತರ ಮೇ ಅಂತ್ಯದಲ್ಲಿ ಕೆಲವು ನದಿಗಳಲ್ಲಿ ಹರಿವೇ ಇರುವುದಿಲ್ಲ’ ಎಂಬುದು ತಜ್ಞರ ಮಾತಾಗಿದೆ.

‘ಮಳೆ ಸುರಿಯುವ ಪ್ರಮಾಣದ ಮೇಲೆ ಸರ್ಕಾರದ ಲೆಕ್ಕಾಚಾರದ ಪ್ರಕಾರ ಬೇಡ್ತಿ ನದಿಯಿಂದ ಸುಮಾರು 100 ಟಿಎಂಸಿ ಹಾಗೂ ಅಘನಾಶಿನಿಯಿಂದ 135 ಟಿಎಂಸಿಗೂ ಅಧಿಕ ನೀರು ಸಮುದ್ರಕ್ಕೆ ಹರಿಯುತ್ತಿದೆ. ಹೀಗೆ ಹರಿವ ಹೆಚ್ಚುವರಿ ನೀರು ಬೇಡ್ತಿಯಿಂದ 18.50 ಟಿಎಂಸಿ ಹಾಗೂ ಅಘನಾಶಿನಿಯಿಂದ 35 ಟಿಎಂಸಿ ನೀರನ್ನು ಪೂರ್ವಕ್ಕೆ ಹರಿಸಲು ಯೋಜಿಸಲಾಗಿದೆ. ಆದರೆ ಈ ಹೆಚ್ಚುವರಿ ನೀರು ಎಂಬ ವಾದವೇ ಪೂರ್ಣ ಸತ್ಯವಲ್ಲ. ಈ ಪ್ರಮಾಣ ಹಳೆಯ ಅಂಕಿಅಂಶವಾಗಿದ್ದು, ಇಂದಿನ ವಾಸ್ತವದಲ್ಲಿ ಅದು ಶೇ.50ಕ್ಕೂ ಹೆಚ್ಚು ಪ್ರಮಾಣ ಕುಸಿದಿದೆ. ಯೋಜನೆಯ ಕಲ್ಪನೆ ಮೂಡಿದ ಕಾಲಕ್ಕೂ ಮತ್ತು ಇಂದಿನ ವಾಸ್ತವಕ್ಕೂ ಹರಿವಿನ ಪ್ರಮಾಣದಲ್ಲಿ ಶೇ.60–70ರಷ್ಟು ಇಳಿಕೆಯಾಗಿದೆ’ ಎಂಬುದು ಜೀವವಿಜ್ಞಾನಿ ಕೇಶವ ಕೊರ್ಸೆ ಮಾತು.

ADVERTISEMENT

‘ಬೇಡ್ತಿ, ಅಘನಾಶಿನಿ ನದಿಗಳ ತಟದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದ್ದು, ಸಾವಿರಾರು ಕುಟುಂಬಗಳು ಹಲವಾರು ದಶಕಗಳಿಂದ ಕೃಷಿಗಾಗಿ ಸಂಪೂರ್ಣವಾಗಿ ನೈಸರ್ಗಿಕ ನೀರನ್ನೇ ಅವಲಂಬಿಸಿವೆ. ಒಂದು ವೇಳೆ ನದಿ ನೀರನ್ನು ಬೇರೆಡೆಗೆ ವರ್ಗಾಯಿಸಿದರೆ, ಮಲೆನಾಡಿನ ಸಮೃದ್ಧ ತೋಟಗಳು ಮತ್ತು ಗದ್ದೆಗಳು ಒಣಗಿ ಹೋಗಲಿವೆ. ನಮ್ಮ ಹಕ್ಕಿನ ನೀರನ್ನು ಕಿತ್ತುಕೊಂಡು ನಮ್ಮನ್ನು ಬೀದಿಪಾಲು ಮಾಡಿದರೆ ನಾವು ಬದುಕುವುದು ಹೇಗೆ?’ ಎಂಬುದು ರೈತರ ಆಕ್ರೋಶಭರಿತ ಪ್ರಶ್ನೆಯಾಗಿದೆ.

‘ನದಿ ಹರಿವು ಕ್ಷೀಣಿಸಲು ಕೇವಲ ಮಳೆಯ ಅಭಾವವಷ್ಟೇ ಕಾರಣವಲ್ಲ, ಹವಾಮಾನ ವೈಪರೀತ್ಯ, ಸತತ ಬರಗಾಲ, ಕೆರೆಗಳ ಅತಿಕ್ರಮಣ ಹಾಗೂ ಅಂತರ್ಜಲದ ಅತಿಯಾದ ಬಳಕೆ ನದಿಗಳ ಒಳಹರಿವನ್ನು ಕುಂಠಿತಗೊಳಿಸಿವೆ. ಇಂತಹ ಪರಿಸ್ಥಿತಿಯಲ್ಲಿ ನೀರು ವರ್ಗಾವಣೆ ಮಾಡುವುದು ನದಿಯ ಪರಿಸರ ವ್ಯವಸ್ಥೆಯನ್ನು ಮತ್ತು ಜೈವಿಕ ವೈವಿಧ್ಯತೆಯನ್ನು ಸಂಪೂರ್ಣವಾಗಿ ನಾಶಪಡಿಸಿದಂತೆ’ ಎಂಬುದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ಮಾತಾಗಿದೆ. 

ವಾಸ್ತವಿಕವಾಗಿ ಸರಿಯಲ್ಲ: ‘ಸಮೃದ್ಧವಾಗಿ ನೀರಿದ್ದ ಕಾಲದಲ್ಲಿ ರೂಪಿಸಿದ ಈ ಯೋಜನೆ ಈಗಿನ ಕ್ಷೀಣಿಸಿದ ಹರಿವಿನ ಸಂದರ್ಭದಲ್ಲಿ ಜಾರಿಗೊಳಿಸುವುದು ವಾಸ್ತವಿಕವಾಗಿ ಸರಿಯಲ್ಲ. ಇದು ಯೋಜಿತ ಪ್ರದೇಶದ ಜನರಿಗೂ ನಿರಂತರ ನೀರು ಒದಗಿಸಲು ವಿಫಲವಾಗುತ್ತದೆ ಮತ್ತು ಮೂಲ ಪ್ರದೇಶದ ರೈತರನ್ನು ಸಂಕಷ್ಟಕ್ಕೆ ದೂಡುತ್ತದೆ. ಸರ್ಕಾರವು ತಕ್ಷಣವೇ ಹಠಮಾರಿ ಧೋರಣೆ ಬಿಟ್ಟು ಯೋಜನೆ ಕೈಬಿಡಬೇಕಿದೆ. ಇಲ್ಲದಿದ್ದರೆ ಈ ಯೋಜನೆ ಕೇವಲ ಕಾಗದದ ಮೇಲಿನ ವರದಿಯಾಗಿ ಉಳಿಯುವುದಲ್ಲದೆ ದೊಡ್ಡ ಮಟ್ಟದ ಜನಹೋರಾಟಕ್ಕೆ ನಾಂದಿಯಾಗಲಿದೆ’ ಎಂಬುದು ಹೋರಾಟದ ನೇತೃತ್ವ ವಹಿಸಿರುವ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಎಚ್ಚರಿಕೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.