
ಶಿರಸಿ: ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆ ವಿರೋಧಿಸಿ ನಗರದಲ್ಲಿ ಜನವರಿ 11ರಂದು ನಡೆಯಲಿರುವ ಬೃಹತ್ ಜನ ಸಮಾವೇಶ ಯಶಸ್ಸಾಗಿಸಲು ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಗುರುವಾರ ಜರುಗಿದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಡಿ.2ನೇ ವಾರದಲ್ಲಿ ಬೆಂಗಳೂರಲ್ಲಿ ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತ ಸಭೆ ನಡೆಯಲಿದ್ದು, ಅದನ್ನು ಪ್ರಭಲವಾಗಿ ನಡೆಸುವ ಅಗತ್ಯವಿದೆ. ಜತೆಗೆ ಶಿರಸಿಯಲ್ಲಿ ಡಿ.3ನೇ ವಾರ ವಿವಿಧ ಸಮುದಾಯಗಳ ಪ್ರಮುಖರ ಸಭೆ ಏರ್ಪಡಿಸಬೇಕಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಬೇಡ್ತಿ, ಶಾಲ್ಮಲಾ, ಅಘನಾಶಿನಿ ನದಿ ಕಾವಲು ಸಮಿತಿ ರಚನೆ, ಬೇಡ್ತಿ-ಅಘನಾಶಿನಿ ಸಂರಕ್ಷಿತ ಪ್ರದೇಶ ಆದೇಶ ಉಲ್ಲಂಘನೆಗೆ ವಿರೋಧಿಸಿ ಮನವಿ ಸಲ್ಲಿಕೆ, ಕುಮಟಾದಲ್ಲಿ ಕರಾವಳಿ ಅಘನಾಶಿನಿ ತೀರದ ಮೀನುಗಾರರು, ರೈತರು, ಮುಖಂಡರ ಸಭೆ ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಬೇಡ್ತಿ ಜನಾಂದೋಲನ ಸಭೆಗೆ ಜಿಲ್ಲೆಯ ಎಲ್ಲ ಮಠಾಧೀಶರನ್ನು ಆಹ್ವಾನಿಸಬೇಕು. ಬೇಡ್ತಿ ಅಘನಾಶಿನಿ ಕಣಿವೆ ಉಳಿಸುವ ನಿರ್ಣಯವನ್ನು ಎಲ್ಲ ಪಂಚಾಯಿತಿಗಳು, ಸಹಕಾರ ಸಂಘ ಸಂಸ್ಥೆಗಳು ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಬೇಡ್ತಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಹೋರಾಟದ ಚಟುವಟಿಕೆ ಹಾಗೂ ಸ್ವರೂಪ ಪ್ರಕಟಿಸಿ, ‘ಬೇಡ್ತಿ ನಿಯೋಗದಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದ್ದು, ದೆಹಲಿಯ ಜಲಶಕ್ತಿ ಹಾಗೂ ಅರಣ್ಯ ಸಚಿವರನ್ನು ಭೇಟಿ ಮಾಡಬೇಕು’ ಎಂದು.
ರಮಾಕಾಂತ ಮಂಡೇಮನೆ, ಗೋಪಾಲಕೃಷ್ಣ ತಂಗಾರ್ಮನೆ, ನರಸಿಂಹ ಸಾತೊಡ್ಡಿ, ಆರ್.ಎಸ್.ಹೆಗಡೆ ಭೈರುಂಬೆ, ಶ್ರೀಪಾದ ಶಿರನಾಲಾ, ಜಿ.ವಿ.ಹೆಗಡೆ ಗೊಡ್ವೆಮನೆ, ಸುರೇಶ ಹಕ್ಕೀಮನೆ, ವಿಶ್ವನಾಥ ಶೀಗೇಹಳ್ಳಿ, ವಿ.ಎಲ್.ಹೆಗಡೆ, ರತ್ನಾಕರ ಬಾಡಲಕೊಪ್ಪ ಮಾತನಾಡಿದರು. ಅಘನಾಶಿನಿ ಕಣಿವೆಯ ಸಾಮಾಜಿಕ ಕಾರ್ಯಕರ್ತ ಎನ್.ವಿ.ಹೆಗಡೆ ಇದ್ದರು.
ನದಿ ಜೋಡಣೆ ವಿರೋಧಿಸಿ ರಾಜ್ಯ ಕೇಂದ್ರ ಸರ್ಕಾರಗಳ ಗಮನ ಸೆಳೆಯುವಲ್ಲಿ ಹೋರಾಟ ಸಮಿತಿ ಜತೆ ಜನಪ್ರತಿನಿಧಿಗಳು ಸಹಕಾರ ನೀಡಬೇಕುಅನಂತ ಅಶೀಸರ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ
ಸೀಮಾಧ್ಯಕ್ಷರು ಸಕ್ರಿಯರಾಗಿ: ವಿಘ್ನೇಶ್ವರ ಹೆಗಡೆ
ಸಭೆಯ ವೇಳೆ ಸ್ವರ್ಣವಲ್ಲೀ ಮಠದ ಕಾರ್ಯಾಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಮಾತನಾಡಿ ‘ಸ್ವರ್ಣವಲ್ಲೀ ಸೀಮೆಗಳ ಅಧ್ಯಕ್ಷರು ಹಾಗೂ ಮಠದ ಪದಾಧಿಕಾರಿಗಳು ಬೇಡ್ತಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಸೂಚಿಸಿದರು. ಈ ವೇಳೆ ಪರಿಸರ ಜೀವ ವಿಜ್ಞಾನಿ ಕೇಶವ ಕೊರ್ಸೆ ಅವರು ಶಿರಸಿಯಲ್ಲಿ ಈಚೆಗೆ ನಡೆದ ವಿಜ್ಞಾನಿಗಳ ವಿಚಾರ ಸಂಕಿರಣದ ಫಲಶೃತಿ ವರದಿ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.