ಶಿರಸಿ: ನಗರ ಪ್ರದೇಶದಲ್ಲಿ ವಾಹನ ನಿಲುಗಡೆ ಸ್ಥಳ, ಪಾದಚಾರಿ ಮಾರ್ಗ ಸೇರಿದಂತೆ ಜನಸಂಚಾರಕ್ಕೆ ತೊಡಕಾದ ಜಾಗಗಳಲ್ಲಿ ಅನುಮತಿ ಇಲ್ಲದೆ ನಿರ್ಮಿಸಿದ್ದ 22ಕ್ಕೂ ಹೆಚ್ಚಿನ ಗೂಡಂಗಡಿಗಳನ್ನು ನಗರಸಭೆ ವತಿಯಿಂದ ತೆರವು ಮಾಡಿ, ಸಂಚಾರ ಪೊಲೀಸ್ ಠಾಣೆ ಕಾರ್ಯವ್ಯಾಪ್ತಿಗೆ ವಹಿಸಲಾಯಿತು.
ಜನನಿಬಿಡ ಪ್ರದೇಶದಲ್ಲಿದ್ದ ಗೂಡಂಗಡಿಗಳಿಂದ ಸಂಚಾರಕ್ಕೆ ಸಮಸ್ಯೆಯಾಗಿತ್ತು. ವಾಹನ ನಿಲುಗಡೆಗೂ ತೊಂದರೆಯಾಗಿತ್ತು. ಸಂಚಾರ ನಿಯಮಗಳ ಪಾಲನೆಯಾಗದೆ, ಪೊಲೀಸರಿಗೂ ಇದು ತಲೆನೋವಾಗಿ ಪರಿಣಮಿಸಿತ್ತು.
ನಗರಸಭೆಯ ಹಲವು ಸಭೆಗಳಲ್ಲಿ ಈ ವಿಷಯ ಪ‍್ರಸ್ತಾಪವಾಗಿದ್ದರೂ, ಯಾವುದೇ ಕ್ರಮವಾಗಿರಲಿಲ್ಲ. ಪ್ರಸ್ತುತ ಸಂಚಾರ ಪೊಲೀಸ್ ಠಾಣೆ ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳ ಸೂಚನೆ ಮೇರೆಗೆ ನಗರಸಭೆಯಿಂದ ಗೂಡಂಗಡಿಗಳನ್ನು ತ್ವರಿತವಾಗಿ ತೆರವು ಮಾಡಲಾಯಿತು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಅಂಗಡಿಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
‘ನಗರದಲ್ಲಿ 300ಕ್ಕೂ ಹೆಚ್ಚು ಗೂಡಂಗಡಿಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ತೆರವು ಮಾಡುವುದಿದ್ದರೆ ಎಲ್ಲವನ್ನೂ ತೆರವು ಮಾಡಬೇಕು’ ಎಂದು ಅಂಗಡಿಕಾರರು ಆಗ್ರಹಿಸಿದರು.
‘ಈಗಾಗಲೇ ಸಾಕಷ್ಟು ಬಾರಿ ತೆರವಿಗೆ ಸೂಚನೆ ನೀಡಲಾಗಿತ್ತು. ಆದರೆ, ದಿನ ಕಳೆದಂತೆ ಹೊಸ ಅಂಗಡಿಗಳು ಶುರುವಾಗಿದ್ದವು. ನಗರಸಭೆಯ ಆದೇಶಕ್ಕೆ ಕಿಮ್ಮತ್ತು ನೀಡದೇ, ಕರವನ್ನೂ ನೀಡದೇ, ಸಂಚಾರಕ್ಕೆ ಸಮಸ್ಯೆಯಾಗಿತ್ತಿದ್ದ ಅಂಗಡಿಗಳನ್ನು ತೆರವು ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.
ನಗರಸಭೆ ಪರಿಸರ ಎಂಜಿನಿಯರ್ ಶಿವರಾಜ್ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ನಗರಸಭೆ ಕಂದಾಯ ಅಧಿಕಾರಿ ಆರ್.ಎಂ. ವೆರ್ಣೇಕರ್ ಹಾಗೂ ಸಂಚಾರಿ ಪೋಲಿಸ್ ಠಾಣೆ ಪಿಎಸ್ಐ ಮಹಂತೇಶ ಕುಂಬಾರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.