ADVERTISEMENT

ನಗರಸಭೆ ಅಧಿಕಾರಿ, ಸದಸ್ಯರೇ ಶಾಮೀಲು

ಪೈಪ್ ಕಳವು ಪ್ರಕರಣ: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:10 IST
Last Updated 8 ಜುಲೈ 2025, 4:10 IST
ಎಂ.ನಾರಾಯಣ 
ಎಂ.ನಾರಾಯಣ    

ಶಿರಸಿ: ಇಲ್ಲಿನ ನಗರಸಭೆ ಅಧೀನದ ಕಾಸ್ಟ್ ಐರನ್ ಪೈಪ್‍ಗಳ ಕಳವು ಪ್ರಕರಣದಲ್ಲಿ ನಗರಸಭೆ ಮೂರು ಅಧಿಕಾರಿಗಳು ಹಾಗೂ ಮೂರು ಸದಸ್ಯರು ಸಂಪೂರ್ಣ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.

ನಗರದ ಡಿಎಸ್‌ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರಕರಣದ ಪ್ರಮುಖ ಆರೋಪಿಯಾ ಶಿಕಾರಿಪುರದ ಗುಜರಿ ಗುತ್ತಿಗೆದಾರ ಸಯ್ಯದ್ ಜಕ್ರಿಯಾನನ್ನು ಹಿಂದಿನ ತನಿಖಾಧಿಕಾರಿ ಸೀತಾರಾಮ ಪಿ. ವಿಚಾರಣೆ ನಡೆಸಿ, ಕಳವಾದ ಪೈಪುಗಳನ್ನು ಮಾರಾಟ ಮಾಡಿ ಗಳಿಸಿದ್ದ ₹7.02 ಲಕ್ಷಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದರು.

‘ಆತನ ವಿಚಾರಣೆಯಲ್ಲಿ ಪೌರಾಯುಕ್ತ ಎಚ್.ಕಾಂತರಾಜ, ಎಇಇ ಪ್ರಶಾಂತ ವೇರ್ಣೇಕರ್, ಜೆಇ ಸುಫಿಯಾನ್ ಬ್ಯಾರಿ, ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಕುಮಾರ ಬೋರ್ಕರ್, ಯಶವಂತ ಮರಾಠಿ ಸಹಕಾರ ಮತ್ತು ಅನುಮತಿಯಿಂದಲೇ ಪೈಪುಗಳನ್ನು ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದಾಗ ಎಲ್ಲರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹಾಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ಗೌಡ ತನಿಖೆಯನ್ನು ಮುಂದುವರೆಸಿದ್ದು, ತನಗೆ ಪರಿಚಯವಿದ್ದ ಈ ಆರು ಜನರೊಂದಿಗೆ ಜಕ್ರಿಯಾ ಪಿತೂರಿ ಮಾಡಿ ಫೆಬ್ರುವರಿ ತಿಂಗಳಿನಲ್ಲಿ ಈ ಅಪರಾಧ ಕೃತ್ಯ ಮಾಡಿರುವುದು ಸಾಬೀತಾಗಿದೆ’ ಎಂದರು.

ADVERTISEMENT

‘ಪ್ರಕರಣದಲ್ಲಿ ಸರ್ಕಾರಿ ನೌಕರರು ಮತ್ತು ಮೂವರು ನಗರಸಭೆ ಸದಸ್ಯರು ಲೋಕನೌಕರರಾಗಿರುವುದರಿಂದ ಅವರನ್ನು ಸೇವೆಯಿಂದ ತೆಗೆದು ಹಾಕಲು ಅಧಿಕಾರವಿರುವ ಪ್ರಾಧಿಕಾರ ಯಾರು ಎನ್ನುವ ಬಗ್ಗೆ ದಾಖಲಾತಿಯನ್ನು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕೋರಲಾಗಿದೆ. ಅವರಿಂದ ಮಾಹಿತಿ ಸಂಗ್ರಹಿಸಿದ ನಂತರ ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಜರುಗಿಸಲು ಅನುಮತಿ ಪತ್ರ ಪಡೆದುಕೊಳ್ಳುವುದು ಬಾಕಿ ಇದೆ. ಒಟ್ಟೂ 3 ಜೆಸಿಬಿ, ಕ್ರೇನ್ ಮತ್ತು 2 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೈಪುಗಳನ್ನು ಪುಡಿಮಾಡಿ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಇಲಾಖೆಗಳಿಂದ ದಾಖಲೆಗಳನ್ನು ಸಂಗ್ರಹ ಮಾಡಲಾಗಿದೆ. ಕಳವಾದ 116 ಪೈಪ್‌ಗಳ ಈಗಿನ ಮಾರುಕಟ್ಟೆ ಮೌಲ್ಯ ₹21.18 ಲಕ್ಷ ಎಂದು ವರದಿ ಪಡೆಯಲಾಗಿದೆ’ ಎಂದು ಹೇಳಿದರು.

ಡಿಎಸ್‌ಪಿ ಗೀತಾ ಪಾಟೀಲ, ಶಿರಸಿ ಸಿಪಿಐ ಶಶಿಕಾಂತ ವರ್ಮಾ, ಸಿದ್ದಾಪುರ ಪಿಐ ಜೆ.ಬಿ. ಸೀತಾರಾಮ, ಶಿರಸಿ ಗ್ರಾಮೀಣ ಠಾಣೆ ಪಿಐ ಮಂಜುನಾಥ ಗೌಡ, ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ, ಯಲ್ಲಾಪುರ ಪಿಐ ರಮೇಶ ಹಾನಾಪುರ ಇದ್ದರು.

ದೂರು ನೀಡಿದವನೂ ಆರೋಪಿ: ಶಿರಸಿ

ನಗರಸಭೆಯ ಜೆಇ ಸುಫಿಯಾನ ಅಹಮ್ಮದ್ ಬ್ಯಾರಿ ಫೆ.20ರಿಂದ ಫೆ.27ರವರೆಗೆ ನಗರಸಭೆಗೆ ಸಂಬಂಧಿಸಿದ ಕೆಂಗ್ರೆ ನೀರು ಸರಬರಾಜು ಕೇಂದ್ರದಿಂದ ಹುತ್ಗಾರ ಪಂಪಿನ ಘಟಕಕ್ಕೆ 1969ನೇ ಸಾಲಿನಲ್ಲಿ ಭೂಮಿಯ ಒಳಗಡೆ ಅಳವಡಿಸಿದ್ದ 8ಕಿ.ಮೀ ಪೈಪುಗಳ ಸುಮಾರು 900 ಮೀಟರ್ ಉದ್ದದ ಒಟ್ಟೂ 116 ಕಾಸ್ಟ್ ಐರನ್ ಪೈಪುಗಳನ್ನು ನನ್ನ ಅಥವಾ ನಗರಸಭೆಯ ಗಮನಕ್ಕೆ ತರದೇ ಮತ್ತು ನಗರಸಭೆಯ ಅನುಮತಿಯಿಲ್ಲದೇ ನಿಯಮದಂತೆ ಯಾವುದೇ ಗುತ್ತಿಗೆ ಇತ್ಯಾದಿ ಆಗದೇ ಕಳ್ಳತನ ಮಾಡಿಕೊಂಡು ಹೋಗಲಾಗಿದೆ.  ಗುಜರಿ ಗುತ್ತಿಗೆದಾರನಾಗಿರುವ ಶಿವಮೊಗ್ಗದ ಶಿಕಾರಿಪುರದ ಸಯ್ಯದ ಜಕ್ರಿಯಾ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯವಿದೆ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ದೂರು ನೀಡಿದ ವ್ಯಕ್ತಿಯೇ ಪ್ರಕರಣದಲ್ಲಿ ಭಾಗಿಯಾಗುವುದು ತನಿಖೆಯಿಂದ ಹೊರಬಿದ್ದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.