ಶಿರಸಿ: ಬಸ್‍ಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಗ್ರಾಮೀಣ ಭಾಗಕ್ಕೆ ಅಸಮರ್ಪಕ ಸಂಚಾರ, ಬಸ್ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ನಗರದ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆ ಕೆಡಿಪಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಬಸ್ ನಿಲ್ದಾಣ ಕಂಟ್ರೋಲರ್ ರಾಮಚಂದ್ರ ಶೆಟ್ಟಿ ಮಾತನಾಡಿ, ‘ವಿಭಾಗದಲ್ಲಿ 14-15 ಲಕ್ಷ ಕಿ.ಮೀ ಓಡಿದ ಬಸ್‌ಗಳೇ ಹೆಚ್ಚಿವೆ. ಹಾಗಾಗಿ ನಿರ್ವಹಣೆ ಸಮಸ್ಯೆ ಆಗುತ್ತಿದೆ. ಸಿಬ್ಬಂದಿ ಕೊರತೆಯೂ ಇದೆ’ ಎಂದರು.
ಈ ವೇಳೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಮಿತಿ ಸದಸ್ಯ ಪ್ರಸನ್ನ ಶೆಟ್ಟಿ, ‘ಶಕ್ತಿ ಯೋಜನೆಯ ಆಶಯಕ್ಕೆ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಧಕ್ಕೆ ತರುತ್ತಿದೆ. ಹಳೆಯ ಬಸ್‌ಗಳು ದುರಸ್ತಿಯಲ್ಲಿದ್ದರೂ ಅವುಗಳನ್ನು ದೂರದ ಗ್ರಾಮೀಣ ಭಾಗಕ್ಕೆ ಬಿಡಲಾಗುತ್ತಿದೆ. ಹೊಸ ಬಸ್‌ಗಳನ್ನು ಗ್ರಾಮೀಣ ಭಾಗಕ್ಕೆ ಬಿಡಬೇಕು. ಬಸ್ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ನೇಮಿಸಬೇಕು. ರಾತ್ರಿ ವೇಳೆ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಸಾರಿಗೆ ಇಲಾಖೆಯವರು ಸಿಬ್ಬಂದಿ ನಿಯೋಜಿಸಬೇಕು’ ಎಂದು ಆಗ್ರಹಿಸಿದರು.
ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಾ ಉಗ್ರಾಣಕರ ಮಾತನಾಡಿ, ‘ದೂರದ ಊರುಗಳಿಗೆ ತೆರಳುವ ಬಸ್‍ಗಳು ರಾತ್ರಿ ವೇಳೆ ಹೊಸ ಬಸ್ ನಿಲ್ದಾಣಕ್ಕೆ ಹೋಗುತ್ತಿಲ್ಲ. ಮಂಗಳೂರು, ಹುಬ್ಬಳ್ಳಿ, ಬೆಂಗಳೂರಿಗೆ ಆಸ್ಪತ್ರೆಗೆ ಹೋಗುವವರಿಗೆ ತೀವ್ರ ತೊಂದರೆ ಆಗುತ್ತಿದೆ. ಹೀಗಾಗಿ ಎಲ್ಲ ಬಸ್‍ಗಳು ಎರಡೂ ಬಸ್ ನಿಲ್ದಾಣಗಳಿಗೆ ಬರುವಂತೆ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
ಸದಸ್ಯ ಶ್ರೀಧರ ಭಟ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಸುವ ಗ್ಯಾರಂಟಿ ಸಮಿತಿ ಸಭೆಗೆ ಇಲಾಖೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಹೀಗಾದರೆ ಸಭೆ ನಡೆಸಿ ಏನು ಪ್ರಯೋಜನ? ಸಮಿತಿ ರಚನೆ ಆಗಿರುವುದು ಗ್ಯಾರಂಟಿ ಯೋಜನೆ ಪ್ರಚಾರಕ್ಕಾಗಿ ಎಂಬುದು ಅಧಿಕಾರಿಗಳಿಗೆ ಅರಿವಿರಬೇಕು’ ಎಂದರು.
ಬೆಣಗಾಂವ ಬಸ್ ಸಮಯ ಬದಲಾವಣೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. 10 ಗಂಟೆಯಾದರೂ ಶಾಲೆಗೆ ತಲುಪಲು ಆಗುತ್ತಿಲ್ಲ. ಈ ಹಿಂದಿನ ಸಮಯವನ್ನೇ ಮುಂದುವರಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು.
ಶಿರಸಿಯ ಬಸ್ ನಿಲ್ದಾಣಗಳಲ್ಲಿ ಮೂತ್ರಾಲಯ ಗುತ್ತಿಗೆ ಪಡೆದವರು ಬಳಕೆದಾರರಿಂದ ₹1ರ ಬದಲು ₹10 ಆಕರಣೆ ಮಾಡುತ್ತಿದ್ದಾರೆ. ಇದು ನಾಚಿಗೆಗೇಡಿನ ಸಂಗತಿ. ಗುತ್ತಿಗೆದಾರರಿಗೆ ನೊಟೀಸ್ ನೀಡಬೇಕುಪ್ರಸನ್ನ ಶೆಟ್ಟಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.