ಶಿರಸಿ: ಸಂಘವನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಇಬ್ಬರು ನಿರ್ದೇಶಕರನ್ನು ವಜಾಗೊಳಿಸಿರುವ ಕೋರ್ಟ್ ಆದೇಶವನ್ನು ಈ ಕೂಡಲೇ ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಆಗ್ರಹಿಸಿ ಸಿದ್ದಾಪುರ ತಾಲ್ಲೂಕಿನ ಕರ್ಕಿಮಕ್ಕಿ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಕೆಲವು ಸದಸ್ಯರು ಆಗ್ರಹಿಸಿದ್ದಾರೆ.
ಈ ಕುರಿತು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಶೇರು ಸದಸ್ಯ ಶಾಂತಕುಮಾರ ಭಟ್, ‘ಸಂಘದ ಹಿಂದಿನ ಅಧ್ಯಕ್ಷರು ಹಾಗೂ ಒಬ್ಬ ನಿರ್ದೇಶಕರ ವಿರುದ್ಧ ಸಂಘದಲ್ಲಿ ಆರ್ಥಿಕ ಅವ್ಯವಹಾರ ಮಾಡಿದ ಆರೋಪದ ಮೇಲೆ ಸಹಕಾರ ಸಂಘದ ಕಾಯ್ದೆ ಕಲಂ 29(ಸಿ) ಅನ್ವಯ ಸಹಾಯಕ ನಿಬಂಧಕರು 2024ರ ಅಕ್ಟೋಬರ್ 11ರಂದು ಇಬ್ಬರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ. ಈ ತೀರ್ಪನ್ನು ಪ್ರಶ್ನಿಸಿ ಎದುರುದಾರರು ಉಪನಿಬಂಧಕರಲ್ಲಿ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ 2024ರ ಅಕ್ಟೋಬರ್ 27ರಂದು ಸಹಾಯಕ ನಿಬಂಧಕರ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ಬಂದಿತ್ತು. ಉಪನಿಬಂಧಕರ ಆದೇಶವನ್ನು ಪ್ರಶ್ನಿಸಿ, ಧಾರವಾಡದ ಹೈ ಕೋರ್ಟ್‍ನಲ್ಲಿ ಮೇಲ್ಮನವಿ ಕೆಲವು ಸದಸ್ಯರು ಸಲ್ಲಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿ 2025ರ ಏ.29ರಂದು ಹೈ ಕೋರ್ಟ್ ಉಪನಿಬಂಧಕರ ಆದೇಶವನ್ನು ರದ್ದುಗೊಳಿಸಿ ಆದೇಶ ನೀಡಿತ್ತು’ ಎಂದರು.
‘ಕೋರ್ಟ್ ಆದೇಶ ನೀಡಿ ಒಂದು ತಿಂಗಳ ಮೇಲಾದರೂ ಇನ್ನೂ ಅನರ್ಹಗೊಂಡಿರುವ ಇಬ್ಬರು ನಿರ್ದೇಶಕರಾಗಿ ಮುಂದುವರೆಯುತ್ತಿದ್ದಾರೆ. ಇದು ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಿದ್ದರೂ ಸಹ ಸಂಸ್ಥೆಯಲ್ಲಿ ತಮ್ಮ ಅಧಿಕಾರ ಬಳಸಿ ಹಣಕಾಸಿನ ವ್ಯವಹಾರಗಳಿಗೆ ಮತ್ತು ಇನ್ನಿತರ ವ್ಯವಹಾರಗಳಿಗೆ ಸಹಿ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ, ಈ ಕುರಿತಂತೆ ಈಗಾಗಲೇ ಸೂಕ್ತ ಕ್ರಮವಿಡಲು ಸಹಾಯಕ ನಿಬಂಧಕರಿಗೆ ಮತ್ತು ಕೆಡಿಸಿಸಿ ಬ್ಯಾಂಕ್‍ಗೆ ಮನವಿ ನೀಡಲಾಗಿದೆ. ಈಗಾಗಲೇ ಅವರನ್ನು ವಜಾಗೊಳಿಸುವ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಈ ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.
ದೊಡ್ಮನೆ ಗ್ರೂಪ್ ಗ್ರಾಮಗಳ ಸಹಕಾರಿ ಸಂಘದ ಸದಸ್ಯರಾದ ಪ್ರಕಾಶ ರಾಮಚಂದ್ರ ಹೆಗಡೆ, ಆನಂದ ಗೌಡ ದೊಡ್ಮನೆ, ಮಹೇಶ ನಾಯ್ಕ ದೊಡ್ಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.