ADVERTISEMENT

ತನಗೆ ಬಂದ ಗೌರವಧನದಿಂದ ಬಸ್ ತಂಗುದಾಣ ನಿರ್ಮಾಣ ಮಾಡಿಸಿದ ಗ್ರಾಮ ಪಂಚಾಯಿತಿ ಸದಸ್ಯ!

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 5:01 IST
Last Updated 23 ಫೆಬ್ರುವರಿ 2026, 5:01 IST
ಶಿರಸಿಯ ಚಿಪಗಿ ನಾರಾಯಣಗುರು ನಗರದಲ್ಲಿ ನಿರ್ಮಿಸಿರುವ ಸುಸಜ್ಜಿತ ಬಸ್ ತಂಗುದಾಣಗಳನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಶಿರಸಿಯ ಚಿಪಗಿ ನಾರಾಯಣಗುರು ನಗರದಲ್ಲಿ ನಿರ್ಮಿಸಿರುವ ಸುಸಜ್ಜಿತ ಬಸ್ ತಂಗುದಾಣಗಳನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.   

ಶಿರಸಿ: ಜನಪ್ರತಿನಿಧಿಗಳು ತಮಗೆ ಸಿಗುವ ಗೌರವಧನವನ್ನು ವೈಯಕ್ತಿಕ ಕಾರ್ಯಗಳಿಗೆ ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಶಿರಸಿ ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ಸದಸ್ಯ ನವೀನ ಶೆಟ್ಟಿ ತಮ್ಮ ಐದು ವರ್ಷದ ಅವಧಿಯ ಸಂಪೂರ್ಣ ಗೌರವಧನವನ್ನು ಸಾರ್ವಜನಿಕ ಹಿತಕ್ಕಾಗಿ ಮೀಸಲಿಟ್ಟು, ಚಿಪಗಿ ನಾರಾಯಣಗುರು ನಗರದಲ್ಲಿ ಎರಡು ಸುಸಜ್ಜಿತ ಬಸ್ ತಂಗುದಾಣಗಳನ್ನು ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿಪಗಿ ಭಾಗದಲ್ಲಿ ಪ್ರಯಾಣಿಕರು ಮಳೆ ಮತ್ತು ಬಿಸಿಲಿಗೆ ತುತ್ತಾಗಿ ರಸ್ತೆ ಬದಿಯಲ್ಲೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ಇತ್ತು. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರ ಈ ಸಂಕಷ್ಟವನ್ನು ಮನಗಂಡ ನವೀನ್ ಶೆಟ್ಟಿ, ತಮ್ಮ ಗೌರವಧನದಿಂದಲೇ ಆಶ್ರಯ ತಾಣಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ತಂಗುದಾಣಗಳನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾನುವಾರ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕಾಗೇರಿ, ‘ಜನಪ್ರತಿನಿಧಿಗಳು ತಮ್ಮ ಸ್ಥಾನಮಾನವನ್ನು ಸಮಾಜ ಸೇವೆಗೆ ಬಳಸಿದರೆ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ನವೀನ್ ಶೆಟ್ಟಿ ಅವರ ಈ ಕಾರ್ಯವೇ ಸಾಕ್ಷಿ. ಸರ್ಕಾರದ ಅನುದಾನ ಕಾಯದೇ ಸ್ವಂತ ಗೌರವಧನದಿಂದ ಸೌಲಭ್ಯ ಕಲ್ಪಿಸಿರುವುದು ಇತರರಿಗೆ ಮಾದರಿಯಾಗಿದೆ’ ಎಂದರು. ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ‘ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಇಂತಹ ಕಾರ್ಯಗಳು ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು.

ADVERTISEMENT

ಈ ವೇಳೆ ಪ್ರಮುಖರಾದ ನಾಗರಾಜ ಶೆಟ್ಟಿ, ಆರ್.ವಿ.ಹೆಗಡೆ, ಸದಾನಂದ ಬಟ್, ಉಷಾ ಹೆಗಡೆ, ಕಿರಣ ಚಿತ್ರಗಾರ ಇತರರಿದ್ದರು. 

-- 

ನನ್ನನ್ನು ಆಯ್ಕೆ ಮಾಡಿದ ಜನತೆಗೆ ಋಣ ಸಂದಾಯ ಮಾಡುವ ಉದ್ದೇಶದಿಂದ ಈ ಕಾರ್ಯ ಮಾಡಿದ್ದೇನೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

-ನವೀನ ಶೆಟ್ಟಿ ಇಸಳೂರು ಪಂಚಾಯಿತಿ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.