ADVERTISEMENT

ಶಿರಸಿ: ಬಾಂದಾರ ಸಹಿತ ಸೇತುವೆ ಯೋಜನೆ ನನೆಗುದಿಗೆ

₹1.5 ಕೋಟಿ ಮೊತ್ತದ ಪ್ರಸ್ತಾವನೆಗೆ ಸಿಗದ ಅನುಮೋದನೆ

ರಾಜೇಂದ್ರ ಹೆಗಡೆ
Published 28 ಜನವರಿ 2026, 6:56 IST
Last Updated 28 ಜನವರಿ 2026, 6:56 IST
ಶಿರಸಿ ತಾಲ್ಲೂಕಿನ ಹಲಗೆ ಹಳ್ಳಕ್ಕೆ ದಶಕಗಳ ಹಿಂದೆ ನಿರ್ಮಿಸಿದ್ದ ಸೇತುವೆ 
ಶಿರಸಿ ತಾಲ್ಲೂಕಿನ ಹಲಗೆ ಹಳ್ಳಕ್ಕೆ ದಶಕಗಳ ಹಿಂದೆ ನಿರ್ಮಿಸಿದ್ದ ಸೇತುವೆ    

ಶಿರಸಿ: ಸ್ಥಳೀಯರ ಬಹುಕಾಲದ ಬೇಡಿಕೆಯಾದ ಹಲಗೆ ಹಳ್ಳದ ಸೇತುವೆ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ಸಿದ್ಧಪಡಿಸಿದ್ದ ₹1.5 ಕೋಟಿಗಳ ಅಂದಾಜು ವೆಚ್ಚದ ಬಾಂದಾರ ಸಹಿತ ಸೇತುವೆ ಪ್ರಸ್ತಾವನೆಯ ಕಡತ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸರ್ಕಾರದಿಂದ ಅನುಮೋದನೆಯ ವಿಳಂಬ ನೀತಿಯಿಂದಾಗಿ ಭೈರುಂಬೆ ಭಾಗದ ಜನರ ದೈನಂದಿನ ಸಂಚಾರ ಸಂಕಷ್ಟಕ್ಕೆ ಸಿಲುಕಿದೆ.

ಮೂರು ದಶಕಗಳ ಹಿಂದೆ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಹಲಗೆ ಹೊಳೆಗೆ ನಿರ್ಮಾಣವಾಗಿದ್ದ ಕಿರು ಸೇತುವೆ ಇಂದು ಸಂಪೂರ್ಣ ಶಿಥಿಲಗೊಂಡಿದೆ. ಸೇತುವೆಯ ಕಂಬಗಳು ಬಿರುಕು ಬಿಟ್ಟು ಅಸ್ಥಿಪಂಜರದಂತಾಗಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ.

ಭೈರುಂಬೆ, ಹುಲೇಕಲ್‌ ಹಾಗೂ ಇಟಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ಬೆಸೆಯುವ ಈ ಪ್ರಮುಖ ಕೊಂಡಿ ಕಳಚಿದರೆ, ಇಲ್ಲಿನ 30ಕ್ಕೂ ಹೆಚ್ಚು ಕುಟುಂಬಗಳು ಹಾಗೂ ನೂರಾರು ಸಾರ್ವಜನಿಕರು 15 ರಿಂದ 20 ಕಿಲೋ ಮೀಟರ್‌ ಸುತ್ತು ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.

ADVERTISEMENT

‘​ಹಲಗೆ ಗ್ರಾಮದಲ್ಲಿರುವ ಈ ಸೇತುವೆ ಮೂಲಕವೇ ಶಾಲಾ ವಿದ್ಯಾರ್ಥಿಗಳು ದೇವರಕೇರಿ, ಅಗಸಾಲ ಬೊಮ್ನಳ್ಳಿ ಹಾಗೂ ಭೈರುಂಬೆ ಶಾಲೆಗಳಿಗೆ ಸಂಚರಿಸಬೇಕು. ಆದರೆ ಶಿಥಿಲಗೊಂಡ ಸೇತುವೆಯ ಮೇಲಿನ ಪಯಣ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ನಡುಕ ಹುಟ್ಟಿಸುತ್ತಿದೆ. ಸಣ್ಣ ನೀರಾವರಿ ಇಲಾಖೆಯು ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿ, ನೀರು ಸಂಗ್ರಹದ ಜತೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಬಾಂದಾರ ಸಹಿತ ಸೇತುವೆಯ ನೀಲನಕ್ಷೆ ಸಿದ್ಧಪಡಿಸಿತ್ತು. ಆದರೆ ಆ ಪ್ರಸ್ತಾವನೆಯು ಮುಂದಿನ ಹಂತಕ್ಕೆ ತಲುಪದೆ ಕೇವಲ ಭರವಸೆಯಾಗಿಯೇ ಉಳಿದಿದೆ’ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

​‘ಹಿಂದಿನ ಶಾಸಕರು ಭರವಸೆ ನೀಡಿದ್ದರು, ಹಾಲಿ ಶಾಸಕ ಭೀಮಣ್ಣ ನಾಯ್ಕ ಕೂಡ ಶೀಘ್ರ ಕಾಮಗಾರಿಯ ಆಶ್ವಾಸನೆ ನೀಡಿದ್ದಾರೆ. ಆದರೆ ಜನರ ಬೇಡಿಕೆ ಮಾತ್ರ ಈಡೇರಿಲ್ಲ. ಹುಲೇಕಲ್‌ ಹೋಬಳಿ ಕೇಂದ್ರಕ್ಕೆ ಅತಿ ಸನಿಹದ ಹಾದಿಯಾಗಿರುವ ಈ ಮಾರ್ಗವನ್ನು ಅಭಿವೃದ್ಧಿಪಡಿಸಿದರೆ, ಸಾರ್ವಜನಿಕರಿಗೆ ಸಮಯ ಹಾಗೂ ಹಣ ಎರಡೂ ಉಳಿತಾಯವಾಗಲಿದೆ. ಇಲಾಖೆಯು ಅಂದಾಜು ವೆಚ್ಚದ ಪಟ್ಟಿ ಸಿದ್ಧಪಡಿಸಿ, ಇಲಾಖೆಗಳಿಗೆ ಕಳುಹಿಸಿ ಸುಮ್ಮನೆ ಕುಳಿತಿರುವುದು ಸರಿಯಲ್ಲ. ಆ ಪ್ರಸ್ತಾವನೆಗೆ ತಕ್ಷಣ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಬೇಕು’ ಎಂದು ಸ್ಥಳೀಯ ನಿವಾಸಿ ಶಂಕರ ಮರಾಠಿ ಅಡವಿಮನೆ ಆಗ್ರಹಿಸಿದ್ದಾರೆ.

​‘ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಳೆಗಾಲ ಆರಂಭವಾಗುವ ಮೊದಲೇ ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದರೆ, ಮುಂದಿನ ದಿನಗಳಲ್ಲಿ ಇಲ್ಲಿನ ಸಂಚಾರ ಕಡಿತಗೊಳ್ಳುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ಅವರು.

3 ದಶಕದ ಹಳೆಯ ಸೇತುವೆ 30ಕ್ಕೂ ಹೆಚ್ಚು ಕುಟುಂಬಗಳ ಆತಂಕ

ಸ್ಥಳೀಯರು ಓಡಾಟಕ್ಕೆ ಅನುಕೂಲವಾಗಲು ದುರಸ್ತಿ ಮಾಡಲಾಗಿದೆ. ಆದರೆ ಅದು ತಾತ್ಕಾಲಿಕವಾಗಿದ್ದು ಶಾಸಕರು ಸಂಸದರು ಗಮನವಹಿಸಿ ಹೊಸ ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು.
ಪ್ರಕಾಶ ಹೆಗಡೆ ಹಲಗೆ ಭೈರುಂಬೆ ಗ್ರಾ.ಪಂ. ಸದಸ್ಯ
ಈ ಹಿಂದೆ ನಬಾರ್ಡ್‍ಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಅದರಲ್ಲಿ ಅನುದಾನ ನೀಡಿಲ್ಲ. ಅದಾದ ನಂತರ ಮತ್ತೆ ಸರ್ಕಾರಕ್ಕೆ ಬಾಂದಾರ ಸಹಿತ ಸೇತುವೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ.
ವಿಕಾಸ ನಾಯ್ಕ ಸಣ್ಣ ನೀರಾವರಿ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.