ವಿದ್ಯುತ್ ಸ್ಪರ್ಷಕ್ಕೆ 37 ಜೀವ ಬಲಿ
ಹೆಚ್ಚುತ್ತಿರುವ ವಿದ್ಯುತ್ ಅವಘಡ
ಜಾಗೃತಿ ಕಾರ್ಯ ಅತ್ಯಗತ್ಯ
ಶಿರಸಿ: ಎಲ್ಲರ ಪಾಲಿಗೆ ಬೆಳಕಾಗಬೇಕಿರುವ ವಿದ್ಯುತ್ ಹಲವರ ಪಾಲಿಗೆ ಮೃತ್ಯುಕೂಪವಾಗಿದೆ. ಜಾಗೃತಿ ಕೊರತೆ ಅಥವಾ ನಿರ್ಲಕ್ಷ್ಯದಿಂದ ವಿದ್ಯುತ್ ಅವಘಡಕ್ಕೆ ಬಲಿಯಾಗುವ ಜನ, ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿದ್ದು, ಹೆಸ್ಕಾಂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ 5 ವ್ಯಕ್ತಿಗಳು ಹಾಗೂ 32 ಜಾನುವಾರುಗಳು ಮೃತಪಟ್ಟಿವೆ.
ವಿದ್ಯುತ್ ಪರಿಕರಗಳ ನಿರ್ವಹಣೆಯ ಅನುಭವ ಇಲ್ಲದ ನಾಗರಿಕರು ವಿದ್ಯುತ್ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ತಾವೇ ದುರಸ್ತಿಗೆ ಮುಂದಾಗುವುದು, ಪ್ಯೂಸ್ ಅಳವಡಿಸುವುದು, ತಂತಿ ಮಾರ್ಗಗಳ ಬಳಿ ಹಸಿಬಟ್ಟೆ ಒಣಗಿಸುವುದು, ಮನೆಯ ಕುಡಿಯುವ ನೀರಿನ ಪಂಪ್, ಮೋಟಾರ್‌ಗಳನ್ನು ಸುರಕ್ಷತೆಯಿಲ್ಲದೇ ಇರಿಸಿಕೊಳ್ಳುವುದು ಮತ್ತಿತರೆ ಕಾರಣಗಳಿಂದ 2024-25ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯಡಿ 65 ವಿದ್ಯುತ್ ಅವಘಡ ಪ್ರಕರಣಗಳು ದಾಖಲಾಗಿವೆ. ಮನುಷ್ಯ, ಜಾನುವಾರುಗಳ ಸಾವು–ನೋವಿನ ಜತೆ ಆಸ್ತಿ ಹಾಗೂ ಬೆಳೆಹಾನಿಗಳು ಸಂಭವಿಸಿವೆ.
2024-25ನೇ ಸಾಲಿನ ಅಪಘಾತಗಳನ್ನು ವಿಶ್ಲೇಷಿಸಿರುವ ವಿದ್ಯುತ್ ಪರಿವೀಕ್ಷಣಾಲಯ ಐಪಿ ಸ್ಥಾವರಗಳ ವ್ಯವಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯುತ್ ಅವಘಡಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದೆ.
ದಿನದಿಂದ ದಿನಕ್ಕೆ ವಿದ್ಯುತ್ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದ್ದು, ವಿದ್ಯುತ್ ಸರಬರಾಜು, ಬಳಕೆದಾರರ ಜಾಲ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಲ್ಲಿ ಮುಖ್ಯವಾಗಿ ರೈತರು, ನಾಗರಿಕರಲ್ಲಿ ವಿದ್ಯುತ್ ಸುರಕ್ಷತಾ ಜಾಗೃತಿ ಆಂದೋಲನ ಮೂಡಿಸಬೇಕು, ವಿದ್ಯುತ್ ಅಪಘಾತಗಳು ಮರುಕಳಿಸದಂತೆ ತಡೆಯಬೇಕು ಎಂದು ಸೂಚಿಸಿದೆ.
‘ಅನಧಿಕೃತವಾಗಿ ಕಂಬ ಹತ್ತುವುದು, ಫ್ಯೂಸ್ ಅಳವಡಿಸಲು ಮುಂದಾಗುವುದು, ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವುದು, ಮರದ ರೆಂಬೆಕೊಂಬೆ ತಾಗಿ ಶಾಕ್ ಆಗುವುದು, ಬೋರ್‌ವೆಲ್‌ಗಳಿಗೆ ಅಳವಡಿಸಿರುವ ಮೋಟಾರ್ ಗ್ರೌಂಡಿಂಗ್ ಆಗುವುದು, ಹಸಿ ಮರದ ಕಟ್ಟಿಗೆಗಳಿಂದ ವಿದ್ಯುತ್ ತಂತಿಗಳನ್ನು ತಾಕುವುದು, ಹೊಸ ಮನೆಗಳ ನಿರ್ಮಾಣ ಸಂದರ್ಭದಲ್ಲಿ ಗೋಡೆ ಕೊರೆಯುವ ಮಷಿನ್‌ನಿಂದ ಶಾಕ್ ಆಗಿರುವುದು.. ಹೀಗೆ ಹಲವು ಕಾರಣಗಳಿಗೆ ವಿದ್ಯುತ್ ಅಪಘಾತಗಳು ಸಂಭವಿಸುತ್ತಲೇ ಇವೆ. ಸಾಕಷ್ಟು ಜಾಗೃತಿ ಮೂಡಿಸಿದರೂ ಜನರು ನಿರ್ಲಕ್ಷ್ಯ ತೋರುತ್ತಾರೆ’ ಎಂಬುದು ಹೆಸ್ಕಾಂ ತಂತ್ರಜ್ಞರೊಬ್ಬರ ಮಾಹಿತಿ.
‘ಮುಳ್ಳಿನ ತಂತಿ ಬೇಲಿಯಲ್ಲಿ ಆಕಸ್ಮಿಕವಾಗಿ ಪ್ರವಹಿಸುವ ವಿದ್ಯುತ್‌ನಿಂದ, ವಿದ್ಯುತ್ ತಂತಿ ಹರಿದು ಬಿದ್ದು, ಭೂ ಸಂಪರ್ಕ ಕೊಳವೆ, ತಂತಿಗಳಲ್ಲಿ ವಿದ್ಯುತ್ ಸೋರಿಕೆಯಿಂದ, ಸರ್ವಿಸ್ ಮೇನ್ಸ್ ವೈರ್ ದೋಷದಿಂದ ಉಂಟಾಗುವ ಅಪಘಾತಗಳು ನಾಗರಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ. ವ್ಯಕ್ತಿಗೆ ಸಂಬಂಧಿಸಿದ ಅಪಘಾತಗಳಲ್ಲಿ 5 ಮಾರಣಾಂತಿಕ, 13 ಅಮಾರಣಾಂತಿಕ, ಪ್ರಾಣಿಗಳಿಗೆ ಸಂಬಂಧಿಸಿ 32 ಮಾರಣಾಂತಿಕ, ಆಸ್ತಿ ಹಾಗೂ ಬೆಳೆಹಾನಿಗೆ ಸಂಬಂಧಿಸಿ 15 ಪ್ರಕರಣಗಳಾಗಿವೆ’ ಎನ್ನುತ್ತಾರೆ ಅವರು.
ಎಚ್ಚರಿಕೆ ಅಗತ್ಯ
ಗೃಹ ವಿದ್ಯುತ್ ಬಳಕೆಗೆ ನಲ್ಲಿಗಳಿಂದ ನೀರೆತ್ತುವ ವಿದ್ಯುತ್ ಮೋಟಾರ್‌ಗಳ ಹತ್ತಿರದಲ್ಲಿ ಪಿನ್ ಮತ್ತು ಸಾಕೆಟ್‌ಗಳನ್ನು ಅಳವಡಿಸಬಾರದು. ಮೋಟಾರ್‌ನಿಂದ ಸಪ್ಲೈ ಪಾಯಿಂಟ್ ವರೆಗೂ ವೈರ್ ಮತ್ತು ಸಪ್ಲೈ ಪಿನ್ ಮಾತ್ರ ಇರಬೇಕು. ಯಾವುದೇ ಜಾಯಿಂಟ್‌ಗಳು ಇರಬಾರದು. ಮೋಟಾರ್‌ನ್ನು ಮರದ ಹಲಗೆಯ ಮೇಲೆ ಅಳವಡಿಸಬೇಕು. ಮೋಟಾರ್‌ಗಳ ಬಳಿ ನೀರು ಶೇಖರಣೆ ಆಗಬಾರದು ತೇವಾಂಶ ಸಹ ಇರಬಾರದು. ವಿದ್ಯುತ್ ಬಳಕೆದಾರರು ಇಂಥ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದು ಹೆಸ್ಕಾಂ ಅಧಿಕಾರಿಗಳ ಸಲಹೆ.
ಹೆಸ್ಕಾಂನಿಂದ ಪರಿಹಾರ
‘ಪ್ರಾಣಿಗಳಿಗೆ ಸಂಭವಿಸಿದ ಅಪಘಡಗಳಿಗೆ ₹9.53 ಲಕ್ಷ ವ್ಯಕ್ತಿಗಳಿಗೆ ಸಂಭವಿಸಿದ ಅಪಘಾತಗಳಿಗೆ ₹15 ಲಕ್ಷ ಮತ್ತು ಆಸ್ತಿ ಹಾಗೂ ಬೆಳೆ ಹಾನಿ ಅಪಘಾತಗಳಿಗೆ ಸಂಬಂಧಿಸಿ ₹1.12 ಲಕ್ಷ ಪರಿಹಾರವನ್ನು ಹೆಸ್ಕಾಂನಿಂದ ನೀಡಲಾಗಿದೆ. ವಿದ್ಯುತ್ ಸುರಕ್ಷಾ ಬಳಕೆ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಶಿರಸಿ ಹೆಸ್ಕಾಂ ಇಇ ವಿನಯ ರಾಚೋಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.