ADVERTISEMENT

‘ಶಿರಸಿ ಟು ಹುಬ್ಬಳ್ಳಿ’:ಸಂಕಷ್ಟದ ಸವಾರಿ

ಪ್ರತಿ ಅಡಿಗೊಂದರಂತೆ ಹೊಂಡ, ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆ

ಗಣಪತಿ ಹೆಗಡೆ
Published 17 ನವೆಂಬರ್ 2022, 4:02 IST
Last Updated 17 ನವೆಂಬರ್ 2022, 4:02 IST
ಶಿರಸಿ ಸಮೀಪದ ಚಿಪಗಿ ಬಳಿ ಶಿರಸಿ–ಹುಬ್ಬಳ್ಳಿ ಹೆದ್ದಾರಿ ಹದಗೆಟ್ಟಿರುವುದು.
ಶಿರಸಿ ಸಮೀಪದ ಚಿಪಗಿ ಬಳಿ ಶಿರಸಿ–ಹುಬ್ಬಳ್ಳಿ ಹೆದ್ದಾರಿ ಹದಗೆಟ್ಟಿರುವುದು.   

ಶಿರಸಿ: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಶಿರಸಿ ಮಾರ್ಗವಾಗಿ ತೆರಳುವ ವಾಹನ ಸವಾರರು ಸಂಕಷ್ಟಗಳನ್ನು ಎದುರಿಸುತ್ತಲೇ ಸಂಚರಿಸುವ ಸ್ಥಿತಿ ಉಂಟಾಗಿದೆ. ಮುಖ್ಯ ಹೆದ್ದಾರಿ ಹದಗೆಟ್ಟಿರುವುದು ಇದಕ್ಕೆ ಕಾರಣ.

ನಗರದಿಂದ ತಡಸವರೆಗಿನ ರಸ್ತೆ ಸಂಪೂರ್ಣ ಹೆದಗೆಟ್ಟಿದ್ದು ಪ್ರತಿ ಅಡಿಗೆ ಒಂದರಂತೆ ಹೊಂಡಗಳು ವಾಹನ ಸವಾರರಿಗೆ ಎದುರಾಗುತ್ತಿವೆ. ಇವುಗಳನ್ನು ತಪ್ಪಿಸಿ ಸಾಗುವ ಭರದಲ್ಲಿ ಅಪಘಾತ ಮಾಡಿಕೊಳ್ಳುತ್ತಿರುವ ಪ್ರಕರಣ ಪ್ರತಿನಿತ್ಯ ಸಾಕಷ್ಟು ನಡೆಯುತ್ತಿದೆ.

ಚಪಗಿ, ಇಸಳೂರು, ಎಕ್ಕಂಬಿ, ಕಾಳೆಬೈಲ್, ಬಿಸಲಕೊಪ್ಪ, ಮಳಗಿ ಸೇರಿದಂತೆ ಹಲವು ಕಡೆಗಳಲ್ಲಿ ಅಪಾಯಕಾರಿ ತಿರುವುಗಳಲ್ಲಿಯೇ ದೊಡ್ಡಗಾತ್ರದ ಹೊಂಡಗಳು ಬಿದ್ದಿವೆ. ಮಳೆಗಾಲ ಮುಗಿದ ತಿಂಗಳಾದರೂ ಇನ್ನೂ ಅವುಗಳನ್ನು ಮುಚ್ಚುವ ಕೆಲಸ ನಡೆದಿಲ್ಲ.

ADVERTISEMENT

ರಾಜ್ಯ ಹೆದ್ದಾರಿಯಾಗಿದ್ದ ಶಿರಸಿ–ಹುಬ್ಬಳ್ಳಿ ರಸ್ತೆಯ ಅಲ್ಪಭಾಗ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಸೇರಿಕೊಂಡಿದೆ. ಶಿರಸಿ ನಗರದಿಂದ ಬಿಸಲಕೊಪ್ಪ ಕ್ರಾಸ್‍ವರೆಗಿನ ಭಾಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡ ಬೇಲೆಕೇರಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಗೆ (766–ಇ) ಸೇರಿದೆ.

ರಸ್ತೆ ಮೇಲ್ದರ್ಜೆಗೇರಿರುವ ಪರಿಣಾಮ ಲೋಕೋಪಯೋಗಿ ಇಲಾಖೆ ರಸ್ತೆಯ ನಿರ್ವಹಣೆ ಮಾಡಲು ಮುಂದಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೂ ರಸ್ತೆ ತಾತ್ಕಾಲಿಕ ದುರಸ್ಥಿ ಕಾರ್ಯವೂ ನಡೆಯುತ್ತಿಲ್ಲ. ಇದರಿಂದ ಜನರು ಪರಿತಪಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

‘ನೂರು ಕಿ.ಮೀ. ಅಂತರದಲ್ಲಿರುವ ಹುಬ್ಬಳ್ಳಿಗೆ ಶಿರಸಿಯಿಂದ ಈ ಮೊದಲು ಎರಡೂವರೆ ಗಮಟೆಯಲ್ಲಿ ಪ್ರಯಾಣಿಸಬಹುದಿತ್ತು. ಈಗ ಕನಿಷ್ಠ ಮೂರು ತಾಸಿನ ಅವಧಿ ತಗಲುತ್ತಿದೆ. ಸಮಯ, ಇಂಧನ ಅನಗತ್ಯ ವ್ಯರ್ಥವಾಗಲು ಹದಗೆಟ್ಟ ರಸ್ತೆಯೇ ಕಾರಣ’ ಎನ್ನುತ್ತಾರೆ ವೈದ್ಯ ಡಾ.ರವಿಕಿರಣ ಪಟವರ್ಧನ್.

‘ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡಗಳು ಬಿದ್ದಿದ್ದರಿಂದ ಕೆಲವು ಸವಾರರು ರಸ್ತೆ ಬಿಟ್ಟು ಪಕ್ಕದಲ್ಲಿ ವಾಹನ ಚಲಾಯಿಸಲೂ ಪ್ರಯತ್ನಿಸುತ್ತಿದ್ದಾರೆ. ಆದರೆ ಹಲವು ಕಡೆ ರಸ್ತೆಯ ಪಕ್ಕದ ಜಾಗ ಮಳೆಯಿಂದ ಕೊರಕಲು ಬಿದ್ದು ರಸ್ತೆಗಿಂತ ಅರ್ಧ ಅಡಿ ತಗ್ಗಿದೆ. ಇಂತಹ ಸ್ಥಳಗಳಲ್ಲಿ ನಿಯಂತ್ರಣ ಸಿಗದೆ ಅಪಘಾತ ಉಂಟಾಗುತ್ತಿದೆ’ ಎನ್ನುತ್ತಾರೆ ಅವರು.

ಗುತ್ತಿಗೆದಾರರಿಗೆ ಸೂಚನೆ:

‘ಶಿರಸಿಯಿಂದ ಹಾವೇರಿ ಜಿಲ್ಲೆ ನಾಲ್ಕರ ಕ್ರಾಸ್‍ವರೆಗೆ ಹೆದ್ದಾರಿ ಕಾಮಗಾರಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಇವೆರಡೂ ಕಾಮಗಾರಿಯನ್ನು ಒಂದೇ ಗುತ್ತಿಗೆ ಸಂಸ್ಥೆ ಪಡೆದುಕೊಂಡಿದೆ. ಈ ಸಂಸ್ಥೆಗೆ ಶಿರಸಿಯಿಂದ ಬಿಸಲಕೊಪ್ಪ ಕ್ರಾಸ್‍ವರೆಗೆ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ಥಿಪಡಿಸಲು ಸೂಚಿಸಲಾಗಿದೆ. ಶೀಘ್ರವೇ ಹೊಂಡಗಳನ್ನು ಭರ್ತಿ ಮಾಡುತ್ತೇವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡ ವಿಭಾಗದ ಎಂಜಿನಿಯರ್ ಕಿರಣ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

------------------

ಹೆದ್ದಾರಿ ಕಾಮಗಾರಿ ಆರಂಭಗೊಳ್ಳುವವರೆಗೆ ಶಿರಸಿಯಿಂದ ಬಿಸಲಕೊಪ್ಪ ಕ್ರಾಸ್‍ವರೆಗೆ ರಸ್ತೆ ತಾತ್ಕಾಲಿಕ ದುರಸ್ಥಿಕೈಗೊಳ್ಳಲಾಗುವುದು.

ಕಿರಣ್

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.