ಶಿರಸಿ: ಕದಂಬೋತ್ಸವಕ್ಕೆ ಅದ್ಧೂರಿ ಪ್ರಚಾರ ಕಾರ್ಯ ಕೈಗೊಳ್ಳುವ ಸಲುವಾಗಿ ಉತ್ತಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸಂಚರಿಸಲಿರುವ ಕದಂಬ ಜ್ಯೋತಿ ರಥಕ್ಕೆ ಶಾಸಕ ಶಿವರಾಮ ಹೆಬ್ಬಾರ ಗುಡ್ನಾಪುರದ ರವಿವರ್ಮ ಅರಮನೆ ಮೈದಾನದಲ್ಲಿ ಗುರುವಾರ ಚಾಲನೆ ನೀಡಿದರು.
ಗುಡ್ನಾಪುರದ ಬಂಗಾರೇಶ್ವರ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಕದಂಬ ಜ್ಯೋತಿಯನ್ನು ಉದ್ಘಾಟಿಸಲಾಯಿತು.
ನಂತರ ಪೂರ್ಣಕುಂಭ, ಡೊಳ್ಳುಕುಣಿತ, ಗುಡ್ನಾಪುರ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಭಾಗಿಯಾಗಿದ್ದ ಮೆರವಣಿಗೆ ಮೂಲಕ ಜ್ಯೋತಿಯನ್ನು ಸಭಾ ಕಾರ್ಯಕ್ರಮಕ್ಕೆ ತರಲಾಯಿತು. ಇದೇ ದೀಪದ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ಎರಡು ಪ್ರತ್ಯೇಕ ವಾಹನಗಳ ಮೂಲಕ ಉತ್ತರಕನ್ನಡದ ವಿವಿಧ ತಾಲ್ಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಿಗೆ ಸಂಚರಿಸಿದವು. ಇದೇ ಜ್ಯೋತಿಯಲ್ಲಿ ಏ.11ರಂದು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಕದಂಬೋತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ಕದಂಬೋತ್ಸವ ಎಂಬುದು ಕನ್ನಡಿಗರ ಹಬ್ಬವಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ವಿಭಿನ್ನ ರೀತಿಯಲ್ಲಿ ಆಚರಣೆ ಆಗಬೇಕೆಂದು ಕೇವಲ ಸರ್ಕಾರಿ ಆಚರಣೆಯಾಗದೇ ಸಾರ್ವಜನಿಕರ ಉತ್ಸವ ಆಗಬೇಕೆಂಬುದು ನನ್ನ ಆಸೆ. ಕನ್ನಡಕ್ಕೆ ತನ್ನದೇ ಆದ ಶ್ರೀಮಂತಿಕೆ ಇದೆ. ಆದಿಕವಿ ಪಂಪ ಹಾಡಿ ಹೋಗಳಿದ ಬನವಾಸಿಯಲ್ಲಿ ಕದಂಬೋತ್ಸವ ಆಚರಿಸಲಾಗುತ್ತಿದೆ. ಬನವಾಸಿಯ ಪ್ರಾಚೀನ ವಿಭಿನ್ನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ಕದಂಬ ಜ್ಯೋತಿ ಸಂಚಾರ ಮಾಡಿ ಎಲ್ಲರೂ ಆಮಂತ್ರಿಸಲಿದೆ ಎಂದರು.
ಗುಡ್ನಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಬಿ ಆಯಿಷಾ, ಸದಸ್ಯರಾದ ಜ್ಯೋತಿ ನಾಯ್ಕ, ರಘು ನಾಯ್ಕ, ಅಶೋಕ ನಾಯ್ಕ, ರಿಂದಾ ನಾಯ್ಕ, ಶಿಲ್ಪಾ ಚೆನ್ನಯ್ಯ, ಗುತ್ಯಮ್ಮ ವಾಲ್ಮೀಖಿ, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್.ನಾಯ್ಜ, ಭೂ ನ್ಯಾಯ ಮಂಡಳಿ ಸದಸ್ಯ ರವಿ ನಾಯ್ಕಣ ಜಿಪಂ ಮಾಜಿ ಸದಸ್ಯ ಬಸವರಾಜ ದೊಡ್ಮನಿ, ರೂಪಾ ನಾಯ್ಕ, ತಾಪಂ ಮಾಜಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ತಹಶೀಲ್ದಾರ ಶೈಲೇಶ ಪರಮಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮತ್ತಿತರರು ಇದ್ದರು. ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಸ್ವಾಗತಿಸಿದರು. ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾನ್ಯ ಹೆಗಡೆ ಪ್ರಾರ್ಥಿಸಿದರು. ಉದಯಕುಮಾರ ಕಾನಳ್ಳಿ ನಿರೂಪಿಸಿದರು.
ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿಯೇ ಕದಂಬೋತ್ಸವ ಆಚರಿಸಬೇಕು. ಪ್ರಾಚ್ಯವಸ್ತು ಇಲಾಖೆಯ ಗುಡ್ನಾಪುರದ ರಾಣಿ ವಿಲಾಸವನ್ನು ನಿರ್ಲಕ್ಷ್ಯ ವಹಿಸಿದೆ. ಗುಡ್ನಾಪುರ ಕೆರೆ 150 ಎಕರೆ ವಿಸ್ತೀರ್ಣ ಹೊಂದಿದ್ದು ಕೆರೆ ಹೂಳು ತುಂಬಿದೆ. ಹೂಳೆತ್ತುವ ಕೆಲಸ ಆಗಬೇಕು.ಸಿ.ಎಫ್.ನಾಯ್ಕ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.