
ಕುಮಟಾ: ‘ಶಿರಸಿ ಜಾತ್ರೆ ಸಂದರ್ಭದಲ್ಲಿ ಕುಮಟಾ-ಶಿರಸಿ ನಡುವೆ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಸೂಕ್ತ ಕ್ರಮವಹಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಆಡಳಿತ ಸೌಧದ ಸಭಾಂಗಣದಲ್ಲಿ ಭಾನುವಾರ ಹೆದ್ದಾರಿ ಕಾಮಗಾರಿ ಪರಿಶೀಲನೆ ಸಭೆ ನಡೆಸಿದ ಅವರು, ‘ಶಿರಸಿ–ಕುಮಟಾ ನಡುವೆ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಬೇಕು. ಬಸ್ ಸೇರಿದಂತೆ ಇತರ ಯಾವುದೇ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಸುರಕ್ಷತಾ ಕ್ರಮಗಳನ್ನು ವಹಿಸಿ’ ಎಂದರು.
‘ಕುಮಟಾ ತಾಲ್ಲೂಕು ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಬಾಕಿ ಇಲ್ಲ. ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಿರುವ ಜಾಗಗಳನ್ನು ಹಸ್ತಾಂತರಿಸಲಾಗಿದೆ’ ಎಂದು ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಹೇಳಿದರು.
ಶಾಸಕ ದಿನಕರ ಶೆಟ್ಟಿ, ‘ಕತಗಾಲ ಬಿಎಸ್ಎನ್ಎಲ್ ಕಚೇರಿ ಹತ್ತಿರ ಹೆದ್ದಾರಿ ಬದಿ ತಡೆಗೋಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಗೋಡೆ ಬದಲು ಅಲ್ಲಿ ಮೇಲ್ಸೇತುವೆ ಹೆಚ್ಚು ಸಮರ್ಪಕ. ರಾಷ್ಟ್ರೀಯ ಹೆದ್ದಾರಿ 66ರಂತೆ ಇಲ್ಲಿಯೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ’ ಎಂದರು.
‘ಹೊನ್ನಾವರದಲ್ಲಿ ಶರಾವತಿ ನದಿಗೆ ಹಳೆ ಸೇತುವೆಯ ಇದ್ದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು. ಶಿರಸಿ ಸಮೀಪದ ಚಿಪಗಿ ಬಳಿ ಹಾಳಾದ ರಸ್ತೆ ದುರಸ್ತಿ ಮಾಡದಿದ್ದರೆ ಜಾತ್ರೆ ಸಂದರ್ಭದಲ್ಲಿ ಜನರ ಓಡಾಟಕ್ಕೆ ತೊಂದರೆ ಆಗುತ್ತದೆ. ಹಾವೇರಿ–ಶಿರಸಿ ನಡುವಿನ ರಸ್ತೆಯನ್ನು ಕಡಿಮೆ ಅವಧಿಯಲ್ಲಿ ಸಂಚಾರ ಯೋಗ್ಯಗೊಳಿಸುವಂತೆ’ ಸಂಸದರು ಆರ್‌ಎನ್ಎಸ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಎಂ ಡಿ. ನಿತೀಶ್ ಶೆಟ್ಟಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ, ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಅಧಿಕಾರಿ ಮಲ್ಲಿಕಾರ್ಜುನ್, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.