ADVERTISEMENT

ಶಿರಸಿ ತಾಲ್ಲೂಕಿನಲ್ಲಿ ಉತ್ತಮ ಮಳೆ: ಕೆರೆಗಳ ಏರಿ ಒಡೆಯುವ ಆತಂಕ

ಉತ್ತಮ ಮಳೆಯಿಂದ ಕೆರೆಗಳು ಭರ್ತಿ: ನಿರ್ವಹಣೆಗೆ ನಿರ್ಲಕ್ಷ್ಯದ ದೂರು

ರಾಜೇಂದ್ರ ಹೆಗಡೆ
Published 14 ಜುಲೈ 2025, 7:09 IST
Last Updated 14 ಜುಲೈ 2025, 7:09 IST
ಶಿರಸಿ ತಾಲ್ಲೂಕಿನ ಗುಡ್ನಾಪುರ ಕೆರೆ ತುಂಬಿ ಪಕ್ಕದ ಕಾಲುವೆ ಮೂಲಕ ನೀರು ಹೊರ ಹರಿಯುತ್ತಿರುವುದು 
ಶಿರಸಿ ತಾಲ್ಲೂಕಿನ ಗುಡ್ನಾಪುರ ಕೆರೆ ತುಂಬಿ ಪಕ್ಕದ ಕಾಲುವೆ ಮೂಲಕ ನೀರು ಹೊರ ಹರಿಯುತ್ತಿರುವುದು    

ಶಿರಸಿ: ತಾಲ್ಲೂಕಿನಲ್ಲಿ ಉತ್ತಮ ಮಳೆಯ ಕಾರಣ ಕೆರೆಗಳ ಒಡಲು ಭರ್ತಿಯಾಗಿದೆ. ಆದರೆ ಬಹುತೇಕ ಕೆರೆಗಳ ಏರಿ ಹಾಗೂ ಕೋಡಿ ನಿರ್ವಹಣೆಯಿಲ್ಲದ ಕಾರಣ ನೀರು ಪೋಲಾಗುವ ಜತೆ ಕೆರೆ ಏರಿ ಒಡೆಯುವ ಆತಂಕ ಸೃಷ್ಟಿಯಾಗಿದೆ. 

ಬನವಾಸಿ ಹೋಬಳಿಯೊಂದರಲ್ಲೇ 150ಕ್ಕೂ ಹೆಚ್ಚು ಕೆರೆಗಳಿದ್ದು, ತಾಲ್ಲೂಕು ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯಡಿ 15ರಿಂದ 20 ಬೃಹತ್ ಕೆರೆಗಳಿವೆ. ಉಳಿದಂತೆ ಗ್ರಾಮ ಪಂಚಾಯಿತಿ ಅಧೀನದಲ್ಲಿ 200ಕ್ಕೂ ಹೆಚ್ಚು ಕೆರೆ ಜನ ಬಳಕೆಯಲ್ಲಿದೆ. ಕೆಲವು ಕಡೆ ಮನೆ ಬಳಕೆ, ಕೃಷಿಗೆ ಈ ಕೆರೆಗಳ ನೀರು ಬಳಕೆಯಾಗುತ್ತಿದ್ದರೆ, ಇನ್ನೂ ಕೆಲವೆಡೆ ಹೂಳಿನಿಂದ ಕೂಡಿವೆ. ಬಹುತೇಕ ಕೆರೆಗಳ ನಿರ್ವಹಣೆ ಶೂನ್ಯವಾಗಿದೆ. ಹೀಗಾಗಿ ಹೂಳು ತುಂಬಿ ಕೆರೆ ತೂಬು (ಕೋಡಿ) ಕಟ್ಟಿಕೊಂಡಿವೆ. ಇದರಿಂದ ಧಾರಣಾ ಸಾಮರ್ಥ್ಯಕ್ಕಿಂತ  ಹೆಚ್ಚಿನ ನೀರು ಸಂಗ್ರಹವಾಗಿ ಕೆರೆಗಳು ಅಪಾಯದ ಸ್ಥಿತಿಗೆ ತಲುಪುವಂತಾಗಿದೆ. 

ಇಡ್ತಳ್ಳಿ, ಬಿಸಲಕೊಪ್ಪ, ಎಕ್ಕಂಬಿ, ಗುಡ್ನಾಪುರ, ಉಂಚಳ್ಳಿ, ಬೆಂಗಳೆ, ಕಲಕರಡಿ, ಸಾಲ್ಕಣಿ ಸೇರಿದಂತೆ ಹಲವೆಡೆ ಬೃಹತ್ ಕೆರೆಗಳಿದ್ದು, ಜನಬಳಕೆಯಲ್ಲಿವೆ. ಇವು ಕೂಡ ನಿರ್ವಹಣೆ ಕೊರತೆಯಿಂದ ಬಳಲುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈಚೆಗೆ ಬಿಸಲಕೊಪ್ಪ ತಾವರೆಕೆರೆ ತೂಬು ಕಟ್ಟಿರುವ ಪರಿಣಾಮ ತುಂಬಿ ಹರಿದು ಕೃಷಿ ಪ್ರದೇಶಗಳು ಸಂಪೂರ್ಣ ಜಲಾವೃತವಾದ ಘಟನೆ ಕೂಡ ಜರುತ್ತಿತ್ತು. ಇದರಿಂದ ಕೆರೆ ಏರಿ ಕೂಡ ಹಾನಿಯಾಗಿತ್ತು.

ADVERTISEMENT

‘ಗುಡ್ನಾಪುರ ಕೆರೆ ತೂಬಿನಿಂದ ಹೆಚ್ಚುವರಿ ನೀರು ಹರಿದು ಹೋಗಲು ಸಮಸ್ಯೆಯಿದೆ. ಹೀಗಾಗಿ ಪಕ್ಕದಲ್ಲಿನ ಕಾಲುವೆ ಮೂಲಕ ನೀರು ಹೊರ ಹೋಗುತ್ತಿದೆ. ನೂರಾರು ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಅನುದಾನ ಸಾಲದು. ಹೀಗಾಗಿ ನೇರವಾಗಿ ರಾಜ್ಯ ಸರ್ಕಾರವೇ ಇದರ ನಿರ್ವಹಣೆಗೆ ಮುಂದಾಗಬೇಕು’ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥ ರಾಘವೇಂದ್ರ ನಾಯ್ಕ. 

‘ಗುಡ್ನಾಪುರ ಕೆರೆಯಲ್ಲಿ ಮೀನು ಸಾಕಣೆ ನಡೆದಿದ್ದು, ಕಾಲುವೆ ಮೂಲಕ ಮೀನುಗಳು ಹೊರ ಹೋಗುತ್ತಿವೆ. ಹೀಗಾಗಿ ಮೀನುಗಳ ರಕ್ಷಣೆ ದೃಷ್ಟಿಯಿಂದ ಕಾಲುವೆಗೆ ಅಡ್ಡಲಾಗಿ ಬಲೆ ಕಟ್ಟಿಕೊಳ್ಳಲಾಗಿದೆ’ ಎನ್ನುತ್ತಾರೆ ಅವರು.

ಬೇಸಿಗೆ ಕಾಲದಲ್ಲಿ ಕೆರೆಗಳ ನಿರ್ವಹಣೆ ಮಾಡಲಾದರೂ ಮಳೆಯ ಆರಂಭದೊಂದಿಗೆ ಕೆಲವೆಡೆ ಸಮಸ್ಯೆ ಆಗುತ್ತಿದೆ. ಅದನ್ನು ದುರಸ್ತಿ ಮಾಡಲಾಗುವುದು
ವಿಕಾಸ ನಾಯ್ಕ ಸಣ್ಣ ನೀರಾವರಿ ಇಲಾಖೆ ಎಇಇ

ಬಿಡುಗಡೆಯಾಗದ ನಿರ್ವಹಣಾ ಅನುದಾನ

‘ತಾಲ್ಲೂಕಿನಲ್ಲಿ 40 ಎಕರೆ ವಿಸ್ತೀರ್ಣಕ್ಕಿಂತ ಹೆಚ್ಚಿರುವ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಆದರೆ ಒಂದು ವರ್ಷದಿಂದ ಈ ಕೆರೆಗಳ ನಿರ್ವಹಣೆಗೆ ಅನುದಾನವೇ ಬಿಡುಗಡೆಯಾಗಿಲ್ಲ. ಅಧಿಕಾರಿಗಳ ಮಾತಿಗೆ ಕಟ್ಟುಬಿದ್ದು ಅಲ್ಲಿ ಇಲ್ಲಿ ಚಿಕ್ಕಪುಟ್ಟ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಕಾಮಗಾರಿಯ ಹಣ ಪಾವತಿಯಾಗಿಲ್ಲ. ಇಂಥ ಹಲವು ಸಮಸ್ಯೆಗಳ ನಡುವೆ ಕೆರೆಗಳ ರಕ್ಷಣೆ ಸವಾಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.