ADVERTISEMENT

ಮಾರಿಕಾಂಬಾ ದ್ವೈವಾರ್ಷಿಕ ಜಾತ್ರೆ ಸಂಭ್ರಮಕ್ಕೆ ಮಧುವಣಗಿತ್ತಿಯಾದ ಶಿರಸಿ

ಮಾರಿಕಾಂಬಾ ದ್ವೈವಾರ್ಷಿಕ ಜಾತ್ರೆಗೆ ಸಿದ್ಧತೆ ಅಂತಿಮ ಘಟ್ಟಕ್ಕೆ

ರಾಜೇಂದ್ರ ಹೆಗಡೆ
Published 23 ಫೆಬ್ರುವರಿ 2026, 5:16 IST
Last Updated 23 ಫೆಬ್ರುವರಿ 2026, 5:16 IST
ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆ ಬಿಡ್ಕಿಬೈಲಿನ ಜಾತ್ರಾ ಚಪ್ಪರ ಸಿದ್ಧವಾಗುತ್ತಿರುವುದು
ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆ ಬಿಡ್ಕಿಬೈಲಿನ ಜಾತ್ರಾ ಚಪ್ಪರ ಸಿದ್ಧವಾಗುತ್ತಿರುವುದು   

ಶಿರಸಿ: ದ್ವೈವಾರ್ಷಿಕ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಮಲೆನಾಡಿನ ಹೆಬ್ಬಾಗಿಲು ಶಿರಸಿ ಸಜ್ಜಾಗುತ್ತಿದ್ದು, ಇಡೀ ನಗರದಾದ್ಯಂತ ಜಾತ್ರೆಯ ಸಂಭ್ರಮ ಗರಿಗೆದರುತ್ತಿದೆ.

ದೇವಿ ಆಸೀನಳಾಗುವ ಬಿಡ್ಕಿಬೈಲಿನ ಜಾತ್ರಾ ಗದ್ದುಗೆ ಬಳಿ ಬೃಹದಾಕಾರದ ಮಂಟಪ ಸಿದ್ದವಾಗುತ್ತಿದ್ದು, ಮದುವಣಗಿತ್ತಿಯಂತೆ ಶೋಭಿಸುತ್ತಿದೆ. ದೀಪಾಲಂಕಾರದಿಂದ ಕಂಗೊಳಿಸಲಿರುವ ಜಾತ್ರಾ ಮಂಟಪ ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ಜಾತ್ರೆಯನ್ನು ಯಶಸ್ವಿಗೊಳಿಸಲು ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಅಂಗಡಿ ಮುಂಗಟ್ಟುಗಳನ್ನು ಜೋಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಬೇರೆ ಬೇರೆ ಭಾಗಗಳಿಂದ ಬಂದು ಹರಾಜಿನಲ್ಲಿ ಪಾಲ್ಗೊಂಡು ಅಂಗಡಿ ಪಡೆದ ವ್ಯಾಪಾರಿಗಳು ಜಾತ್ರೆಗೆ ಅಣಿಗೊಳ್ಳುತ್ತಿದ್ದಾರೆ. ಜಾತ್ರೆಯ ಮೋಜು–ಮಸ್ತಿಗೆಂದು ಬಂದಿರುವ ಮನರಂಜನಾ ಸಾಮಗ್ರಿಗಳ ಜೋಡಣೆ ಕಾರ್ಯ ಬಿರುಸಿನಲ್ಲಿ ನಡೆಯುತ್ತಿದೆ.

‘ಫೆ.25ರಂದು ಬೆಳಿಗ್ಗೆ ದೇವಿಯ ಭವ್ಯ ರಥೋತ್ಸವ ಜರುಗಲಿದ್ದು, ಇದಕ್ಕಾಗಿ ದೇವಸ್ಥಾನದ ಎದುರು ರಥ ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಈ ಬಾರಿಯ ರಥೋತ್ಸವಕ್ಕಾಗಿ ಬಿಕ್ನಳ್ಳಿ ಗ್ರಾಮದಿಂದ ಕಡಿದು ತರಲಾದ ತಾರಿಮರವನ್ನು ಬಳಸಿ ರಥದ ಗಾಲಿ ಹಾಗೂ ತುಂಡುಗಳನ್ನು ಸಾಂಪ್ರದಾಯಿಕವಾಗಿ ಜೋಡಿಸಲಾಗಿದೆ. ಬಂಡಲ ಭಾಗದಿಂದ ತರಲಾದ ವಾಟೆ ಕೋಲು ಮತ್ತು ಅಡಿಕೆ ಮರಗಳ ದಬ್ಬೆಗಳನ್ನು ಬಳಸಿ ರಥದ ಮೇಲಿನ ಶಿಖರವನ್ನು ಆಕರ್ಷಕವಾಗಿ ರಚಿಸಲಾಗುತ್ತಿದೆ. ಈ ಶಿಖರಕ್ಕೆ ವಿವಿಧ ಬಣ್ಣದ ಪತಾಕೆಗಳನ್ನು ಕಟ್ಟಿ ಅಲಂಕರಿಸುವ ಪ್ರಕ್ರಿಯೆಯೂ ನಡೆದಿದ್ದು, ರಥವು ಭವ್ಯ ರೂಪ ಪಡೆಯುತ್ತಿದೆ. ರಥದ ಭದ್ರತೆಯನ್ನು ಪರಿಶೀಲಿಸಲು ನುರಿತ ಬಡಗಿಗಳು ಹಾಗೂ ದೇವಸ್ಥಾನದ ತಾಂತ್ರಿಕ ಸಿಬ್ಬಂದಿ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂಬುದು ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ ಮಾತು. 

ADVERTISEMENT

‘ಬಿಡ್ಕಿಬೈಲಿನಲ್ಲಿ ದೇವಿಯ ಜಾತ್ರಾ ಗದ್ದುಗೆ ಹಾಗೂ ಮಂಟಪ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಭಕ್ತರ ಸಂಚಾರ ಸುಗಮಗೊಳಿಸಲು ಹಾಗೂ ಸ್ಥಳಾವಕಾಶದ ಇಕ್ಕಟ್ಟನ್ನು ತಪ್ಪಿಸಲು ಈ ಬಾರಿ ಬ್ಯಾರಿಕೇಡ್ ಅಳವಡಿಕೆಯಲ್ಲಿ ವಿಶೇಷ ಬದಲಾವಣೆಗಳನ್ನು ಮಾಡಲಾಗಿದೆ. ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ದರ್ಶನ ಪಡೆಯಲು ಪ್ರತ್ಯೇಕ ವ್ಯವಸ್ಥೆ ಹಾಗೂ ತುರ್ತು ನಿರ್ಗಮನ ದ್ವಾರಗಳನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ದೇವಿಯ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ವಯಂಸೇವಕರ ಮೂಲಕ ನಿರ್ವಹಿಸಲು ಯೋಜಿಸಲಾಗಿದೆ’ ಎನ್ನುತ್ತಾರೆ ಅವರು. 

‘ಜಾತ್ರಾ ಮೈದಾನದ ಆಸುಪಾಸಿನಲ್ಲಿ ಅಗ್ನಿಶಾಮಕ ದಳ, ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ತುರ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಭದ್ರತೆಯ ದೃಷ್ಟಿಯಿಂದ ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಲಕ್ಷಾಂತರ ಭಕ್ತರ ಆಗಮನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಳ್ಳುತ್ತಿದೆ’ ಎಂದು ಡಿಎಸ್‍ಪಿ ಗೀತಾ ಪಾಟೀಲ ಮಾಹಿತಿ ನೀಡಿದರು.

---

ನಗರದ ಸ್ವಚ್ಛತೆಯನ್ನು ಕಾಪಾಡಲು ನಗರಸಭೆ ವತಿಯಿಂದ ದಿನದ 24 ಗಂಟೆಯೂ ಕಾರ್ಯಾಚರಿಸುವ ವಿಶೇಷ ತಂಡಗಳನ್ನು ರಚಿಸಲಾಗಿದ್ದು ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

-ಪ್ರಕಾಶ ಚನ್ನಪ್ಪನವರ ಪೌರಾಯುಕ್ತ

---

ಹೊಸ ಬಸ್ ನಿಲ್ದಾಣದಿಂದ ಕಾರ್ಯ

‘ಜಾತ್ರೆಯ ಹಿನ್ನೆಲೆಯಲ್ಲಿ ಸೋಮವಾರ (ಫೆ.23) ನಸುಕಿನ ಜಾವದಿಂದ ಕೇಂದ್ರೀಯ ಬಸ್ ನಿಲ್ದಾಣದ ಸಂಚಾರ ಸ್ಥಗಿತಗೊಳ್ಳಲಿದ್ದು ಎಲ್ಲಾ ಬಸ್‌ಗಳು ಗಣೇಶನಗರದ ಬಳಿಯ ಹೊಸ ಬಸ್ ನಿಲ್ದಾಣದಿಂದಲೇ ಸಂಚರಿಸಲಿವೆ. ಪ್ರಯಾಣಿಕರ ಹಿತದೃಷ್ಟಿಯಿಂದ ಹೊಸ ಬಸ್ ನಿಲ್ದಾಣದ ಆವರಣಕ್ಕೆ ಬಣ್ಣ ಬಳಿದು ಸಿಸಿಟಿವಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ನಗರದ ಒಳಭಾಗಕ್ಕೆ ಬರುವ ಪ್ರಯಾಣಿಕರಿಗಾಗಿ ಐದು ರಸ್ತೆ ವೃತ್ತ ಹಾಗೂ ಹುಬ್ಬಳ್ಳಿ ರಸ್ತೆಯಲ್ಲಿ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸಲಾಗುತ್ತಿದೆ’ ಎಂಬುದು ಸಾರಿಗೆ ಅಧಿಕಾರಿಗಳ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.