ಶಿರಸಿ: ಮಾರಿಕಾಂಬಾ ದೇವಿ ಜಾತ್ರೆಯ ಪೂರ್ವಭಾವಿಯಾಗಿ ನಡೆಯುವ ಅಂಕೆ ಹಾಕುವ ಕಾರ್ಯಕ್ರಮ ಬುಧವಾರ ಸಕಲ ಧಾರ್ಮಿಕ ವಿಧಾನಗಳೊಂದಿಗೆ ನಡೆಯಿತು.
ಮಂಗಳವಾರ ರಾತ್ರಿ ಕೊನೆಯ ಹೊರಬೀಡಿನ ಕಾರ್ಯಕ್ರಮ ಮುಕ್ತಾಯಗೊಂಡಿತು. ಇದರ ಮರುದಿನ ನಡೆಯುವ ಮಾರಿ ಕೋಣನಿಗೆ ಕಂಕಣ ಕಟ್ಟುವ ಕಾರ್ಯಕ್ಕೆ ಅಂಕೆ ಹಾಕುವುದು ಎನ್ನುತ್ತಾರೆ. ದೇವಾಲಯದ ಆವರಣದಲ್ಲಿರುವ ಮಾರಿ ಕೋಣವು ಮೆರವಣಿಗೆಯಲ್ಲಿ ಮರ್ಕಿ ದುರ್ಗಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ, ಅಲ್ಲಿಂದ ಬಿಡಕಿಬೈಲಿನ ಜಾತ್ರಾ ಗದ್ದುಗೆ ಸ್ಥಳಕ್ಕೆ ಬಂತು. ಅಲ್ಲಿ ಆಸಾದಿಯರು ಮತ್ತು ಮೇತ್ರಿಯರು ರಂಗ ವಿಧಾನ ನೆರವೇರಿಸಿದರು. ಇನ್ನು ಎರಡು ದಿನ ಮಾರಿ ಕೋಣ ನಗರ ಸಂಚಾರ ನಡೆಸುತ್ತದೆ. ಮಹಿಳೆಯರು ಅರಿಶಿನ, ಕುಂಕುಮ ಹಚ್ಚಿ, ಎಣ್ಣೆ ಹಾಕಿ ಈ ಕೋಣವನ್ನು ಪೂಜಿಸುತ್ತಾರೆ.
ಜಾತ್ರಾ ಗದ್ದುಗೆಗೆ ನಾಡಿಗ ಬಾಬುದಾರರು ಮಂಗಳಾರತಿ ಬೆಳಗಿದರು. ಈ ಮಂಗಳಾರತಿಯ ದೀಪದಿಂದ ಹಣತೆ ಬೆಳಗಲಾಯಿತು. ಈ ದೀಪಕ್ಕೆ ಮೇಟಿ ಎನ್ನುತ್ತಾರೆ. ಜಾತ್ರೆ ಮುಗಿಯುವ ತನಕ ಈ ದೀಪ ಆರದಂತೆ ಮೇಟಿಗರು ಕಾಯುತ್ತಾರೆ. ಈ ಎಲ್ಲ ಧಾರ್ಮಿಕ ವಿಧಿ-ವಿಧಾನಗಳು ಪೂರ್ಣಗೊಂಡ ನಂತರ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಜಾತ್ರೆಗೆ ಅಣಿಯಾಗುವ ದೇವಿ ಕಲ್ಯಾಣೋತ್ಸವದ ದಿನದಂದು ದೇವಾಲಯದ ಸಭಾ ಮಂಟಪದಲ್ಲಿ ವಿರಾಜಮಾನಳಾಗುತ್ತಾಳೆ.
ಬಿಡಕಿಬೈಲಿನ ಜಾತ್ರಾ ಗದ್ದುಗೆಯ ಸುತ್ತ ಚಪ್ಪರ ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಬಿಡಕಿಬೈಲಿನ ತರಕಾರಿ ಮಾರುಕಟ್ಟೆ ವಿಕಾಸಾಶ್ರಮ ಮೈದಾನಕ್ಕೆ ಸ್ಥಳಾಂತರಗೊಂಡಿದೆ. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಸದಸ್ಯರು, ಬಾಬುದಾರ ಪ್ರಮುಖರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.