ಶಿರಸಿ: ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಶಿರಸಿಯ ಸುತ್ತಲಿನ 48 ಸೀಮೆಗಳ ರೈತರು, ಭಕ್ತರ ಮನೆಗಳಿಗೆ ದೇವಿ ಕಲ್ಯಾಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆ ತಲುಪಿಸುವ ಕಾರ್ಯ ನಡೆದಿದೆ.
ಶಿರಸಿಗರ ಮನೆ ಮಗಳೆನಿಸಿರುವ ಮಾರಿಕಾಂಬಾ ದೇವಿಯ ಮದುವೆಗೆ ಇಡೀ ಊರು ಸಂಭ್ರಮದಲ್ಲಿ ಮುಳುಗಿದೆ. ಕಲ್ಯಾಣೋತ್ಸವದ ಮಾರನೆ ದಿನ ಮಾ.19ರಿಂದ ಮಾ.27ರ ವರೆಗೆ ಮಾರಿಕಾಂಬಾ ಜಾತ್ರಾ ಮಹೋತ್ಸವ ಜರುಗಲಿದೆ. ಮಾರಿಕಾಂಬೆ ವಿರಾಜಮಾನವಾಗುವ ಬಿಡ್ಕಿ ಬಯಲಿನ ಗದ್ದುಗೆ ಸಿದ್ಧತೆ ಬಿರುಸುಗೊಂಡಿದೆ.
ಪ್ರತಿ ಮನೆಗೆ ಮಾರಿಪಟ್ಟಿ ಕೊಡುವ ದೇವಾಲಯದ ಉಗ್ರಾಣಿಗಳು ಅದರ ಜತೆಯಲ್ಲಿ ಜಾತ್ರಾ ಮಹೋತ್ಸವದ ಕರೆಯೋಲೆ ತಲುಪಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆಯಾ ಸೀಮೆಯ ಮುಖ್ಯಸ್ಥರು ಮನೆಮನೆಗೆ ಆಮಂತ್ರಣ ಪತ್ರಿಕೆ ತಲುಪಿಸುತ್ತಿದ್ದಾರೆ.
‘ಗ್ರಾಮೀಣ ಭಾಗದ ರೈತರು, ಭಕ್ತರ ಮನೆಗಳಿಗೆ ಆಹ್ವಾನ ಪತ್ರಿಕೆ ತಲುಪುತ್ತದೆ. ಪ್ರತಿ ಊರಿಗೆ 200–300 ಆಮಂತ್ರಣ ಪತ್ರಿಕೆ ಕಳುಹಿಸಿದರೆ, ಊರವರೇ ಮುಂದಾಗಿ ಅದನ್ನು ಮನೆಗಳಿಗೆ ತಲುಪಿಸುತ್ತಾರೆ. ಮನೆಯಲ್ಲಿನ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನಿಸುವ ರೀತಿಯಲ್ಲಿಯೇ ಮಾರಿ ಜಾತ್ರೆ ಆಮಂತ್ರಣ ಕೂಡ ನೀಡುವುದು ವಿಶೇಷ’ ಎನ್ನುತ್ತಾರೆ ದೇವಾಲಯ ಧರ್ಮದರ್ಶಿ ಮಂಡಳದ ಉಪಾಧ್ಯಕ್ಷ ಸುಧೇಶ ಜೋಗಳೇಕರ್.
‘ದೇವಾಲಯದ ವತಿಯಿಂದ 10 ಸಾವಿರಕ್ಕೂ ಹೆಚ್ಚಿನ ಭಕ್ತರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆ ರವಾನಿಸಲಾಗುತ್ತಿದೆ. ನಗರವಾಸಿಗಳು ಅವರ ಸಂಬಂಧಿಗಳಿಗೆ ಪತ್ರ ಬರೆದು ಜಾತ್ರೆಗೆ ಕರೆಯುವ ಬದಲಾಗಿ, ದೇವಾಲಯದ ಆಮಂತ್ರಣ ಪತ್ರಿಕೆಯನ್ನೇ ಅಂಚೆಯಲ್ಲಿ ಕಳುಹಿಸುತ್ತಾರೆ’ ಎನ್ನುತ್ತಾರೆ ಅವರು.
‘ಈ ಬಾರಿ 70 ಸಾವಿರದಷ್ಟು ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ. ಒಂಬತ್ತು ದಿನಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ’ ಎಂದು ಮಂಡಳಿ ಸದಸ್ಯೆ ವತ್ಸಲಾ ಹೆಗಡೆ ಹೇಳಿದರು.ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. ಸಂಭ್ರಮದಿಂದ ಈ ಉತ್ಸವಾಚರಣೆಗೆ ಕರೆಯೋಲೆ ನೀಡಲಾಗುತ್ತಿದೆ. ಆರ್.ಜಿ.ನಾಯ್ಕ ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ
ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. ಸಂಭ್ರಮದಿಂದ ಈ ಉತ್ಸವಾಚರಣೆಗೆ ಕರೆಯೋಲೆ ನೀಡಲಾಗುತ್ತಿದೆ.ಆರ್.ಜಿ.ನಾಯ್ಕ ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.