ADVERTISEMENT

ಭಕ್ತಾದಿಗಳ ಸೌಕರ್ಯದಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ: ಶಾಸಕ ಭೀಮಣ್ಣ ನಾಯ್ಕ

ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:34 IST
Last Updated 22 ಫೆಬ್ರುವರಿ 2026, 2:34 IST
ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆ ನಡೆಯುತ್ತಿರುವ ಕಾಮಗಾರಿಗಳನ್ನು ಶಾಸಕ ಭೀಮಣ್ಣ ನಾಯ್ಕ ವೀಕ್ಷಿಸಿದರು.
ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆ ನಡೆಯುತ್ತಿರುವ ಕಾಮಗಾರಿಗಳನ್ನು ಶಾಸಕ ಭೀಮಣ್ಣ ನಾಯ್ಕ ವೀಕ್ಷಿಸಿದರು.   

ಶಿರಸಿ: ‘ಎರಡು ವರ್ಷಗಳಿಗೊಮ್ಮೆ ಜರುಗುವ ಮಾರಿಕಾಂಬಾ ದೇವಿ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯದ ಜತೆ ಆರೋಗ್ಯ ಸುರಕ್ಷೆ, ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಮುಂಜಾಗ್ರತೆ ತೆಗೆದುಕೊಳ್ಳಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು. 

ಶನಿವಾರ ಅವರು ನಗರದ ಮೂಲಭೂತ ಸೌಕರ್ಯ ಹಾಗೂ ಸಾರ್ವಜನಿಕ ಸೇವೆ ವೀಕ್ಷಿಸಿ ನಂತರ ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು. ನಗರದ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ರಾತ್ರಿಯ ವೇಳೆ ಭಕ್ತರ ಓಡಾಟಕ್ಕೆ ತೊಂದರೆಯಾಗದಂತೆ ಬೀದಿ ದೀಪಗಳ ನಿರ್ವಹಣೆಯನ್ನು ಚುರುಕುಗೊಳಿಸಬೇಕು’ ಎಂದು ಹೇಳಿದರು.

‘ಭಕ್ತರ ಆರೋಗ್ಯ ದೃಷ್ಟಿಯಿಂದ ಪ್ರಮುಖ ಸ್ಥಳಗಳಲ್ಲಿ ತುರ್ತು ಆರೋಗ್ಯ ವ್ಯವಸ್ಥೆ ಮತ್ತು ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಬೇಕು. ಅಷ್ಟೇ ಅಲ್ಲದೆ, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ರೂಪಿಸಿ, ಜನರಿಗೆ ಯಾವುದೇ ಕಿರಿಕಿರಿ ಉಂಟಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ಜಾತ್ರೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಯಶಸ್ವಿಯಾಗಿ ನಡೆಸಬೇಕು’ ಎಂದರು.

ADVERTISEMENT

ಇದೇ ವೇಳೆ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಅಲ್ಲಿನ ಆಹಾರದ ರುಚಿ ಮತ್ತು ಶುಚಿತ್ವವನ್ನು ಖುದ್ದಾಗಿ ಪರಿಶೀಲಿಸಿದರು. ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದ ಅವರು,‘ಬಡವರಿಗೆ ಮತ್ತು ಜನಸಾಮಾನ್ಯರಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ದೊರೆಯುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು. ಪ್ರಸ್ತುತ ಕ್ಯಾಂಟೀನ್ ನಿರ್ವಹಣೆ ತೃಪ್ತಿದಾಯಕವಾಗಿದ್ದು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರ ಪ್ರಯೋಜನ ಪಡೆಯಬೇಕು’ ಎಂದರು.

ಶಿರಸಿ ನಗರದ ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ನಾಗರಿಕರು ಕೈಜೋಡಿಸಿ ಈ ಬಾರಿಯ ಜಾತ್ರೆಯನ್ನು ಯಶಸ್ವಿಗೊಳಿಸಬೇಕು.
- ಭೀಮಣ್ಣ ನಾಯ್ಕ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.