ADVERTISEMENT

ನೆಗ್ಗು ಗ್ರಾಮ ಪಂಚಾಯಿತಿಯಲ್ಲಿ ತಗ್ಗದ ಸಮಸ್ಯೆ

ರಾಜೇಂದ್ರ ಹೆಗಡೆ
Published 24 ಜುಲೈ 2024, 5:29 IST
Last Updated 24 ಜುಲೈ 2024, 5:29 IST
ಶಿರಸಿ ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಘನಾಶಿನಿ ನದಿ ಪ್ರವಾಹ ಹೆಚ್ಚಿದಾಗ ಸರ್ಕುಳಿ ಸೇತುವೆ ಜಲಾವೃತವಾಗುವ ಜತೆ ಈಚಲಬೆಟ್ಟ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತವಾಗುತ್ತದೆ
ಶಿರಸಿ ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಘನಾಶಿನಿ ನದಿ ಪ್ರವಾಹ ಹೆಚ್ಚಿದಾಗ ಸರ್ಕುಳಿ ಸೇತುವೆ ಜಲಾವೃತವಾಗುವ ಜತೆ ಈಚಲಬೆಟ್ಟ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತವಾಗುತ್ತದೆ   

ಶಿರಸಿ: ಸರ್ವಋತು ರಸ್ತೆಯಿಲ್ಲದೇ ಓಡಾಡಲು ಪರದಾಡುವ ವಾಹನ ಸವಾರರು, ಬಯಲು ಶೌಚಕ್ಕೆ ಹೋಗುವ ಜನರು, ಮೊಬೈಲ್ ಸಂಪರ್ಕಕ್ಕಾಗಿ ಕಿ.ಮೀ. ದೂರ ಸಂಚರಿಸುವ ನಾಗರಿಕರು, ಮಳೆಗಾಲದಲ್ಲಿ ಕಡಿತವಾಗುವ ರಸ್ತೆ ಸಂಪರ್ಕ ಇಂಥ ಹಲವು ಸಮಸ್ಯೆಗಳು ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಹಲವು ಗ್ರಾಮಗಳಲ್ಲಿ ಇಂದಿಗೂ ಜೀವಂತವಾಗಿವೆ.

ನೆಗ್ಗು ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಿದ್ದು, ಬಹುತೇಕ ಗ್ರಾಮಗಳಿಗೆ ಸಂಪರ್ಕಕ್ಕೆ ಇಂದಿಗೂ ಕಚ್ಚಾ ರಸ್ತೆಯೇ ಆಧಾರ. ‘ನಾಡಗುಳಿ ಗ್ರಾಮಕ್ಕೆ ಕಡಿದಾದ ರಸ್ತೆಯಿದೆ. ಈ ಭಾಗದಲ್ಲಿ ಕಾಡುಪ್ರಾಣಿ ಹಾವಳಿ ವಿಪರೀತ. ರಸ್ತೆ ದುರಸ್ತಿ ಅತ್ಯಗತ್ಯವಾಗಿದೆ. ನೇರಲವಳ್ಳಿ ಗ್ರಾಮದ ದೇವಿಕೈ ಹರಿಜನವಾಡಕ್ಕೆ 2.5 ಕಿ.ಮಿ. ಕಚ್ಚಾರಸ್ತೆಯಿದ್ದು, ವಾಹನ ಓಡಾಡಲು ಆಗದ ಸ್ಥಿತಿಯಿದೆ. ಅಡಿಕೆಕಾಯಿಜಡ್ಡಿ ಗ್ರಾಮ 4 ಕಿ.ಮಿ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೆಗ್ಗರ್ಸಿಮನೆ ಊರಿನವರೆಗೆ ರಸ್ತೆಯೇ ಇಲ್ಲ. ಹೊಸ್ಮನೆ, ಕೊಳಗಿ, ಮರ್ಲಮನೆ ರಸ್ತೆಗಳ ಸ್ಥಿತಿಯೂ ಚಿಂತಾಜನಕವಾಗಿವೆ. ಬೇಸಿಗೆಯಲ್ಲಿ ಅಷ್ಟಾಗಿ ಸಮಸ್ಯೆ ಕಾಡದಿದ್ದರೂ ಮಳೆಗಾಲದ ಆರಂಭದಿಂದ ಈ ಗ್ರಾಮಗಳಿಗೆ ಹೋಗುವುದು ಸವಾಲಿನ ಕಾರ್ಯವಾಗುತ್ತದೆ. ಹೊಂಡಗುಂಡಿಗಳಿಂದ ತುಂಬಿದ ರಸ್ತೆ ಜೀವಾಪಾಯ ತರುವ ಸಾಧ್ಯತೆಯೂ ಇದೆ’ ಎಂಬುದು ಈ ಭಾಗದ ನಾಗರಿಕರು ಆತಂಕ ವ್ಯಕ್ತಪಡಿಸಿದರು. 

‘ಅಘನಾಶಿನಿ ನದಿಯ ಪ್ರವಾಹದಲ್ಲಿ ಸರ್ಕುಳಿ ಸೇತುವೆ ಮುಳುಗಡೆ ಆಗುತ್ತದೆ. ತೀರಾ ತಗ್ಗಿನ ಸೇತುವೆ ಇದಾಗಿದ್ದು, ಹೊಸ ಸೇತುವೆ ನಿರ್ಮಿಸಲು ಮನವಿ ನೀಡಿದರೂ ಪ್ರಯೋಜನ ಆಗಿಲ್ಲ. ಹೀಗಾಗಿ ನದಿ ನೀರು ಹೆಚ್ಚಿದಂತೆ ಈಗಲೂ ಇಲ್ಲಿಯ ಈಚಲಬೆಟ್ಟ ಗ್ರಾಮದ ಸಂಪರ್ಕ ಕಡಿತವಾಗುತ್ತದೆ’ ಎಂಬುದು ಸ್ಥಳಿಕರ ಮಾತು.

ADVERTISEMENT

‘ದೊಡ್ಮನೆ ಭಾಗದಲ್ಲಿ ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಕಾರ್ಯಗತವಾಗಿಲ್ಲ. ಇದರಿಂದ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗುತ್ತದೆ. ಹೆಗ್ಗರ್ಸಿಮನೆಯಲ್ಲಿ ತೆರೆದ ಬಾವಿ ನಿರ್ಮಿಸುವಂತೆ ಮನವಿ ಮಾಡಿದರೂ ಈವರೆಗೆ ನಿರ್ಮಾಣ ಕಾರ್ಯವಾಗಿಲ್ಲ. ಮುಳಖಂಡದಲ್ಲಿ ಹಲವು ಜನರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಸ್ಪಂದನೆಯಿಲ್ಲ. ಕೊಳಗಿಬೀಸ್ ಭಾಗದಲ್ಲಿ ಗಟಾರಗಳ ನಿರ್ವಹಣೆ ಆಗುತ್ತಿಲ್ಲ. ಬಹುತೇಕ ಬೀದಿ ದೀಪಗಳಿಗೆ ಬಲ್ಬ್ ವ್ಯವಸ್ಥೆ ಮಾಡಿಲ್ಲ. ನೇರ್ಲವಳ್ಳಿ ಗ್ರಾಮ ಮೊಬೈಲ್ ಸಂಪರ್ಕ ರಹಿತ ಗ್ರಾಮವಾಗಿದ್ದು, ಈಗಾಗಲೇ ಬಿಎಸ್ಎನ್ಎಲ್ ಟವರ್ ಮಂಜೂರಾಗಿದ್ದರೂ ಇದುವರೆಗೂ ಯಾವುದೇ ಕಾಮಗಾರಿ ಆಗಿಲ್ಲ. ಮಳೆಗಾಲದ ತುರ್ತು ಸ್ಥಿತಿಯಲ್ಲಿ ಗ್ರಾಮಸ್ಥರು ನಿತ್ಯವೂ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಪಂಚಾಯಿತಿ ವ್ಯಾಪ್ತಿಯ ವಿವಿಧ ಭಾಗದ ನಾಗರಿಕರು ದೂರಿದರು.

‘ಮಳಲಿ ಭಾಗದಲ್ಲಿ 50ಕ್ಕೂ ಹೆಚ್ಚು ಶೌಚಾಲಯಗಳ ಬೇಡಿಕೆಯಿದೆ. ಹೀಗಾಗಿ ಇಂದಿಗೂ ಬಯಲು ಶೌಚ ವ್ಯವಸ್ಥೆ ಜೀವಂತವಾಗಿದೆ. ದಶಕಗಳ ಹಿಂದೆ ಸರ್ಕಾರ ನೀಡಿದ್ದ ಶೌಚಾಲಯಗಳು ಶಿಥಿಲಗೊಂಡಿವೆ. ಆದರೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡವರಿಗೆ ಪಂಚಾಯಿತಿ ವತಿಯಿಂದ ಶೌಚಾಲಯ ನೀಡುತ್ತಿಲ್ಲ’ ಎಂದು ಮಳಲಿ ಗ್ರಾಮಸ್ಥರೊಬ್ಬರು ದೂರಿದರು.

ಪಿಡಿಒ ಹಾಗೂ ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆ ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ಹೊರಬೇಕು. ನಾಗರಿಕರ ಬೇಡಿಕೆ ಈಡೇರಿಸಲು ಇಚ್ಛಾಶಕ್ತಿ ತೋರಿಸಬೇಕು.
ಮಂಜುನಾಥ ಸಪ್ಪುರ್ತಿ, ಗ್ರಾಮಸ್ಥ
ಸದ್ಯ ಪಂಚಾಯಿತಿಯಲ್ಲಿ ಅನುದಾನದ ಕೊರತೆಯಿದೆ. ಹೀಗಾಗಿ ಮೂಲ ಸೌಕರ್ಯ ಕಲ್ಪಿಸಲು ಹಿನ್ನಡೆಯಾಗಿದೆ. ಅನುದಾನ ಬಿಡುಗಡೆಯ ನಂತರ ನಾಗರಿಕರ ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದು.
ಲಾಜರ್ ರೆಬೆಲ್ಲೊ, ಅಧ್ಯಕ್ಷ, ನೆಗ್ಗು ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.