ಶಿರಸಿ: ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉತ್ತಮ ಸೇವೆ ಲಭಿಸಬೇಕೆಂಬ ಉದ್ದೇಶದಿಂದ ವಿಕೇಂದ್ರೀಕರಣ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ಹುದ್ದೆಗಳು ಖಾಲಿಯಿವೆ. ಇದರಿಂದ ಸಾರ್ವಜನಿಕರ ಕೆಲಸಕ್ಕೆ ಹಿನ್ನಡೆಯಾಗುತ್ತಿದ್ದು, ಜನರು ಪಂಚಾಯಿತಿ ಕಾರ್ಯಾಲಯಕ್ಕೆ ಅಲೆದು ಸುಸ್ತಾಗುವ ಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳು ಸಮರ್ಪಕವಾಗಿ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಂಡರೆ ಮಾತ್ರ ಅದು ಸಾರ್ವಜನಿಕರಿಗೆ ತಲುಪುತ್ತವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸೇವೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಪಾತ್ರ ಮಹತ್ತರವಾಗಿದೆ. ಆದರೆ, ಇಂತಹ ಜವಾಬ್ದಾರಿಯುಳ್ಳ ಹುದ್ದೆಗಳೇ ಖಾಲಿಯಾಗಿದ್ದರೆ, ಗ್ರಾಮಾಡಳಿತದ ಗತಿಯೇನು ಎಂಬ ಪ್ರಶ್ನೆ ಮೂಡಿದೆ.
ಶಿರಸಿ ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿಗಳು, ಡಾಡಾ ಎಂಟ್ರಿ, ಬಿಲ್ ಕಲೆಕ್ಟರ್ ಹಾಗೂ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಬಹುದಿನಗಳಿಂದ ಖಾಲಿ ಉಳಿದಿದ್ದು, ಸ್ಥಳೀಯ ಆಡಳಿತ ವ್ಯವಸ್ಥೆ ಹಳಿ ತಪ್ಪಲು ಕಾರಣವಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ಲಭ್ಯವಿಲ್ಲದ ಕಾರಣ ಜನಪ್ರತಿನಿಧಿಗಳು ಜನರ ಕೈಯಲ್ಲಿ ಹಿಡಿಶಾಪ ಹಾಕಿಸಿಕೊಳ್ಳುವ ಸ್ಥಿತಿ ಎದುರಾಗಿದೆ.
ಜಾನ್ಮನೆ, ಬಿಲಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್, ಬದನಗೋಡ, ಬಂಕನಾಳ, ಭೈರುಂಬೆ, ಬಿಸಲಕೊಪ್ಪ, ಯಡಳ್ಳಿ ಗ್ರಾಪಂನಲ್ಲಿ ಡಾಡಾ ಎಂಟ್ರಿ ಹುದ್ದೆ, ಬಾಶಿ, ಕುಳವೆ, ಮೇಲಿನ ಓಣಿಕೇರಿ, ವಾನಳ್ಳಿ ಗ್ರಾಪಂನಲ್ಲಿ ಪಿಡಿಒ, ಸುಗಾವಿ ಗ್ರಾಪಂನಲ್ಲಿ ಗ್ರೇಡ್-೧ ಕಾರ್ಯದರ್ಶಿ, ಅಂಡಗಿ, ಬಂಡಲ, ಬಾಶಿ, ಗುಡ್ನಾಪುರ, ಹುತಗಾರ, ಇಟಗುಳಿ, ಸದಾಶಿವಳ್ಳಿ, ಉಂಚಳ್ಳಿ ಗ್ರಾಪಂಗಳಲ್ಲಿ ಗ್ರೇಡ್-೨ ಕಾರ್ಯದರ್ಶಿಗಳ ಹುದ್ದೆ ಖಾಲಿ ಇದೆ.
‘ಸ್ಥಳೀಯ ಸರ್ಕಾರ ಎಂದು ಕರೆಯುವ ಗ್ರಾಮ ಪಂಚಾಯಿತಿಗಳಿಗೆ ನಿತ್ಯ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಆಗಮಿಸುತ್ತಾರೆ. ಮನೆ ನಿರ್ಮಾಣದಿಂದ ಹಿಡಿದು ಪ್ರತಿಯೊಂದಕ್ಕೂ ಅನುಮತಿ ಕಡ್ಡಾಯವಾಗಿದೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಇಲ್ಲದೇ ‘ನಾಳೆ ಬನ್ನಿ, ಪಿಡಿಒ ಸಭೆಗೆ ತೆರಳಿದ್ದಾರೆ, ಇತ್ಯಾದಿ ಮಾತು ಮಾಮೂಲಾಗಿದೆ. ಗ್ರಾಮ ಪಂಚಾಯಿತಿಗಳ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ನಿರ್ಣಯಿಸಲು ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಜತೆ ಪಿಡಿಒಗಳು ಅತ್ಯಗತ್ಯ. ಒಂದೂವರೆ ವರ್ಷದಿಂದ ಪಂಚಾಯಿತಿಯಲ್ಲಿ ಹಲವು ಸಿಬ್ಬಂದಿ ಹುದ್ದೆ ಖಾಲಿ ಇದೆ, ಇದರ ಬಗ್ಗೆ ಹಿರಿಯ ಅಧಿಕಾರಿಗಳು ಇದುವರೆಗೂ ಗಮನ ಹರಿಸಿಲ್ಲ. ಶೀಘ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎನ್ನುತ್ತಾರೆ ಭೈರುಂಬೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ಹೆಗಡೆ.
ಮನವಿ ಸಲ್ಲಿಕೆ
ತಾಲ್ಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿಯಲ್ಲಿ ಒಂದೂವರೆ ವರ್ಷದಿಂದ ಎಸ್‌ಡಿಎ ಅಟೆಂಡರ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಖಾಲಿ ಇದ್ದು ಕೇವಲ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್ ಕಲೆಕ್ಟರ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿಗಳಿಗೆ ಇ-ಮೇಲ್ ಮಾಡುವುದು ವಿವಿಧ ಕೆಲಸಗಳು ಸಾರ್ವಜನಿಕ ಕೆಲಸಗಳಿಗೆ ಹಿನ್ನೆಡೆಯಾಗುತ್ತಿದೆ. ಸದಸ್ಯರಾದ ಪ್ರಕಾಶ ಹೆಗಡೆ ಕಿರಣ್ ಭಟ್ ನಾಗಪ್ಪ ಪಟಗಾರ ತಾಲ್ಲೂಕು ಪಂಚಾಯಿತಿ ಇಒ ಮತ್ತು ಶಾಸಕ ಭೀಮಣ್ಣ ನಾಯ್ಕ ಅವರನ್ನು ಭೇಟಿಯಾಗಿ ಕಾಯಂ ಸಿಬ್ಬಂದಿ ನೇಮಕಾತಿ ಕುರಿತು ಮನವಿ ಸಲ್ಲಿಸಿದ್ದಾರೆ.
ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳಲ್ಲಿ ಡಾಡಾ ಎಂಟ್ರಿ ಹುದ್ದೆ ಖಾಲಿ ಇದೆ. ಬಿಲ್ ಕಲೆಕ್ಟರ್ ಆ ಹುದ್ದೆ ನಿರ್ವಹಿಸುತ್ತಿದ್ದಾರೆ. ನಾಲ್ಕು ಕಡೆ ಪಿಡಿಒ ಹುದ್ದೆ ಪ್ರಭಾರಿಯಾಗಿ ನಡೆಯುತ್ತಿದೆ– ಚನ್ನಬಸಪ್ಪ ಹಾವಣಗಿ, ತಾಲ್ಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.