ADVERTISEMENT

ಉತ್ತರ ಕನ್ನಡ: ನದಿ ತಿರುವು ಯೋಜನೆಗಳನ್ನು ಕೈಬಿಡಲು ಬೃಹತ್ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 12:53 IST
Last Updated 11 ಜನವರಿ 2026, 12:53 IST
   

ಶಿರಸಿ: ‘ಉತ್ತರ ಕನ್ನಡದಲ್ಲಿ ನದಿ ತಿರುವು ಯೋಜನೆ ಕೈಬಿಡಬೇಕು. ಮಾನವ
ಹಕ್ಕು ಕಾಯ್ದೆ ಜಾರಿಗೆ ತಂದ ಮಾದರಿಯಲ್ಲಿ ನದಿಗಳಿಗೂ ಜೀವಿಸುವ ಹಕ್ಕು ಹಾಗೂ ನೈಸರ್ಗಿಕ ಹರಿವು ಉಳಿಸಿಕೊಳ್ಳುವ ಹಕ್ಕು ನೀಡುವ ಕಾನೂನು ಜಾರಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು’ ಎಂದು ನದಿ ತಿರುವು ಯೋಜನೆ ವಿರೋಧಿಸಿ ಶಿರಸಿಯಲ್ಲಿ ಭಾನುವಾರ ಆಯೋಜಿಸಿದ್ದ ಜನ ಸಮಾವೇಶದಲ್ಲಿ ಆಗ್ರಹಿಸಲಾಯಿತು. 

ಪಶ್ಚಿಮಘಟ್ಟದ ಜೀವನಾಡಿಗಳಾದ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಕೈಬಿಡಲು ಆಗ್ರಹಿಸಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಿತು.

‘ನದಿ ಜೋಡಣೆ ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ರಾಜ್ಯ ಸರ್ಕಾರ ನೀಡಿರುವ ಒಪ್ಪಿಗೆ ಹಿಂಪಡೆಯಬೇಕು. ನದಿ ತಿರುವು ಯೋಜನೆ, ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆ ಸೇರಿ ಬೃಹತ್ ಯೋಜನೆಗಳನ್ನು ಜಾರಿ ಮಾಡಬಾರದು' ಎಂದು ಸಮಾವೇಶದಲ್ಲಿ ಹಕ್ಕೊತ್ತಾಯ ಮಾಡಲಾಯಿತು.

ADVERTISEMENT

‘ನದಿ ತಿರುವು ಯೋಜನೆಗಳು ಸೂಕ್ಷ್ಮ ಪಶ್ಚಿಮ ಘಟ್ಟದ ಮಡಿಲಿಗೆ ಬೇಡ, ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಈಗಾಗಲೇ ಮುಗಿದಿದೆ ಎಂದು ಶಿರಸಿ ಮತ್ತು ಬೆಂಗಳೂರಿನಲ್ಲಿ ವಿಜ್ಞಾನಿಗಳು, ನೀರಾವರಿ ತಜ್ಞರು ಸಭೆ ನಡೆಸಿ ವರದಿ ನೀಡಿದ್ದಾರೆ.  ಜನಾಭಿಪ್ರಾಯ ಪರಿಗಣಿಸಿ ನದಿ ತಿರುವು ಯೋಜನೆಗಳನ್ನು ಸರ್ಕಾರ ಶಾಶ್ವತವಾಗಿ ಕೈ ಬಿಡಬೇಕು' ಎಂದು ಒತ್ತಾಯಿಸಲಾಯಿತು.

‘ಮುಖ್ಯಮಂತ್ರಿ ಅವರನ್ನು ಈ ಹಿಂದೆ ಭೇಟಿ ಮಾಡಿದ್ದ ಸಂದರ್ಭದಲ್ಲಿ, ನೀರಾವರಿ ಇಲಾಖೆ ತಜ್ಞರು, ಉನ್ನತ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ಬೇಡ್ತಿ– ಅಘನಾಶಿನಿ ಕೊಳ್ಳಿ ಸಂರಕ್ಷಣಾ ಸಮಿತಿಯ ಪ್ರಮುಖರ ಸಭೆ ಏರ್ಪಡಿಸುವ ಆಶ್ವಾಸನೆ ನೀಡಿದ್ದರು. ಅದರಂತೆ ಈ ಸಭೆಯ ದಿನಾಂಕ ಆದಷ್ಟು ಬೇಗ ನಿಗದಿಪಡಿಸಬೇಕು’ ಎಂದು ಬೇಡ್ತಿ-ಅಘನಾಶಿಸಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಎಂದು ಆಗ್ರಹಿಸಿದರು

‘ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನಿಯೋಗ ಕೇಂದ್ರ ಪರಿಸರ-ಅರಣ್ಯ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಲು ಉತ್ತರ ಕನ್ನಡ ಜಿಲ್ಲೆಯ ಸಂಸದರು ಹಾಗೂ ಎಲ್ಲ ಶಾಸಕರು ಶೀಘ್ರ ದಿನಾಂಕ ನಿಗದಿಪಡಿಸಬೇಕು. ಬೇಡ್ತಿ-ಅಘನಾಶಿನಿ ಕಣಿವೆಗಳಲ್ಲಿ ನದಿ ತಿರುವು ಯೋಜನೆಗಳ ಸ್ಥಳ ಸಮೀಕ್ಷೆಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು' ಎಂದು ಆಗ್ರಹಿಸಿದರು.

ಸಮುದ್ರಕ್ಕೆ ​ನದಿ ನೀರು ಸೇರುವುದು ವ್ಯರ್ಥ ಎಂದು ಬಿಂಬಿಸಿ ನದಿ ತಿರುವು ಯೋಜನೆಗಳನ್ನು ಜಾರಿಗೆ ತರಲು ಹೊರಟಿರುವುದು ಅತ್ಯಂತ ಮೂರ್ಖತನದ ನಿರ್ಧಾರ
ಬಿ.ಎಂ.ಕುಮಾರಸ್ವಾಮಿ ಪರಿಸರ ತಜ್ಞ
ದೇಶದಲ್ಲಿ ಹಲವು ನದಿ ತಿರುವು ಯೋಜನೆಗಳಿವೆ ನಾವು ಅವುಗಳನ್ನೆಲ್ಲ ವಿರೋಧಿಸುತ್ತಿಲ್ಲ. ಆದರೆ ಪಶ್ಚಿಮ ಘಟ್ಟದ ಅಸ್ತಿತ್ವಕ್ಕೆ ಧಕ್ಕೆ ತರುವ ಯೋಜನೆಗಳಿಗೆ ನಮ್ಮ ವಿರೋಧವಿದೆ
ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠ

‘ಬೇಡ್ತಿ-ಅಘನಾಶಿನಿ ನದಿ ತೀರ ಪ್ರದೇಶದ ಜನರಿಗೆ ಅತಿ ಅವಶ್ಯವಾದ ನೀರಾವರಿ ವ್ಯವಸ್ಥೆ ಕಲ್ಪಿಸಲು ವಿಶೇಷ ಜನಸಹಭಾಗಿತ್ವದ ಕಿರು ನೀರಾವರಿ ಯೋಜನೆ ಪ್ರಕಟಿಸಬೇಕು’ ಎಂದು ನಿರ್ಣಯ ಕೈಗೊಳ್ಳಲಾಯಿತು.

ಈ ವೇಳೆ ನೆಲಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಸ್ವಾದಿ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.