ADVERTISEMENT

ಶಿರಸಿ| ರಸ್ತೆ ಅಭಿವೃದ್ಧಿಯ ಗುಣಮಟ್ಟದಲ್ಲಿ ರಾಜಿ ಇಲ್ಲ: ಶಾಸಕ ಭೀಮಣ್ಣ ನಾಯ್ಕ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:00 IST
Last Updated 15 ನವೆಂಬರ್ 2025, 5:00 IST
ಶಿರಸಿ ನಗರದ ವರದ ವಿನಾಯಕ ದೇವಾಲಯದ ಬಳಿಯಿಂದ ಹುಬ್ಬಳ್ಳಿ ರಸ್ತೆ ಚಿಪಗಿ ಸರ್ಕಲ್‍ವರೆಗೆ ₹80 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಭೀಮಣ್ಣ ಭೂಮಿ ಪೂಜೆ ನೆರವೇರಿಸಿದರು
ಶಿರಸಿ ನಗರದ ವರದ ವಿನಾಯಕ ದೇವಾಲಯದ ಬಳಿಯಿಂದ ಹುಬ್ಬಳ್ಳಿ ರಸ್ತೆ ಚಿಪಗಿ ಸರ್ಕಲ್‍ವರೆಗೆ ₹80 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಭೀಮಣ್ಣ ಭೂಮಿ ಪೂಜೆ ನೆರವೇರಿಸಿದರು   

ಶಿರಸಿ: ಅತಿಯಾದ ಮಳೆಯ ಕಾರಣದಿಂದ ರಸ್ತೆಗಳು ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿತ್ತು. ಪ್ರಸ್ತುತ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. 

ಇಲ್ಲಿನ ವರದ ವಿನಾಯಕ ದೇವಾಲಯದ ಬಳಿಯಿಂದ ಹುಬ್ಬಳ್ಳಿ ರಸ್ತೆ ಚಿಪಗಿ ಸರ್ಕಲ್‍ವರೆಗೆ ₹80 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಆರು ತಿಂಗಳು ಮಳೆಯಾದ ಕಾರಣ ರಸ್ತೆಗಳೆಲ್ಲ ಹದಗೆಟ್ಟಿವೆ. ಎಲ್ಲ ರಸ್ತೆಗಳು ಹಾಳಾಗಿ ಓಡಾಡಲು ಕಷ್ಟವಾಗಿದೆ. ಮಳೆ ನಿಂತಿರುವ ಕಾರಣ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಗುಂಡಿ ಮುಚ್ಚುವ ಕಾರ್ಯ ಮಾಡುವಂತೆ ಸೂಚಿಸಲಾಗಿದ್ದು, ಕಾರ್ಯ ಆರಂಭವಾಗಿದೆ. ಮರು ಡಾಂಬರೀಕರಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ’ ಎಂದರು. 

ADVERTISEMENT

‘ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಇಲ್ಲ. ಉತ್ತಮ ಕೆಲಸ ಆಗಬೇಕು ಎಂದು ಸಂಬಂಧಪಟ್ಟ ಗುತ್ತಿಗೆದಾರರು, ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ’ ಎಂದ ಅವರು, ‘ಗ್ರಾಮೀಣ ಭಾಗದಲ್ಲಿ ಹತ್ತಾರು ಕೋಟಿ ರೂಪಾಯಿಗಳ ಕಾಮಗಾರಿ ಆಗಬೇಕಿದೆ. ಇಷ್ಟು ದಿನ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಇನ್ನು ಹಾಗಾಗದಂತೆ ಕ್ರಮವಹಿಸಲಾಗುವುದು. ಆದಷ್ಟು ಬೇಗ ಸಂಚಾರ ಯೋಗ್ಯ ರಸ್ತೆಗಳನ್ನಾಗಿ ಮಾಡಲಾಗುವುದು’ ಎಂದರು. 

‘ಶಿರಸಿ ಮಲೆನಾಡ ಭಾಗವಾದ ಕಾರಣ ಮಳೆ ಹೆಚ್ಚು, ರಸ್ತೆ ಹಾಳಾದ ಕಾರಣ ಬಸ್‍ಗಳು ಹಾಳಾಗುವ ಪ್ರಮಾಣವೂ ಹೆಚ್ಚಿದೆ. ಶಾಲಾ ಮಕ್ಕಳಿಗೆ ಬಸ್ ಸಮಸ್ಯೆ ಆಗುತ್ತಿದೆ ಎಂಬ ದೂರು ಪಾಲಕರಿಂದ ಬರುತ್ತಿದೆ. ಕಾರಣ ಹೆಚ್ಚುವರಿ ಬಸ್ ನೀಡುವಂತೆ ಕೋರಲಾಗಿತ್ತು. ಆ ಪ್ರಕಾರ ಸಾರಿಗೆ ಸಚಿವರು ಬಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಒಂದೆರಡು ತಿಂಗಳಲ್ಲಿ ಹೆಚ್ಚುವರಿ ಬಸ್ ರಸ್ತೆಗಿಳಿಯಲಿವೆ’ ಎಂದು ಹೇಳಿದ ಅವರು, ‘ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವೇಗ ನೀಡುವಂತೆ ಗುತ್ತಿಗೆದಾರರು, ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಗುತ್ತಿ ಕಂಪನಿ ಬಳಿ ರಸ್ತೆ ನಿರ್ಮಾಣ ಕಾಮಗಾರಿಯ ಯಂತ್ರೋಪಕರಣಗಳ ಕೊರತೆ ಎದ್ದು ಕಾಣುತ್ತಿದ್ದು, ಇದೇ ರೀತಿ ನಡೆದರೆ ವರ್ಷಗಳೇ ಬೇಕಾಗುತ್ತವೆ. ಹಾಗಾಗಿ ಇನ್ನಷ್ಟು ವೇಗ ನೀಡಲು ಸಂಸದರು, ಜಿಲ್ಲಾಡಳಿತ ಸೂಚಿಸುವ ಅಗತ್ಯವಿದೆ’ ಎಂದರು. 

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಎಸ್.ಕೆ.ಭಾಗವತ, ಗಣೇಶ ದಾವಣಗೆರೆ, ದೀಪಕ ದೊಡ್ಡೂರು, ಜ್ಯೋತಿ ಪಾಟೀಲ, ಸುಭಾಷ ನಾಯ್ಕ ಇದ್ದರು.

ಅತಿವೃಷ್ಟಿಯ ಕಾರಣಕ್ಕೆ ಮಣ್ಣಿನ ಗೋಡೆಗಳ ಶಾಲೆಗಳ ಜತೆ ಕೆಲವು ಹಳೆಯ ಶಾಲೆಗಳು ಶಿಥಿಲವಾದ ಬಗ್ಗೆ ದೂರು ಬಂದಿವೆ. ಈಗಾಗಲೇ ಸಾಕಷ್ಟು ಶಾಲೆಗಳ ದುರಸ್ತಿ ಮಾಡಲಾಗಿದೆ. ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು
ಭೀಮಣ್ಣ ನಾಯ್ಕ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.