ಶಿರಸಿ: 2025–26ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಶೈಕ್ಷಣಿಕ ಜಿಲ್ಲೆಯಲ್ಲಿ ಮಕ್ಕಳ ಕೊರತೆ ಕಾರಣಕ್ಕೆ 80 ಶಾಲೆಗಳು ಅತಂತ್ರ ಸ್ಥಿತಿ ಎದುರಿಸುತ್ತಿವೆ. ಐದು ಹಾಗೂ ಅದಕ್ಕಿಂತ ಕಡಿಮೆ ಮಕ್ಕಳಿರುವ ಇಂಥ ಶಾಲೆಗಳನ್ನು ಉಳಿಸಿಕೊಳ್ಳುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಗ್ರಾಮೀಣ ಭಾಗದಲ್ಲಿ ಜನಸಂಖ್ಯೆ ಕುಂಠಿತದ ಜತೆಗೆ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಕೊರತೆ, ಕಾಯಂ ಶಿಕ್ಷಕರು, ವಿಷಯವಾರು ಶಿಕ್ಷಕರ ಕೊರತೆ, ನಗರ ಪ್ರದೇಶಗಳ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದು, ಕೆಲ ಶಾಲೆಗಳು ಮಕ್ಕಳಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ. ಇದು ಗ್ರಾಮೀಣ ಭಾಗದ ಸರ್ಕಾರಿ ಶಾಲೆ ನಂಬಿರುವ ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಶೈಕ್ಷಣಿಕ ಜಿಲ್ಲೆಯು ಶಿರಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಮುಂಡಗೋಡ ಹೊರತುಪಡಿಸಿ ಉಳಿದ ಐದು ತಾಲ್ಲೂಕುಗಳಲ್ಲಿ 5ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಗುರುತಿಸಿದೆ. ಇದರಲ್ಲಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿವೆ. ಹಳಿಯಾಳ 1, ಜೊಯಿಡಾ 27, ಸಿದ್ದಾಪುರ 16, ಶಿರಸಿ 24, ಯಲ್ಲಾಪುರ 12 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ.
ಶೈಕ್ಷಣಿಕ ಜಿಲ್ಲೆಯ ಕುಪ್ಪಳ್ಳಿ, ಕೋಡುಗಲಿ, ಗೌಳಿವಾಡ, ತೆಪ್ಪಾರ, ಕಲ್ಲಳ್ಳಿ, ಹೆಗ್ಗುಂಬ್ಳಿ, ನೇರಲವಳ್ಳಿ ಸೇರಿದಂತೆ ಒಟ್ಟು 80 ಶಾಲೆಗಳಲ್ಲಿ ಮಕ್ಕಳ ಕೊರತೆ ಕಾಡುತ್ತಿದೆ. ಇದು ಒಂದೆಡೆ ಶಿಕ್ಷಣ ಇಲಾಖೆಗೆ ತಲೆನೋವಾದರೆ ಇನ್ನೊಂದೆಡೆ ಶಾಲೆಯಲ್ಲಿ ಒಬ್ಬರು, ಇಬ್ಬರು ವಿದ್ಯಾರ್ಥಿಗಳಿದ್ದರೆ ಹೇಗೆ ಕಲಿಯುತ್ತಾರೆ? ಮಕ್ಕಳ ಒಡನಾಟ ಇರುವುದಿಲ್ಲ. ಗುಂಪು ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು ಇಲ್ಲ. ಶೈಕ್ಷಣಿಕ ವಾತಾವರಣವೇ ಇಲ್ಲ. ಹೀಗಾಗಿ ಬೇರೆ ಶಾಲೆಗೆ ಸೇರಿಸುತ್ತೇವೆ ವರ್ಗಾವಣೆ ಪತ್ರ ನೀಡುವಂತೆ ಪೋಷಕರು ಕಡಿಮೆ ವಿದ್ಯಾರ್ಥಿಗಳು ದಾಖಲಾತಿ ಇರುವ ಸರ್ಕಾರಿ ಶಾಲೆಗಳಿಗೆ ಒತ್ತಡ ಹೇರುತ್ತಿರುವ ಘಟನೆಗಳು ನಡೆಯುತ್ತಿವೆ.
‘10 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಶಿಕ್ಷಕರು ಬೇರೆ ಕೆಲಸಗಳಿಗೆ, ಸಭೆಗಳಿಗೆ ನಿಯೋಜನೆ ಮಾಡಿದರೆ, ವೈಯಕ್ತಿಕ ರಜೆ ಹಾಕಿದರೆ ಮಕ್ಕಳಿಗೆ ರಜವೇ ಗತಿಯಾಗಲಿದೆ. ಆ ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣವೇ ಇರುವುದಿಲ್ಲ’ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
‘ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಗ್ರಾಮೀಣ ಭಾಗದ ಜನ ಉದ್ಯೋಗಕ್ಕೆಂದು ನಗರ ಸೇರಿರುವುರಿಂದ ಹಳ್ಳಿಯಲ್ಲಿ ಜನಸಂಖ್ಯೆ ಸಹ ಕ್ಷೀಣಿಸುತ್ತಿದೆ. ಮಕ್ಕಳ ಕೊರತೆ ಸರ್ಕಾರಿ ಶಾಲೆಗಳನ್ನು ಕಾಡುತ್ತಿದ್ದು, ಪ್ರತಿ ಶೈಕ್ಷಣಿಕ ವರ್ಷದಲ್ಲೂ ಒಂದಿಲ್ಲೊಂದು ಕಡೆಯ ಶಾಲೆಗೆ ಬೀಗ ಹಾಕುವಂತಾಗಿದೆ’ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರ ಮಾತಾಗಿದೆ.
ವಿದ್ಯಾರ್ಥಿಗಳ ಸಮಗ್ರ ಮಾಹಿತಿ ದಾಖಲಿಸುವ ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲಾತಿ ಪೂರ್ಣಗೊಂಡ ಬಳಿಕ ಇಲಾಖೆ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.– ಡಿ.ಆರ್.ನಾಯ್ಕ, ಡಿಡಿಪಿಐ ಶಿರಸಿ ಶೈಕ್ಷಣಿಕ ಜಿಲ್ಲೆ
ವಿಲೀನಕ್ಕೆ ಪಾಲಕರ ಆತಂಕ
ಕಡಿಮೆ ಮಕ್ಕಳಿರುವ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನ ಮಾಡುವ ಚಿಂತನೆ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ. ಈಗಾಗಲೇ ಅತಿ ಕಡಿಮೆ ಮಕ್ಕಳ ದಾಖಲಾತಿಯಿರುವ ಶಾಲೆಗಳಿಂದ 5-7 ಕಿ.ಮೀ ಅಂತರದಲ್ಲಿ ಬೇರೆ ಶಾಲೆಗಳಿದ್ದು ವಿಲೀನ ಮಾಡಿದರೆ ಮೂಲ ಶಾಲೆಯ ಮಕ್ಕಳಿಗೆ ದೂರದಲ್ಲಿರುವುದರಿಂದ ಸಂಚಾರ ಸಮಸ್ಯೆ ಆಗುತ್ತದೆ. ಹಾಗಾದರೆ ಮಕ್ಕಳ ಭವಿಷ್ಯ ಏನು? ನಿತ್ಯವೂ ಕೂಲಿ ಮಾಡಲು ತೆರಳುವ ನಾವು ಮನೆ ಸಮೀಪದ ಶಾಲೆಗೆ ಮಕ್ಕಳನ್ನು ಸೇರಿಸಿದ್ದೆವು. ಶಾಲೆಯೇ ದೂರಾದರೆ ಅಲ್ಲಿ ಕಳುಹಿಸಿ ಕೊಡುವುದೇ ಸವಾಲಿನ ಕಾರ್ಯವಾಗಲಿದೆ ಎಂಬುದು ಬಹುತೇಕ ಪಾಲಕರ ಆತಂಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.