
ಶಿರಸಿ: ರಾಜ್ಯದಲ್ಲಿ ಕಾಂಗ್ರೆಸ್ ಅದಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರ ನಿರಂತರ ಪ್ರಯತ್ನದಿಂದ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ವಿರೋಧ ಪಕ್ಷದವರು ಸುಳ್ಳು ಹರಡುವುದನ್ನು ಬಿಟ್ಟು ಜನಸಾಮಾನ್ಯರ ಕೆಲಸ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ನಗರದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು. ‘ಎರಡೂವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಆದರೆ ವಿರೋಧ ಪಕ್ಷದವರು ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತರೆ. ಕ್ಷೇತ್ರಕ್ಕೆ ಈಗಾಗಲೇ ₹700 ಕೋಟಿ ಗ್ಯಾರಂಟಿ ಯೋಜನೆಗಳ ಹಣ ತಲುಪಿದೆ. ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ, ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ’ ಎಂದರು.
‘ಕೃಷಿ ಪ್ರಧಾನವಾದ ಶಿರಸಿಗೆ ಸುಸಜ್ಜಿತ ಕೃಷಿ ಭವನದ ಅಗತ್ಯವಿತ್ತು. ರೈತರಿಗೂ ಸರ್ಕಾರಕ್ಕೂ ನೇರ ಸಂಪರ್ಕ ಕಲ್ಪಿಸುವ ಈ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಶಾಸಕರ ಕಾರ್ಯ ಅಭಿನಂದನಾರ್ಹ. ಮಂಗನ ಕಾಯಿಲೆ ತಡೆಗೆ ಶಿರಸಿಯಲ್ಲೇ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಹತ್ತು ದಿನಗಳಲ್ಲಿ ತರಬೇತಿ ಪಡೆದ ಸಿಬ್ಬಂದಿ ಕಾರ್ಯಾರಂಭ ಮಾಡಲಿದ್ದಾರೆ. ಜಿಲ್ಲೆಯಲ್ಲೇ ಮಾದರಿಯಾಗಿರುವ ತಾಲ್ಲೂಕು ಪಂಚಾಯಿತಿ ಕಟ್ಟಡದ ಮೊದಲ ಮಹಡಿ ನಿರ್ಮಾಣಕ್ಕೆ ಸರ್ಕಾರದ ಸಹಕಾರ ನೀಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ‘ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜಾತಿ-ಧರ್ಮದ ತಾರತಮ್ಯವಿಲ್ಲದೆ ಅನುದಾನ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಶಿರಸಿ ತಾಲ್ಲೂಕಿಗೆ ₹181 ಕೋಟಿ ನೀಡಲಾಗಿದ್ದು, ಸಿದ್ದಾಪುರ ಹಾಗೂ ನಗರಸಭೆ ವ್ಯಾಪ್ತಿಯಲ್ಲೂ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಮಂಗನ ಕಾಯಿಲೆ ಪರೀಕ್ಷೆಗೆ ಶಿವಮೊಗ್ಗಕ್ಕೆ ಅಲೆಯುವ ಸಂಕಷ್ಟವನ್ನು ತಪ್ಪಿಸಲು ಸ್ಥಳೀಯವಾಗಿಯೇ ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಜಿಲ್ಲಾ ಪಂಚಾಯಿತಿ ಸಿಇಒ ದಿಲೀಶ ಶಶಿ ಇತರರು ಉಪಸ್ಥಿತರಿದ್ದರು.
ಜನರಿಗೆ ಏನು ಬೇಕು ಎಂದು ಕೇಳಿಕೊಂಡು ಭರವಸೆ ಈಡೇರಿಸುವಲ್ಲಿ ಶಾಸಕ ಭೀಮಣ್ಣ ನಾಯ್ಕ ಮುಂದಿದ್ದಾರೆ. ಅಂತಹ ಜನಪರ ಜನಪ್ರತಿನಿಧಿಯನ್ನು ಶಿರಸಿ ಸಿದ್ದಾಪುರದ ಜನರು ವಿಚಾರ ಮಾಡಿ ಆಯ್ಕೆ ಮಾಡಿದ್ದಾರೆ.ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ವಿವಿಧ ಕಾಮಗಾರಿಗಳ ಉದ್ಘಾಟನೆ: ಕೃಷಿ ಇಲಾಖೆಯ ನೂತನ ಕಟ್ಟಡ ಜತೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರ ಮುತವರ್ಜಿಯಿಂದ ಮುಕ್ತಾಯಗೊಂಡಿರುವ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ವಸತಿ ಗೃಹ ಮಂಗನ ಕಾಯಿಲೆ ರಕ್ತ ತಪಾಸಣಾ ಲ್ಯಾಬ್ ಕೃಷಿ ಇಲಾಖೆ ಕಚೇರಿ ತಾಲ್ಲೂಕು ಪಂಚಾಯಿತಿ ನೂತನ ಕಟ್ಟಡ ಮತ್ತು ನಮ್ಮ ಕ್ಲಿನಿಕ್ ಉದ್ಘಾಟನೆ ಮಾಡಲಾಯಿತು. ಇದೇ ವೇಳೆ ಸರ್ಕಾರದ ಸಹಾಯಧನದ ಯಂತ್ರೋಪಕರಣಗಳನ್ನು ಕೃಷಿ ಇಲಾಖೆ ವತಿಯಿಂದ ವಿವಿಧ ಫಲಾನುಭವಿಗಳಿಗೆ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.